Advertisement

Tax: ಹೆಚ್ಚು ತೆರಿಗೆ ನೀಡುವ ರಾಜ್ಯಕ್ಕೆ ಅತಿ ಹೆಚ್ಚು ನಷ್ಟ- ಮುಖ್ಯಮಂತ್ರಿ ಸಿದ್ದರಾಮಯ್ಯ

12:32 AM Jan 21, 2024 | Team Udayavani |

ಬೆಂಗಳೂರು: ದೇಶದಲ್ಲೇ ಅತಿ ಹೆಚ್ಚು ತೆರಿಗೆ ನೀಡುವ ಕರ್ನಾಟಕಕ್ಕೆ ತನ್ನ ಕೊಡುಗೆಗೆ ತಕ್ಕ ಪ್ರತಿಫ‌ಲ ದೊರಕದಿರುವುದು ವಿಪರ್ಯಾಸ. 16ನೇ ಹಣಕಾಸು ಆಯೋಗವು ದಕ್ಷತೆಗೆ ತಕ್ಕಂತೆ ಪ್ರೋತ್ಸಾಹ ಹಾಗೂ ವಿತ್ತೀಯ ಕಾರ್ಯಕ್ಷಮತೆಗೆ ಅನುಗುಣವಾಗಿ ಹೆಚ್ಚಿನ ಬೆಲೆ ಕಲ್ಪಿಸಬೇಕೆಂದು ರಾಜ್ಯ ಸರಕಾರ ಒತ್ತಾಯಿಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

Advertisement

ಎಂ.ಎಸ್‌. ರಾಮಯ್ಯ ಅನ್ವಯಿಕ ವಿಜ್ಞಾನ ವಿಶ್ವವಿದ್ಯಾನಿಲಯವು ನಗರದ ಖಾಸಗಿ ಹೊಟೇಲ್‌ನಲ್ಲಿ ಆಯೋಜಿ ಸಿದ್ದ “ವಿತ್ತೀಯ ಒಕ್ಕೂಟತ್ವ: 16ನೇ ಹಣಕಾಸು ಆಯೋಗದ ಮುಂದಿರುವ ಸವಾಲುಗಳು’ ಎಂಬ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.

ಅತ್ಯುತ್ತಮ ವಿತ್ತೀಯ ಕಾರ್ಯಕ್ಷಮತೆ ಹೊಂದಿರುವ ರಾಜ್ಯ ಎಂಬ ದಾಖಲೆ ಹೊಂದಿರುವ ಕರ್ನಾಟಕಕ್ಕೆ ಅದರ ದಕ್ಷತೆಗಾಗಿ ಯಾವುದೇ ಪ್ರೋತ್ಸಾಹಗಳು ದೊರೆಯುತ್ತಿಲ್ಲ. ಕೋವಿಡ್‌ ಬಳಿಕದಲ್ಲಿ ರಾಜಸ್ವ ಕೊರತೆಗಳು ಮರುಕಳಿಸಿದ್ದನ್ನು ಹೊರತುಪಡಿಸಿ ಭಾರೀ ಗಾತ್ರದ ವಿತ್ತೀಯ ಸೂಚಕಗಳಾದ ವಿತ್ತೀಯ ಕೊರತೆ ಮತ್ತು ರಾಜಸ್ವ ಕೊರತೆ ಸದಾ ನಿಗದಿತ ವ್ಯಾಪ್ತಿಯಲ್ಲೇ ಇವೆ. ಆದರೂ ಹಣಕಾಸು ಆಯೋಗಗಳಿಂದ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಹಿಂದಿನ ಹಣಕಾಸು ಆಯೋಗದ ಶಿಫಾರಸುಗಳಿಂದಾಗಿ ದೇಶದಲ್ಲೇ ಅತಿ ಹೆಚ್ಚು ನಷ್ಟವನ್ನು ನಮ್ಮ ರಾಜ್ಯ ಅನುಭವಿಸಿದ್ದು, ಇದನ್ನು 16ನೇ ಹಣಕಾಸು ಆಯೋಗದ ಮುಂದೆ ಪ್ರಶ್ನಿಸಬೇಕಿದೆ. 15ನೇ ಹಣಕಾಸು ಆಯೋಗವು ಅದರ ಹಿಂದಿನ ಆಯೋಗಕ್ಕಿಂತ ಶೇ.1.06ರಷ್ಟು ಕಡಿಮೆ ತೆರಿಗೆಯನ್ನು ರಾಜ್ಯಕ್ಕೆ ಹಂಚಿದೆ ಎಂದರು.

ಈಗಿನ ಹಣಕಾಸು ಆಯೋಗವು ಆದಾಯದ ದೂರ ವ್ಯಾಪ್ತಿ ಮತ್ತು ತಲಾ ಆದಾಯವನ್ನು ಪರಿಗಣಿಸುತ್ತಿರುವುದದಿಂದ ರಾಜ್ಯಕ್ಕೆ ಹೆಚ್ಚಿನ ತೆರಿಗೆ ಪಾಲು ಸಿಗುತ್ತಿಲ್ಲ. ಹಣಕಾಸು ಆಯೋಗ ಅನುಸರಿಸುತ್ತಿರುವ ಈ ಮಾನದಂಡ ಸೂಕ್ತವಾಗಿಲ್ಲ. ಬೆಂಗಳೂರು ನಗರ ಜಿಲ್ಲೆಯಲ್ಲಿ 6.21 ಲಕ್ಷ ರೂ.ಗಳ ತಲಾ ಆದಾಯವಿದ್ದರೆ ಕಲಬುರಗಿ ಜಿಲ್ಲೆಯ ತಲಾ ಆದಾಯ 1.24 ಲಕ್ಷ ರೂ. ಮಾತ್ರವಿದೆ ಎಂಬುದನ್ನು ಹಣಕಾಸು ಆಯೋಗ ಮನಗಾಣಬೇಕು. ಹಣಕಾಸು ಆಯೋಗದ ನೀತಿಯಿಂದಾಗಿ ತಲಾ ಆದಾಯ ಕಡಿಮೆ ಇರುವ ಜಿಲ್ಲೆಗಳ ಸಮಸ್ಯೆಯನ್ನು ಪರಿಹರಿಸಲು ಸೂಕ್ತ ಸಂಪನ್ಮೂಲ ಸಿಗದಂತಾಗಿದೆ. ಹೀಗಾಗಿ ಅಂತಾರಾಜ್ಯ ತಲಾ ಆದಾಯ ವ್ಯತ್ಯಾಸಗಳಿಗೆ ಅಗತ್ಯವಿರುವ ಹೊಂದಾಣಿಕೆ ಮಾಡಿಕೊಂಡು, ಆದಾಯ ದೂರವ್ಯಾಪ್ತಿಯನ್ನು ಪರಿಗಣಿಸಿ ಹಣಕಾಸು ಆಯೋಗಗಳು ಶಿಫಾರಸು ಮಾಡಬೇಕು ಎಂದರು.

Advertisement

ರಾಜ್ಯಗಳ ಮುಂದೆ ಆರ್ಥಿಕ ಸವಾಲುಗಳಿವೆ
ರಾಜ್ಯ ಸರಕಾರಗಳಿಗೆ ಪ್ರಮುಖ ವೆಚ್ಚ ಹೊಣೆಗಾರಿಕೆಗಳಿದ್ದು, ಅಗತ್ಯ ರಾಜಸ್ವ ಸಂಪನ್ಮೂಲಗಳ ಲಭ್ಯತೆ ಇರುವುದಿಲ್ಲ. ವಿತ್ತೀಯ ಸ್ವಾಯತ್ತತೆಯನ್ನು ಉಳಿಸಿಕೊಳ್ಳುತ್ತಲೇ ರಾಜ್ಯ ಮಟ್ಟದಲ್ಲಿ ವೆಚ್ಚ ಹೊಣೆಗಾರಿಕೆಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಹಣಕಾಸು ಆಯೋಗಗಳ ಸಂಪನ್ಮೂಲ ವರ್ಗಾವಣೆಗೆ ಹೆಚ್ಚಿನ ಪ್ರಾಮುಖ್ಯವಿದೆ. ಆರ್ಥಿಕ ಬೆಳವಣಿಗೆಯನ್ನು ಸಮತೋಲಿತ ಹಾಗೂ ಒಳಗೊಳ್ಳುವಿಕೆಯನ್ನು ಖಾತ್ರಿ ಪಡಿಸಿಕೊಳ್ಳುತ್ತಲೇ ಅದನ್ನು ಸುಸ್ಥಿರ ಗೊಳಿಸುವ ಸವಾ ಲಿದೆ. ಇದರೊಂದಿಗೆ, ಕೇಂದ್ರ ಪ್ರಾಯೋಜಿತ ಯೋಜನೆಗಳ ಆಯವ್ಯಯ ಪರಿಣಾಮಗಳನ್ನೂ ರಾಜ್ಯ ಸರಿದೂಗಿಸಬೇಕಾಗಿದೆ ಎಂದು ಸಿದ್ದರಾಮಯ್ಯ ರಾಜ್ಯಗಳ ಮುಂದಿ ರುವ ಸವಾಲುಗಳನ್ನು ಬಿಚ್ಚಿಟ್ಟರು.

ಸಿಎಂ ಪ್ರಧಾನ ಕಾರ್ಯದರ್ಶಿ ಎಲ್‌.ಕೆ.ಅತೀಕ್‌, ಸಂಸ್ಥೆಯ ಕುಲಪತಿ ಪ್ರೊ| ಕೆ.ಕೆ.ರೈನಾ, ನಿವೃತ್ತ ಐಎಎಸ್‌ ಅಧಿಕಾರಿ ಎಂ. ಆರ್‌. ಶ್ರೀನಿವಾಸ ಮೂರ್ತಿ ಉಪಸ್ಥಿತರಿದ್ದರು.

ಜ.22ರಂದು ಶಾಲಾ-ಕಾಲೇಜಿಗೆ ರಜೆ ನೀಡುವ ವಿಪಕ್ಷಗಳ ಮನವಿ ಬಗ್ಗೆ ಗೊತ್ತಿಲ್ಲ
ಅಯೋಧ್ಯೆಯ ರಾಮಮಂದಿರದ ಪ್ರಾಣ ಪ್ರತಿಷ್ಠಾಪನೆ ನಡೆಯುವ ಜ. 22ರಂದು ಶಾಲೆ ಮತ್ತು ಕಾಲೇಜುಗಳಿಗೆ ರಜೆ ನೀಡಬೇಕೆಂಬ ವಿಪಕ್ಷಗಳ ಮನವಿ ಬಗ್ಗೆ ಗೊತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಜೆ ನೀಡಬೇಕೆಂದು ಆಗ್ರಹಿಸಿರುವ ಪತ್ರ ನನಗೆ ಬಂದಿಲ್ಲ ಎಂದು ಹೇಳಿದರು. ಅಯೋಧ್ಯೆಗೆ ನಾನು ಇನ್ನೊಂದು ದಿನ ಹೋಗುತ್ತೇನೆಂದು ಈಗಾಗಲೇ ತಿಳಿಸಿದ್ದೇನೆ. ಸದ್ಯ ರಾಮ ಮಂದಿರ ನಿರ್ಮಾಣದ ವಿಷಯದಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಅದಕ್ಕೆ ನಾನು ಹೋಗುತ್ತಿಲ್ಲ ಎಂದು ಮುಖ್ಯಮಂತ್ರಿಗಳು ಪುನರುಚ್ಚರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next