Advertisement

ಕಲ್ಕಿ ಭಗವಾನ್‌ಗೂ ತೆರಿಗೆ ಅಧಿಕಾರಿಗಳ ಕಾಟ

07:32 AM Oct 23, 2019 | sudhir |

ಚೆನ್ನೈ: ತೆರಿಗೆ ಅಧಿಕಾರಿಗಳ ಕಾಟ ಈಗ ದೊಡ್ಡ ದೊಡ್ಡ ಕುಳಗಳಿಗೆ ಮಾತ್ರವಲ್ಲ “ಭಗವಾನ್‌’ಗೂ ಆರಂಭವಾಗಿದೆ. ಅದೂ ಕಲ್ಕಿ ಭಗವಾನ್‌ಗೆ!
ಸ್ವಯಂ ಘೋಷಿತ ದೇವಮಾನವ ಕಲ್ಕಿ ಭಗವಾನ್‌ ಬಳಿ ಲೆಕ್ಕವಿಲ್ಲದ ಆಸ್ತಿ ಪತ್ತೆಯಾಗುವುದರೊಂದಿಗೆ ತೆರಿಗೆ ಸಮಸ್ಯೆ ಶುರುವಾಗಿದೆ.

Advertisement

ಕಳೆದ ವಾರ ಕಲ್ಕಿ ಭಗವಾನ್‌ ನಿವಾಸದ ಮೇಲೆ ತೆರಿಗೆ ಅಧಿಕಾರಿಗಳ ದಾಳಿಯಾಗಿದೆ. ಈ ವೇಳೆ 45 ಕೋಟಿ ರೂ. ನಗದು, 88 ಕೆ.ಜಿ. ಚಿನ್ನ, 1271 ಕ್ಯಾರೆಟ್‌ ವಜ್ರ, ಸುಮಾರು 600 ಕೋಟಿ ರೂ.ಗಳ ನಗದು ರಸೀದಿ ಪತ್ತೆಯಾಗಿದ್ದು, ಆ ಆಸ್ತಿಗಳನ್ನು ಘೋಷಿಸಿರಲಿಲ್ಲ ಎಂದು ಹೇಳಲಾಗಿದೆ.

ಇದರೊಂದಿಗೆ ದೇಶದ ವಿವಿಧ ಕಂಪೆನಿಗಳಲ್ಲಿ, ವಿದೇಶಗಳಲ್ಲಿ ಹೂಡಿಕೆ ಮಾಡಿದ ವಿಚಾರವನ್ನೂ ಘೋಷಿಸಿರಲಿಲ್ಲ. 5 ದಿನಗಳಲ್ಲಿ ಬೆಂಗಳೂರು, ಹೈದರಾಬಾದ್‌, ಚೆನ್ನೈ ಸೇರಿದಂತೆ 40ಕ್ಕೂ ಹೆಚ್ಚು ಕಲ್ಕಿ ಭಗವಾನ್‌ ವಿವಿಧ ಆಶ್ರಮಕ್ಕೆ ದಾಳಿ ನಡೆಸಲಾಗಿದ್ದು ತೆರಿಗೆ ಅಧಿಕಾರಿಗಳು ಮಾಹಿತಿ ಕಲೆ ಹಾಕಿದ್ದಾರೆ.

ಈ ಬಗ್ಗೆ ವೀಡಿಯೋ ಪ್ರತಿಕ್ರಿಯೆಯನ್ನು ಕಲ್ಕಿ ಭಗವಾನ್‌ ನೀಡಿದ್ದು, “ನಾವು ಭಕ್ತರನ್ನು ಬಿಟ್ಟು ಹೋಗುವುದಿಲ್ಲ. ನಾವೆಲ್ಲೂ ಅಡಗಿಲ್ಲ. ನಾವು ನೆಹಮನ್‌ ಆಶ್ರಮದಲ್ಲೇ ಇದ್ದೇವೆ. ನಿಮ್ಮ ಸಹಾಯಕ್ಕಾಗಿ ನಾವು ತರಗತಿಗಳನ್ನು ನಡೆಸುತ್ತಿದ್ದೇವೆ’ ಎಂದು ಹೇಳಿದ್ದಾರೆ.

ಏತನ್ಮಧ್ಯೆ ತೆರಿಗೆ ಅಧಿಕಾರಿಗಳು ಕಲ್ಕಿ ಭಗವಾನ್‌ ಪುತ್ರ ಕೃಷ್ಣನಿಗೆ ನೋಟಿಸ್‌ ಜಾರಿ ಮಾಡಿದ್ದು ವಿಚಾರಣೆಗೆ ಹಾಜರಾಗುವಂತೆ ಹೇಳಿದ್ದಾರೆ. ಮೂಲಗಳ ಪ್ರಕಾರ ಆತ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ವಿಚಾರಣೆಯಿಂದ ತಪ್ಪಿಸಿಕೊಳ್ಳಲು ಹವಣಿಸಿದ್ದಾಗಿ ಹೇಳಲಾಗಿದೆ.

Advertisement

ಇದರೊಂದಿಗೆ ಕಲ್ಕಿ ಭಗವಾನ್‌ ಅವರ ಅಮ್ಮಾ ಶ್ರೀ ಭಗವಾನ್‌ ಫೌಂಡೇಶನ್‌ ತೆರಿಗೆ ಅಧಿಕಾರಿಗಳ ದಾಳಿ ಕುರಿತು ಸುದ್ದಿಗಳನ್ನು ತಳ್ಳಿ ಹಾಕಿದೆ. ಈ ಬಗ್ಗೆ ಹೇಳಿಕೆ ನೀಡಿದ್ದು, “ಸರಕಾರ ಯಾವುದೇ ಅಭಿವೃದ್ಧಿಯಾಗುತ್ತಿರುವ ಸಂಘಟನೆಯ ಬಗ್ಗೆ ಕಾನೂನಾತ್ಮಕವಾಗಿ ಪರಿಶೀಲನೆ ನಡೆಸಬಹುದು. ನಾವು ದೇಶದ ಕಾನೂನಿಗೆ ಗೌರವ ನೀಡುತ್ತೇವೆ. ನಾವು ಇದನ್ನು ಕಾನೂನು ಪ್ರಕಾರವೇ ಎದುರಿಸುತ್ತೇವೆ. ನಾವು ಕಾನೂನು ಪ್ರಕಾರ ನಡೆದುಕೊಳ್ಳದಿದ್ದರೆ, ಆ ಕುರಿತ ಸರಕಾರದ ತೀರ್ಮಾನ ಎದುರಿಸಲು ಸಿದ್ಧರಿದ್ದೇವೆ’ ಎಂದು ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next