Advertisement

ನಿಲ್ದಾಣದಲ್ಲಿ ವಿಮಾನ ನಿರ್ವಹಣೆಗೆ ರೊಬೊಟಿಕ್‌ ಟ್ಯಾಕ್ಸಿ ಬೋಟ್‌

10:15 AM Oct 16, 2019 | sudhir |

ಹೊಸದಿಲ್ಲಿ: ಪ್ರಯಾಣ ಮುಗಿಸಿ ಬಂದ ವಿಮಾನ, ಪ್ರಯಾಣಕ್ಕೆ ಹೊರಡಲು ರನ್‌ವೇಗೆ ತೆರಳುವಾಗ ವಿಮಾನಗಳಲ್ಲಿ ಹೆಚ್ಚು ಇಂಧನ ವ್ಯಯವಾಗುತ್ತದೆ. ಇದನ್ನು ತಪ್ಪಿಸಲು ಮತ್ತು ಹೆಚ್ಚು ಅನುಕೂಲದ ದೃಷ್ಟಿಯಿಂದ ಪೈಲಟ್‌ ನಿರ್ದೇಶಿತ ಮಾದರಿಯ ಸೆಮಿ ರೊಬೊಟಿಕ್‌ ಟ್ಯಾಕ್ಸಿಬೋಟ್‌ ಹೆಸರಿನ ಟ್ರ್ಯಾಕ್ಟರ್‌ ಮಾದರಿಯ ಉಪಕರಣವೊಂದನ್ನು ವಿಶ್ವದಲ್ಲಿ ಇದೇ ಮೊದಲ ಬಾರಿಗೆ ಏರ್‌ ಇಂಡಿಯಾ ಬಳಸಲು ಶುರು ಮಾಡಿದೆ.

Advertisement

ದಿಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟ್ಯಾಕ್ಸಿ ಬೋಟ್‌ ನಿಯುಕ್ತಿಗೊಳಿಸಲಾಗಿದ್ದು, ಇದು ಮೊದಲ ಬಾರಿಗೆ ಏರ್‌ಬಸ್‌ 320 ದಿಲ್ಲಿ – ಮುಂಬಯಿ ಎಐ 665 ವಿಮಾನವನ್ನು ರನ್‌ವೇಗೆ ತಂದು ನಿಲ್ಲಿಸಿತು.

ಸದ್ಯ ಏರ್‌ಬಸ್‌ ವಿಮಾನಗಳಿಗೆ ಮಾತ್ರ ಈ ಸೇವೆ ಲಭ್ಯವಿದ್ದು ವಿಶ್ವದ ಯಾವುದೇ ಕಡೆಯಿಂದ ಬಂದ ಏರ್‌ಬಸ್‌ ವಿಮಾನಗಳು ಬಳಸುವ ಅನುಕೂಲವಿದೆ. ಸದ್ಯ ದಿಲ್ಲಿಯಲ್ಲಿ ಏರ್‌ಬಸ್‌ ವಿಮಾನಗಳಿಗೆ ಮಾತ್ರ ಈ ಅವಕಾಶ ಕಲ್ಪಿಸಲಾಗಿದೆ. ಜತೆಗೆ ನಿಲ್ದಾಣದಿಂದ ರನ್‌ವೇಗೆ ವಿಮಾನ ತಂದು ನಿಲ್ಲಿಸುವ ಕೆಲಸವನ್ನು ಮಾತ್ರ ಇವುಗಳಿಗೆ ವಹಿಸಲಾಗಿದೆ.

ಏನಿದು ಟ್ಯಾಕ್ಸಿ ಬೋಟ್‌?
ಸಾಮಾನ್ಯವಾಗಿ ಬಂದು ನಿಂತ ವಿಮಾನವನ್ನು ತುಸು ಆ ಕಡೆ ಈ ಕಡೆ ತೆಗೆದುಕೊಂಡು ಹೋಗಲು ಟ್ರ್ಯಾಕ್ಟರ್‌ ಬಳಸುತ್ತಾರೆ. ಆದರೆ ಟ್ಯಾಕ್ಸಿ ಬೋಟ್‌ ಹಾಗಲ್ಲ. ಇದು ಸೆಮಿ ರೊಬೊಟಿಕ್‌ ಮಾದರಿಯದ್ದು. ಹೆಚ್ಚು ಸ್ವಯಂಚಾಲಿತವಾಗಿ ಕೆಲಸ ಮಾಡುತ್ತದೆ. ಪೈಲಟ್‌ ಸೂಚನೆ ಮೇರೆಗೆ ವಿಮಾನವನ್ನು ತೆಗೆದುಕೊಂಡು ಹೋಗಿ ಪಾರ್ಕಿಂಗ್‌, ರನ್‌ವೇಗೆ ಕರೆತರುವ ಕೆಲಸವನ್ನು ಮಾಡಬಲ್ಲದು. ವಿಮಾನದ ಎಂಜಿನ್‌ ಸಂಪೂರ್ಣ ಸ್ವಿಚ್‌ ಆಫ್ ಆಗಿದ್ದರೂ ಟ್ಯಾಕ್ಸಿ ಬೋಟ್‌ ಕಾರ್ಯನಿರ್ವಹಿಸುತ್ತದೆ. ಇದರಿಂದ ವಿಮಾನ ಇಳಿದ ಬಳಿಕ ರನ್‌ವೇಗೆ ಹೋಗುವಲ್ಲಿ ಅಥವಾ ರನ್‌ವೇಗೆ ಬರಲು ಬೇಕಾಗುವ ಇಂಧನದ ಶೇ.85ರಷ್ಟು ಉಳಿತಾಯವಾಗುತ್ತದೆ ಅಗಾಧ ಪ್ರಮಾಣದ ವಾಯುಮಾಲಿನ್ಯವೂ ಕಡಿಮೆಯಾಗುತ್ತದೆ. ಟ್ಯಾಕ್ಸಿಬೋಟ್‌ ವಿಮಾನದ ಮುಂದಿನ ಚಕ್ರವನ್ನು ಎತ್ತಿ ತನ್ನಲ್ಲಿ ಇಟ್ಟುಕೊಳ್ಳುತ್ತದೆ. ಈ ವೇಳೆ ಅದು ನಿಯಂತ್ರಣವನ್ನು ಪೈಲಟ್‌ಗೆ ವರ್ಗಾಯಿಸುತ್ತದೆ. ಟ್ಯಾಕ್ಸಿಬೋಟ್‌ನಲ್ಲಿ ವಿಮಾನ ಇರುವ ಸಂದರ್ಭ, ಟ್ರಾಫಿಕ್‌ ಕಂಟ್ರೋಲರ್‌, ವಿಮಾನ ನಿಲ್ದಾಣದ ನಿರ್ವಹಣೆಯವರಿಗೆ ಪೈಲಟ್‌ಗೆ ಸಂದೇಶಗಳನ್ನು ಕಳಿಸುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next