ಒಂದು ದೇಶ, ಒಂದು ಮಾರುಕಟ್ಟೆ ಮತ್ತು ಒಂದು ತೆರಿಗೆ ಎಂಬ ಧ್ಯೇಯದೊಂದಿಗೆ ಎರಡೂವರೆ ವರ್ಷದ ಹಿಂದೆ ಜಾರಿಗೆ ತರಲಾಗಿದ್ದ, ದೇಶದ ಅತಿ ದೊಡ್ಡ ತೆರಿಗೆ ಸುಧಾರಣೆ ಎಂದು ವ್ಯಾಖ್ಯಾನಿಸಲ್ಪಟ್ಟ ಸರಕು ಮತ್ತು ಸೇವಾ ತೆರಿಗೆ ವ್ಯವಸ್ಥೆಯನ್ನು ಆಮೂಲಾಗ್ರವಾಗಿ ಬದಲಾಯಿಸುವ ಚಿಂತನೆ ಸರಕಾರಕ್ಕಿದೆ. ಜಿಎಸ್‌ಟಿ ಬದಲಾವಣೆ ಆಗಬೇಕಾದದ್ದೇ. ಜಾರಿಗೆ ಬಂದು ಎರಡೂವರೆ ವರ್ಷವಾಗಿದ್ದರೂ ಜಿಎಸ್‌ಟಿಯ ಗೊಂದಲಗಳಿನ್ನೂ ಮುಗಿದಿಲ್ಲ.
ಈ ತೆರಿಗೆ ವ್ಯವಸ್ಥೆಯಲ್ಲಿರುವ ಕೆಲವು ವಿರೋಧಾಭಾಸಗಳು ನಿರಂತರ ಟೀಕೆಗೂ, ಗೇಲಿಗೂ ಒಳಗಾಗುತ್ತಿವೆ. ಜಿಎಸ್‌ಟಿಯಲ್ಲಿರುವ ಇಂಥ ಹಲವು ಲೋಪದೋಷಗಳು ನಿವಾರಣೆಯಾಗಬೇಕಾದರೆ ಅದನ್ನು ಆಮೂಲಾಗ್ರವಾಗಿ ಪರಿಶೀಲಿಸಬೇಕಾದ ಅಗತ್ಯವಿದೆ. ಆದರೆ ಈ ಬದಲಾವಣೆಯಿಂದ ಜನರ ತೆರಿಗೆ ಹೊರೆ ಇನ್ನಷ್ಟು ಹೆಚ್ಚಾಗುವುದು ಮಾತ್ರ ಸಮ್ಮತವಲ್ಲ.
ಆದರೆ ಸದ್ಯಕ್ಕೆ ಲೋಪದೋಷಗಳ ನಿವಾರಣೆಗಿಂತಲೂ ತೆರಿಗೆ ಸಂಗ್ರಹವನ್ನು ಹೆಚ್ಚಿಸಿಕೊಳ್ಳುವುದು ಸರಕಾರದ ಆದ್ಯತೆಯಾಗಿರುವಂತೆ ಕಾಣಿಸುತ್ತಿದೆ. ಈ ಉದ್ದೇಶದಿಂದ ಶೇ.5 ತೆರಿಗೆ ಪ್ರಮಾಣವನ್ನು ಶೇ.9-10ಕ್ಕೆ ಏರಿಸುವ ಮತ್ತು ಶೇ. 12 ತೆರಿಗೆ ಸ್ಲಾéಬ್ ಕಿತ್ತು ಹಾಕುವ ಚಿಂತನೆ ನಡೆದಿದೆ. ಹೀಗಾದರೆ ಜಿಎಸ್‌ಟಿ ಎಂಬ ರಮ್ಯ ಕನಸು ಜನ ಸಾಮಾನ್ಯರಿಗೆ ಮಾತ್ರವಲ್ಲದೆ ಉದ್ಯಮಿಗಳ ಪಾಲಿಗೂ ದುಃಸ್ವಪ್ನವಾಗಿ ಕಾಡಬಹುದು.
ಪ್ರಸ್ತುತ ಶೇ. 12 ಸ್ಲಾಬ್‌ನಲ್ಲಿರುವ 243 ಸರಕು ಮತ್ತು ಸೇವೆಗಳು ಬಹುತೇಕ ಮಧ್ಯಮ ವರ್ಗದವರು ಮತ್ತು ಕೆಳ ಮಧ್ಯಮ ವರ್ಗದವರು ಬಳಸುವಂಥದ್ದು. ಇದನ್ನು ಶೇ.18ರ ಸ್ಲಾಬ್‌ಗ ತಂದರೆ ಖಂಡಿತ ಅದು ಹೊರೆಯಾಗಿ ಪರಿಣಮಿಸಲಿದೆ.
ಜಿಎಸ್‌ಟಿ ಜಾರಿಗೆ ತರುವಾಗ ಉತ್ಪಾದಕರು ಮತ್ತು ವರ್ತಕರು ಒಂದೇ ತೆರಿಗೆಯಿಂದ ತಮಗೆ ಬಹಳ ಅನುಕೂಲವಾಗಬಹುದು ಎಂದು ಭಾವಿಸಿದ್ದರು. ಪಾರದರ್ಶಕ ಕಾನೂನುಗಳು, ಸರಳ ಲೆಕ್ಕಪತ್ರಗಳು…ಹೀಗೆ ವರ್ತಕರು ಕಂಡ ಕನಸುಗಳು ಹಲವು. ಗ್ರಾಹಕರು ಕೂಡ ತಮ್ಮ ಜೀವನಾವಶ್ಯಕ ವಸ್ತುಗಳ ಬೆಲೆ ಕಡಿಮೆಯಾಗಬಹುದು. ಈ ಮೂಲಕ ಉಳಿತಾಯ ವಾಗುವ ಹಣ ಮಕ್ಕಳ ಶಿಕ್ಷಣಕ್ಕೋ, ವೃದ್ಧರ ಔಷಧಿಗೋ ಉಪಯೋಗಬಹುದು ಎಂದು ಲೆಕ್ಕಾಚಾರ ಹಾಕಿದ್ದರು. ತೆರಿಗೆ ಸೋರಿಕೆ ಕಡಿಮೆಯಾಗಿ ಸರಕಾರದ ಬೊಕ್ಕಸ ತುಂಬಿ ತುಳುಕಲಿದೆ ಎಂದು ನಂಬಿಸಲಾಗಿತ್ತು. ಆದರೆ ಎರಡೂವರೆ ವರ್ಷ ಕಳೆದ ಬಳಿಕ ನೋಡಿದಾಗ ಈ ಇದ್ಯಾವುದೂ ಆದಂತೆ ಕಾಣಿಸುವುದಿಲ್ಲ. ಸರಕಾರ ಹೇಳಿರುವುದೇ ಬೇರೆ ವಾಸ್ತವ ಸ್ಥಿತಿಯೇ ಬೇರೆ. ಜನರು ಹಿಂದಿನಂತೆಯೇ ತೆರಿಗೆ ಪಾವತಿಸುತ್ತಿದ್ದಾರೆ. ವಸ್ತುಗಳ ಮತ್ತು ಸೇವೆಗಳ ಬೆಲೆ ಹೆಚ್ಚಾಗುತ್ತಿದೆಯೇ ಹೊರತು ಕಡಿಮೆಯಾಗುವ ಲಕ್ಷಣಗಳು ಕಾಣಿಸುತ್ತಿಲ್ಲ. ಜಿಎಸ್‌ಟಿಯಿಂದಾಗಿ ಯಾವ ವಸ್ತುವೂ ಅಗ್ಗವಾಗಿರುವುದು ಕಂಡು ಬಂದಿಲ್ಲ. ಹೀಗಿರುವಾಗ ಇಂಥ ಒಂದು ಅಗಾಧ ಸ್ಥಿತ್ಯಂತರವನ್ನು ಮಾಡಿ ಆದ ಲಾಭವೇನು? ಈ ಪ್ರಶ್ನೆಗೆ ಉತ್ತರಿಸುವ ಬಾಧ್ಯತೆ ನಮ್ಮನ್ನು ಆಳುವವರ ಮೇಲಿದೆ.
ಜಿಎಸ್‌ಟಿಯಿಂದಾಗಿ ತೆರಿಗೆ ಕಡಿಮೆಯಾಗ ಬೇಕಿರುವುದು ಮಾತ್ರವಲ್ಲದೆ ತೆರಿಗೆ ಸ್ಲಾಬ್‌ಗಳೂ ಕಡಿಮೆಯಾಗಬೇಕು. ಪ್ರಸ್ತುತ ನಮ್ಮಲ್ಲಿ ನಾಲ್ಕು ಸ್ಲಾಬ್‌ಗಳಿವೆ. ಇದನ್ನು ಕ್ರಮೇಣ ಎರಡು ಸ್ಲಾಬ್‌ಗ ತರಬೇಕೆಂದು ಆರಂಭದಿಂದಲೇ ಅರ್ಥ ಶಾಸ್ತ್ರಜ್ಞರು ಸಲಹೆ ನೀಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಸರಕಾರ ಸೂಕ್ತ ಚಿಂತನೆಗಳನ್ನು ನಡೆಸಬೇಕು. ಅಂತೆಯೇ ಪೆಟ್ರೋಲಿಯಂ ಸೇರಿದಂತೆ ಹಲವು ಜೀವನಾವಶ್ಯಕ ವಸ್ತುಗಳನ್ನು ಜಿಎಸ್‌ಟಿ ವ್ಯಾಪ್ತಿಯಿಂದ ಹೊರಗಿಡಲಾಗಿದೆ.
ಇವುಗಳಿಗೂ ಜಿಎಸ್‌ಟಿ ಅನ್ವಯಿಸುವಂತೆ ಮಾಡಿ ಅವುಗಳ ಬೆಲೆ ಕಡಿಮೆಯಾಗುವಂತೆ ಮಾಡಬೇಕು. ಜಿಎಸ್‌ಟಿ ಪಾರದರ್ಶಕ ಎಂದು ಸರಕಾರ ಹೇಳುತ್ತಿದ್ದರೂ ರಂಗೋಲಿ ಕೆಳಗೆ ತೂರಿ ಹೋಗುವವರು ಇಲ್ಲೂ ಇದ್ದಾರೆ.
ಇತ್ತೀಚೆಗಷ್ಟೆ ಬಯಲಾದ ನಕಲಿ ರಸೀದಿ ಸೃಷ್ಟಿಸಿ ಕ್ರೆಡಿಟ್ ಇನ್‌ಪುಟ್ ಪಡೆದುಕೊಂಡ ಪ್ರಕರಣವೇ ಇದಕ್ಕೆ ಸಾಕ್ಷಿ.ಇದರಿಂದ ಜಿಎಸ್‌ಟಿ ಸಂಪೂರ್ಣ ಸುರಕ್ಷಿತ ಅಲ್ಲ ಎನ್ನುವುದು ಸಾಬೀತಾಗುತ್ತದೆ. ಇಂಥ ಲೋಪಗಳನ್ನು ಮೊದಲು ಸರಿಪಡಿಸಬೇಕು. ಜೊತೆಗೆ ಸಿಜಿಎಸ್‌ಟಿ, ಎಸ್‌ಜಿಎಸ್‌ಟಿ, ಸಿಜಿಎಸ್‌ಟಿ ಎಂಬ ಬೇರೆ ಬೇರೆ ರೂಪದ ತೆರಿಗೆ ಸಂಗ್ರಹ ಗೊಂದಲ ನಿವಾರಣೆಯಾಗಿ ಸರಕಾರವೇ ಹೇಳಿಕೊಂಡಂತೆ ಒಂದೇ ತೆರಿಗೆ ಎಂಬ ಪರಿಕಲ್ಪನೆ ಸಾಕಾರವಾಗಬೇಕು. ಜಿಎಸ್‌ಟಿಯನ್ನು “ಗುಡ್ ಆ್ಯಂಡ್ ಸಿಂಪಲ್ ಟ್ಯಾಕ್ಸ್’ ಪದ್ಧತಿಯನ್ನಾಗಿ ಮಾಡಲು ಮೊದಲ ಆದ್ಯತೆ ನೀಡಬೇಕು.