Advertisement

ದಕ್ಷಿಣದ ರಾಜ್ಯಗಳಿಗೆ ತಾರತಮ್ಯ : ತೆರಿಗೆ ಖೋತ ಮಾಡುವುದು ಬೇಡ

10:04 AM Feb 04, 2020 | sudhir |

ಎರಡು ವರ್ಷಗಳ ಹಿಂದೆ ದಕ್ಷಿಣದ ಎಲ್ಲಾ ರಾಜ್ಯಗಳೂ ಆಯೋಗ ಸೂಚಿಸಿದ ಕ್ರಮಾಂಶಗಳಲ್ಲಿ ಉತ್ತಮ ಸಾಧನೆ ಮಾಡಿವೆ. ಹೀಗಾಗಿ, ತಮಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕೆಂದು ಅವು ವಾದಿಸಿದ್ದವು.

Advertisement

ರಾಜ್ಯಸಭೆಯ ಮಾಜಿ ಸದಸ್ಯ ಎನ್‌.ಕೆ.ಸಿಂಗ್‌ ನೇತೃತ್ವದ ಹದಿನೈದನೇಯ ಹಣಕಾಸು ಆಯೋಗದ ಶಿಫಾರಸುಗಳನ್ನು ಹೆಚ್ಚಾ ಕಡಿಮೆ ಒಪ್ಪಿಕೊಳ್ಳಲು ಕೇಂದ್ರ ಸರ್ಕಾರ ಮುಂದಾಗಿದೆ. ಅದರ ಶಿಫಾರಸುಗಳು ಸುಧಾರಣಾತ್ಮಕವಾಗಿದ್ದರೂ, ತೆರಿಗೆ ಹಂಚಿಕೆ ವಿಚಾರದಲ್ಲಿ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಿಗೆ ನಿರಾಶೆಯೇ ಕಾದಿದೆ ಎಂದು ಹೇಳಲೇಬೇಕಾಗುತ್ತದೆ.

ಸದ್ಯ ಕೇಂದ್ರ ಸರ್ಕಾರದಿಂದ ರಾಜ್ಯಗಳಿಗೆ ಬರುವ ತೆರಿಗೆಯ ಪಾಲಿನಲ್ಲಿ ಶೇ.42ರಷ್ಟು ಬರುತ್ತಿದೆ. ಆದರೆ 2020-21ನೇ ವಿತ್ತೀಯ ವರ್ಷಕ್ಕಾಗಿ ರಾಜ್ಯಗಳಿಗೆ ತೆರಿಗೆಯ ಪಾಲು ಶೇ.41ರಷ್ಟು ಮಾತ್ರ. 11, 12, 13, 14 ನೇ ಹಣಕಾಸು ಆಯೋಗದ ವರದಿಗಳು ಜಾರಿಯಾಗಿದ್ದ ಹಿಂದಿನ ವರ್ಷಗಳಲ್ಲಿ ಕೇಂದ್ರದಿಂದ ರಾಜ್ಯಗಳಿಗೆ ಬರಬೇಕಾಗಿದ್ದ ತೆರಿಗೆ ಪಾಲಿನ ಪೈಕಿ ಶೇ.29.5 ರಿಂದ ಶೇ.42ರ ವರೆಗೆ ಏರಿಕೆಯಾಗಿದೆ. ಸಂಸತ್‌ನಲ್ಲಿ ಮಂಡಿಸಲಾಗಿರುವ ವರದಿಯ ಪ್ರಕಾರ ದಕ್ಷಿಣದ ರಾಜ್ಯಗಳಿಗೆ ತೆರಿಗೆ ವಿಚಾರದಲ್ಲಿ ಖೋತಾ ಉಂಟಾಗಲಿದೆ. ಅದಕ್ಕೆ ಪ್ರಮುಖ ಕಾರಣ 2011ರ ಜನಗಣತಿ ಆಧರಿಸಿ ವಿತ್ತೀಯ ನೆರವು ಮತ್ತು ತೆರಿಗೆ ಹಂಚುವ ನಿಟ್ಟಿನಲ್ಲಿ ಆಯೋಗ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಸದ್ಯ ಸಲ್ಲಿಕೆಯಾಗಿರುವುದು ಮಧ್ಯಂತರವಷ್ಟೇ. 2021-22ನೇ ಸಾಲಿನಿಂದ 2025-26ನೇ ಸಾಲಿನವರೆಗೆ ಇರುವ ಎರಡನೇ ವರದಿಯನ್ನು ಅಕ್ಟೋಬರ್‌ನಲ್ಲಿ ಎನ್‌.ಕೆ.ಸಿಂಗ್‌ ಸಲ್ಲಿಸಲಿದ್ದಾರೆ. ಒಂದೆರಡು ವರ್ಷಗಳ ಹಿಂದೆ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಈ ಬಗ್ಗೆ ಆಕ್ಷೇಪವೆತ್ತಿದ್ದರು. ನಂತರ ದಕ್ಷಿಣ ಭಾರತ ರಾಜ್ಯಗಳ ವಿತ್ತ ಸಚಿವರ ಸಭೆಯೂ ನಡೆದು, ಅಂಥ ಪ್ರಸ್ತಾಪ ಬೇಡ. ಕೇಂದ್ರ ಸರ್ಕಾರಗಳ ಸಂಪನ್ಮೂಲಗಳನ್ನು ರಾಜ್ಯಗಳಿಗೆ ಹಂಚಿಕೆ ಮಾಡಲು ಮತ್ತು ತೆರಿಗೆ ಪಾಲು ಹಂಚಲು ಸದ್ಯ ಇರುವ 1971ರ ಜನಗಣತಿಯನ್ನೇ ಮಾನದಂಡವನ್ನಾಗಿ ಮುಂದುವರಿಸಬೇಕು ಎಂದು ಒತ್ತಾಯಿಸಲಾಗಿತ್ತು.

ಆಯೋಗದ ವರದಿಯನ್ನೇ ನೋಡುವುದಾದರೆ, 14ನೇ ಹಣಕಾಸು ಆಯೋಗದ ಅವಧಿಯಲ್ಲಿ ಒಟ್ಟಾರೆ ತೆರಿಗೆಯಲ್ಲಿ ಕರ್ನಾಟಕಕ್ಕೆ 4.71% ಸಿಕ್ಕಿತ್ತು. 15ನೇ ಆಯೋಗದ ಅವಧಿಯಲ್ಲಿ 3.65% ಪಾಲು ಸಿಗಲಿದೆ. ಅಂದರೆ ಕಡಿಮೆ ಪ್ರಮಾಣ ಎನ್ನುವುದು ಸ್ಪಷ್ಟ. ಇನ್ನು ಕೇರಳಕ್ಕೆ 14ನೇ ಆಯೋಗದ ಅವಧಿಯಲ್ಲಿ 2.5%, 15ನೇ ಆಯೋಗದಲ್ಲಿ 1.94% ಪ್ರಮಾಣ ಸಿಗಲಿದೆ. ನಷ್ಟ ಹೊಂದುವ ಪ್ರಮುಖ ರಾಜ್ಯಗಳ ಪಟ್ಟಿಯಲ್ಲಿ ಆಂಧ್ರಪ್ರದೇಶ, ಅಸ್ಸಾಂ, ತೆಲಂಗಾಣ, ಕೇರಳ, ಕರ್ನಾಟಕ ಇದೆ.

ಜನಸಂಖ್ಯೆ ನಿಯಂತ್ರಣ, ಆಯಾ ರಾಜ್ಯದ ವ್ಯಾಪ್ತಿ, ಅರಣ್ಯ ಮತ್ತು ಪರಿಸರ, ಆದಾಯದ ನಡುವಿನ ಮಿತಿ, ಯಾವ ರೀತಿಯ ಜನರು ಇದ್ದಾರೆ, ಅವರು ಹೊಂದಿರುವ ಮನೆ, ಅಲ್ಲಿನ ವ್ಯವಸ್ಥೆ, ತೆರಿಗೆ ವ್ಯವಸ್ಥೆ ಸುಧಾರಣೆಗೆ ಕೈಗೊಂಡ ಪ್ರಯತ್ನಗಳನ್ನು ಆಧರಿಸಿ 14ನೇ ಹಣಕಾಸು ಆಯೋಗ ರಾಜ್ಯಗಳಿಗೆ ಕೇಂದ್ರದ ವತಿಯಿಂದ ಸಂಪನ್ಮೂಲ ಹಂಚಿಕೆಯ ಬಗ್ಗೆ ನಿರ್ಧಾರ ಕೈಗೊಳ್ಳುತ್ತದೆ.

Advertisement

ಎರಡು ವರ್ಷಗಳ ಹಿಂದೆ ಕೂಡ ಜನಸಂಖ್ಯೆಯ ಮಾನದಂಡವನ್ನೇ ಸಂಪನ್ಮೂಲ ಹಂಚಿಕೆ ವಿಚಾರದಲ್ಲಿ ತೆಗೆದುಕೊಂಡಾಗ ದಕ್ಷಿಣ ಎಲ್ಲಾ ರಾಜ್ಯಗಳಲ್ಲಿ ಆಯೋಗ ಸೂಚಿಸಿದ ಕ್ರಮಾಂಶಗಳಲ್ಲಿ ಉತ್ತಮ ಸಾಧನೆಯನ್ನೇ ಮಾಡಿವೆ. ಹೀಗಾಗಿ, ತಮಗೆ ಮತ್ತಷ್ಟು ಹೆಚ್ಚಿನ ಪ್ರೋತ್ಸಾಹದಾಯಕ ಕ್ರಮಗಳಿಗೆ ಬೆನ್ನು ತಟ್ಟಿ ಬೆಂಬಲ ನೀಡಬೇಕೆಂದು ವಾದಿಸಿದ್ದವು.

ಸದ್ಯ ಕಡಿಮೆ ಪ್ರಮಾಣದ ಹಂಚಿಕೆಗೆ ನೀಡಲಾಗಿರುವ ಸಮರ್ಥನೆ ಎಂದರೆ ಜಮ್ಮು ಮತ್ತು ಕಾಶ್ಮೀರವನ್ನು ವಿಭಜಿಸಿ ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಮಾಡಲಾಗಿದೆ. ಹೀಗಾಗಿ, 29 ರಾಜ್ಯಗಳ ಪೈಕಿ ಈಗ ದೇಶದಲ್ಲಿ ಇರುವ ರಾಜ್ಯಗಳು 28.

ಕಡಿಮೆ ಮಾಡಲಾಗಿರುವ 1%ದಷ್ಟು ಪ್ರಮಾಣದಲ್ಲಿ ಜಮ್ಮು ಮತ್ತು ಕಾಶ್ಮೀರ, ಲಡಾಖ್‌ ಅಭಿವೃದ್ಧಿ ಮಾಡಲಾಗುತ್ತದೆ. ಈ ಸವಾಲು ಪರಿಹರಿಸಲು ರಾಜ್ಯಗಳಿಗೆ ಕಂದಾಯ ಕೊರತೆ ಅನುದಾನ ಮತ್ತು ವಿಕೋಪಗಳನ್ನು ನಿರ್ವಹಿಸಲು ಇರುವ ನಿಧಿಯ ಪ್ರಮಾಣದಲ್ಲಿ ಹೆಚ್ಚಳ ಮಾಡಲು ಶಿಫಾರಸು ಮಾಡಿದೆ. ಅದೇನೇ ಇದ್ದರೂ, ರಾಜ್ಯಗಳ ಪಾಲಿನಲ್ಲಿ ಕಡಿಮೆ ಮಾಡಿರುವುದು ಸರ್ವಥಾ ಸಮರ್ಥನೀಯವಲ್ಲ.

Advertisement

Udayavani is now on Telegram. Click here to join our channel and stay updated with the latest news.

Next