Advertisement

ಸ್ಯಾನಿಟರಿ ನ್ಯಾಪ್ಕಿನ್‌ಗೆ ತೆರಿಗೆ: ಖಂಡನೆ

03:31 PM Jul 08, 2017 | Team Udayavani |

ಕಲಬುರಗಿ: ಮಹಿಳೆಯರು ಬಳಕೆ ಮಾಡುವ ಸ್ಯಾನಿಟರಿ ನ್ಯಾಪ್ಕಿನ್‌ ಐಶಾರಾಮಿ ವಸ್ತುವಲ್ಲ, ಮಹಿಳೆಯರಿಗೆ ಋತುಸ್ರಾವದ ದಿನಗಳಲ್ಲಿ
ಅಗತ್ಯ ಮತ್ತು ಆರೋಗ್ಯಕ್ಕೆ ಪೂಕರವಾದದ್ದು. ಅವುಗಳ ಮೇಲೆ ಕೇಂದ್ರ ಸರಕಾರ ಶೇ. 12ರಷ್ಟು ತೆರಿಗೆ ವಿಧಿಸಿರುವುದನ್ನು ವಿರೋಧಿಸಿ ಶುಕ್ರವಾರ ಮಹಿಳಾಪರ, ಪ್ರಗತಿಪರ ಸಂಘಟನೆಗಳು ಪ್ರತಿಭಟನೆ ಮಾಡಿದವು.

Advertisement

ಪ್ರತಿಭಟನೆ ವೇಳೆ ಕೇಂದ್ರ ಸರಕಾರ ಜಿಎಸ್‌ಟಿ ವ್ಯಾಪ್ತಿಗೆ ಸ್ಯಾನಿಟರಿ ನ್ಯಾಪ್ಕಿನ್‌ ತಂದಿರುವುದು ದುರಾದೃಷ್ಟಕರ ಸಂಗತಿ ಎಂದು ಖಂಡಿಸಿರುವ ಸಂಘಟನೆಗಳ ಮುಖಂಡರು, ಕೂಡಲೇ ಮಹಿಳೆಯರ ಆರೋಗ್ಯದ ದೃಷ್ಟಿಯಿಂದ ಸ್ಯಾನಿಟರಿ ನ್ಯಾಪ್ಕಿನ್‌ ಉಚಿತವಾಗಿ ನೀಡಬೇಕು ಎಂದು ಆಗ್ರಹಿಸಿ ಕೇಂದ್ರ ಹಣಕಾಸು ಸಚಿವ ಅರುಣ ಜೇಟ್ಲಿ ಅವರಿಗೆ ಮನವಿ ಪತ್ರವನ್ನು ಜಿಲ್ಲಾಧಿಕಾರಿ ಮೂಲಕ
ಸಲ್ಲಿಸಿದರು.

ಈ ವೇಳೆ ಮಾತನಾಡಿದ ಜನವಾದಿ ಸಂಘಟನೆಯ ರಾಜ್ಯ ಉಪಾಧ್ಯಕ್ಷೆ ನೀಲಾ ಕೆ, ಕಾರ್ಯದರ್ಶಿ ನಂದಾದೇವಿ ಮಂಗೊಂಡಿ, ಪ್ರಜ್ಞಾ
ಕಾನೂನು ಸಲಹಾ ಸಮಿತಿ ಅಧ್ಯಕ್ಷೆ ಡಾ| ಮೀನಾಕ್ಷಿ ಬಾಳಿ, ಕೇಂದ್ರ ಸರಕಾರದ ಈ ಕ್ರಮ ಜನವಿರೋಧಿ, ಮಹಿಳಾ ವಿರೋಧಿ ಆಗಿದ್ದು, ನಾಚಿಕೆಗೇಡಿನ ವಿಷಯವಾಗಿದೆ ಎಂದು ಹೇಳಿದರು. ಜಿಎಸ್‌ಟಿಯನ್ನು ಜು.1ರಿಂದ ಜಾರಿಗೆ ತರಲಾಗಿದೆ. ಇದು ರಾಜ್ಯಗಳ ಹಕ್ಕುಗಳ ಮೇಲಿನ ಪ್ರಹಾರ. ಅಲ್ಲದೆ, ಜನ ಸಾಮಾನ್ಯರ ಬದುಕಿನ ಮೇಲೆ ಅತ್ಯಂತ ಕ್ರೂರ ದಾಳಿಯಾಗಿದೆ. ಅಭಿವೃದ್ಧಿ ಮುಖವಾಡ ತೊಡಿಸಿ ತರುತ್ತಿರುವ ಜಿಎಸ್‌ಟಿ ಸಾಮಾನ್ಯ ಜನತೆಯ ಉಣ್ಣುವ ಅನ್ನ, ಬಳಸುವ ವಸ್ತುಗಳು, ಜೀವನಕ್ಕೆ ಅತ್ಯವಶ್ಯಕವಾದ ವಸ್ತುಗಳು ದುಬಾರಿಯಾಗಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಮಾತ್ರವಲ್ಲ ಜಿಎಸ್‌ಟಿಯ ಇಂದಿನ ಸ್ವರೂಪ ಹೇಗಿದೆ ಎಂದರೆ
ಸಂವಿಧಾನದ ಮೂಲರಚನೆಯನ್ನೇ ಉಲ್ಲಂಘಿ ಸುವಂತಹದ್ದಾಗಿದೆ ಎಂದು ವಾಗ್ಧಾಳಿ ನಡೆಸಿದರು. ಚಿನ್ನದ ಮೇಲೆ ಶೇಕಡಾ ಮೂರರಷ್ಟು ತೆರಿಗೆ ಹಾಕಿದರೆ ಸ್ಯಾನಿಟರಿ ನ್ಯಾಪ್ಕಿನ್‌ ಮೇಲೆ ಶೇಕಡಾ ಹನ್ನೆರಡರಷ್ಟು ತೆರಿಗೆ ಹಾಕಲಾಗಿದೆ. ಇದೆಂಥ ವ್ಯಂಗ್ಯ!
ಋತುಸ್ರಾವದ ಹೊತ್ತಿನಲ್ಲಿ ಬಳಸುವ ನ್ಯಾಪ್ಕಿನ್ನಿನ ಮೇಲೂ ತೆರಿಗೆ ಹಾಕುವುದು ಅಮಾನವೀಯವೇ ಆಗಿದೆ. ಅಮಾನವೀಯತೆಗೆ ಇನ್ನೊಂದು ಉಧಾಹರಣೆಯೆಂದರೆ ಅಂಧರು ಬಳಸುವ ಟೈಪ್‌ ರೈಟರ್‌ ಮೇಲೂ ಅಧಿಕ ತೆರಿಗೆ ಹೊರೆ ಹಾಕಲಾಗಿದೆ. ಇಂತಹ ವಿಷಯಗಳ ಕುರಿತು ಕೇಂದ್ರ ಸರಕಾರವು ಅತ್ಯಂತ ಉದ್ಧಟತನದಿಂದ ವರ್ತಿಸುತ್ತಿರುವುದುನೋಡಿದರೆ ಬಂಡವಾಳಶಾಹಿ ಪರವಾದ ವ್ಯಾಪಾರಿ ಗುಣ-ಲಕ್ಷಣಗಳನ್ನು ಮೈಗೂಡಿಸಿಕೊಂಡಿದೆ ಎಂಬುದು ಸಾಬೀತಾಗಿದೆ ಎಂದು ಟೀಕಿಸಿದರು. 

ಇದರಿಂದ ವಿದ್ಯಾರ್ಥಿನಿಯರು, ಬಡ ಮಹಿಳೆಯರಿಗೆ ಹೊರೆಯಾಗಿದೆ. ಆದ್ದರಿಂದ ಕೂಡಲೇ ಈ ತೆರಿಗೆಯನ್ನು ತೆಗೆದುಹಾಕಬೇಕು.
ಹಾಗೂ ಉಚಿತವಾಗಿ ನೀಡಬೇಕು ಎಂದು ಆಗ್ರಹಿಸಿದರು. ಜನವಾದಿ ಸಂಘಟನೆ ಜಿಲ್ಲಾಧ್ಯಕ್ಷೆ ಚಂದಮ್ಮ ಗೋಳಾ ಹಾಗೂ ನೂರಾರು
ಮಹಿಳೆಯರು ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next