Advertisement

ಗ್ರಾ.ಪಂ.ಗಳಿಗೆ ಮಗ್ಗುಲ ಮುಳ್ಳಾದ ತೆರಿಗೆ ವಿನಾಯಿತಿ

10:16 AM Mar 04, 2020 | sudhir |

ಬೆಂಗಳೂರು: ಕೈಗಾರಿಕೆಗಳಿಗೆ ಪೂರಕ ವಾತಾವರಣ ಕಲ್ಪಿಸುವ ದೃಷ್ಟಿಯಿಂದ ನವೀಕರಿಸಬಹುದಾದ ಇಂಧನ ಘಟಕಗಳ ಮೇಲಿನ ತೆರಿಗೆಯನ್ನು ಭಾರೀ ಪ್ರಮಾಣದಲ್ಲಿ ತಗ್ಗಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆ ಹೊರಡಿಸಿದ ಅಧಿಸೂಚನೆ ಈಗ ಗ್ರಾಮ ಪಂಚಾಯತ್‌ಗಳಿಗೆ ಮಗ್ಗುಲ ಮುಳ್ಳಾಗಿ ಪರಿಣಮಿಸಿದೆ!

Advertisement

2018ರ ಫೆಬ್ರವರಿಯ ಈ ಆದೇಶ ಮುಂದಿಟ್ಟುಕೊಂಡು ನವೀಕರಿಸಬಹುದಾದ ಇಂಧನ ಘಟಕ ಹೊಂದಿರುವ ಕೆಲವು ಕೈಗಾರಿಕೆ ಗಳು ಬಾಕಿ ತೆರಿಗೆಯನ್ನು ಪಾವತಿಸದೆ ಗ್ರಾ.ಪಂ. ಗಳನ್ನು ಸತಾಯಿಸುತ್ತಿವೆ. ಒಂದೆಡೆ ಆದೇಶ ಪಾಲನೆ, ಮತ್ತೂಂದೆಡೆ ಆದಾಯ ಮೂಲಕ್ಕೆ ಕತ್ತರಿಯಿಂದ ಗ್ರಾ.ಪಂ.ಗಳು ಇಕ್ಕಟ್ಟಿಗೆ ಸಿಲುಕಿವೆ.

ರಾಜ್ಯದಲ್ಲಿ 6,021 ಗ್ರಾ.ಪಂ.ಗಳಿದ್ದು, ಸುಮಾರು 1,400 ಕೋ.ರೂ. ವಿವಿಧ ರೂಪದ ತೆರಿಗೆ ಬರಲು ಬಾಕಿ ಇದೆ. ಪ್ರಸಕ್ತ ಸಾಲಿನಲ್ಲಿ 150 ಕೋಟಿ ರೂ. ವಸೂಲಾಗಿಲ್ಲ. ಹೀಗೆ ತೆರಿಗೆ ಬಾಕಿ ಉಳಿಸಿಕೊಂಡಿರುವವರ ಪೈಕಿ ನವೀಕರಿಸ ಬಹುದಾದ, ಅದರಲ್ಲೂ ಮುಖ್ಯವಾಗಿ ಪವನ ವಿದ್ಯುತ್‌ ಘಟಕ ಅಳವಡಿಸಿರುವ ಕಂಪೆನಿಗಳು ಇವೆ. ಬಾಕಿ ವಸೂಲಿಗೆ ಬಂದ ಗ್ರಾ.ಪಂ.ಗಳಿಗೆ ಆ ಕೈಗಾರಿಕೆಗಳು 2018ನೇ ಸಾಲಿನ ಅಧಿಸೂಚನೆ ಪ್ರತಿಯನ್ನು ತೋರಿಸುತ್ತಿವೆ. ಇದು ಪಂಚಾಯತ್‌ಗಳ ತಲೆನೋವು. ಉತ್ತರ ಕರ್ನಾಟಕದಲ್ಲಿ ಈ ಘಟಕಗಳು ಹೆಚ್ಚಿನ ಸಂಖ್ಯೆಯಲ್ಲಿವೆ ಎಂದು ಹೆಸರು ಹೇಳಲಿಚ್ಛಿಸದ ಇಲಾಖೆಯ ಹಿರಿಯ ಅಧಿ ಕಾರಿಯೊಬ್ಬರು “ಉದಯವಾಣಿ’ಗೆ ತಿಳಿಸಿದ್ದಾರೆ.

ಈ ಮೊದಲು ಕೈಗಾರಿಕೆಗಳಿಗೆ, ಅದರಲ್ಲೂ ಪವನ ವಿದ್ಯುತ್‌ ಘಟಕಗಳಿಗೆ ಪಂಚಾಯತ್‌ ಮಟ್ಟದಲ್ಲಿ ಬೇಕಾಬಿಟ್ಟಿ ತೆರಿಗೆ ನಿಗದಿಪಡಿಸಲಾಗುತ್ತಿತ್ತು. ಆದ್ದರಿಂದ ವೈಜ್ಞಾನಿಕವಾಗಿ ಅಧ್ಯಯನ ಮಾಡಿ, ತೆರಿಗೆ ನಿರ್ಧರಿಸಲಾಗಿದೆ. ಇದು ಪ್ರತಿ ಎರಡು ವರ್ಷಗಳಿಗೊಮ್ಮೆ ಪರಿಷ್ಕರಣೆ ಆಗುತ್ತದೆ. ನಿಯಮದ ಪ್ರಕಾರ ಯಾವುದೇ ಅಧಿಸೂಚನೆ ಅದನ್ನು ಹೊರಡಿಸಿದ ದಿನದಿಂದ ಅನ್ವಯ ಆಗುತ್ತದೆ. ಉದ್ದೇಶಿತ ಅಧಿಸೂಚನೆಗೂ ಇದು ಅನ್ವಯಿಸುತ್ತದೆ ಎಂದು ಗ್ರಾ. ಮತ್ತು ಪಂ.ರಾಜ್‌ ಇಲಾಖೆ ಪ್ರಧಾನ ಕಾರ್ಯದರ್ಶಿ ಉಮಾ ಮಹದೇವನ್‌ ಸ್ಪಷ್ಟಪಡಿಸಿದ್ದಾರೆ.

ಮತ್ತೂಂದು ಅಧಿಸೂಚನೆ?
ಈ ಗೊಂದಲದ ಹಿನ್ನೆಲೆಯಲ್ಲಿ ಶೀಘ್ರದಲ್ಲೇ ಮತ್ತೂಂದು ಅಧಿಸೂಚನೆ ಹೊರಡಿಸಲು ಇಲಾಖೆಯ ಉನ್ನತ ಮಟ್ಟದಲ್ಲಿ ಚಿಂತನೆ ನಡೆದಿದೆ ಎಂದು ಮೂಲಗಳು ತಿಳಿಸಿವೆ. ರಾಜ್ಯಾದ್ಯಂತ ನಾಲ್ಕು ಸಾವಿರ ಪವನ ವಿದ್ಯುತ್‌ ಟರ್ಬೈನ್‌ಗಳಿದ್ದು, ಅವುಗಳ ಸಾಮರ್ಥ್ಯ 4,800 ಮೆ.ವ್ಯಾ. ಇವೆಲ್ಲವೂ ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ, ಕೊಪ್ಪಳ, ಬೆಳಗಾವಿ, ತುಮಕೂರು ಮತ್ತಿತರ ಕಡೆಗಳಲ್ಲಿ ವ್ಯಾಪಿಸಿವೆ ಎಂದು ಕೆಆರ್‌ಇಡಿಎಲ್‌ ಅಧಿಕಾರಿ ಮಾಹಿತಿ ನೀಡಿದರು.

Advertisement

50 ಸಾವಿರದಿಂದ 5 ಸಾವಿರಕ್ಕೆ!
ಪ್ರತಿ ಯೂನಿಟ್‌ ಪವನ ವಿದ್ಯುತ್‌ಗೆ 50 ಸಾವಿರದಿಂದ ಒಂದು ಲಕ್ಷ ರೂ. ಇದ್ದುದನ್ನು ಪ್ರತಿ ಮೆ.ವ್ಯಾ.ಗೆ ಕೇವಲ 5 ಸಾವಿರ ರೂ.ಗೆ ಸೀಮಿತಗೊಳಿಸಿ ಎರಡು ವರ್ಷಗಳ ಹಿಂದೆ ಅಧಿಸೂಚನೆ ಹೊರಡಿಸಲಾಗಿತ್ತು. ಪರಿಣಾಮ ಶೇ. 90ರಷ್ಟು ಆದಾಯ ಕುಸಿತವಾಯಿತು. ಈ ಮೂಲದಿಂದ ತಲಾ ಗ್ರಾ.ಪಂ.ಗೆ ಸರಿಸುಮಾರು 10-15 ಲಕ್ಷ ರೂ. ಬರುತ್ತಿದ್ದ ಆದಾಯವು ಏಕಾಏಕಿ ಒಂದು ಲಕ್ಷ ರೂ.ಗೆ ಕುಸಿದಿದೆ. ತೆರಿಗೆ ಬಾಕಿ ವಸೂಲಿಗೆ ಮುಂದಾದರೆ ಕಂಪೆನಿಗಳು ಅಧಿಸೂಚನೆ ಪ್ರಕಾರ ಲೆಕ್ಕಹಾಕುವಂತೆ ಸೂಚಿಸುತ್ತವೆ. ಆದರೆ ಬಾಕಿ ತೆರಿಗೆಗೂ ಇದು ಅನ್ವಯ ಎಂದು ಅಧಿಸೂಚನೆಯಲ್ಲಿಲ್ಲ. ಆದರೆ ಕಂಪೆನಿಗಳು ಇದಕ್ಕೆ ಕ್ಯಾರೇ ಎನ್ನುತ್ತಿಲ್ಲ ಎಂದು ಗದಗ ಜಿಲ್ಲೆಯ ಪಿಡಿಒ ಒಬ್ಬರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ಅಧಿಸೂಚನೆಯಲ್ಲಿ ಏನಿದೆ?
ಕೆಲವು ಗ್ರಾ.ಪಂ.ಗಳು ಕೈಗಾರಿಕೆಗಳ ಕಟ್ಟಡ ಮತ್ತು ಪ್ರದೇಶಗಳ ಮೇಲೆ ನಿಯಮ ಬದ್ಧವಾಗಿ ತೆರಿಗೆ ಮತ್ತು ಶುಲ್ಕಗಳನ್ನು ವಿಧಿಸುತ್ತಿಲ್ಲ ಎಂಬ ದೂರು ಬಂದ ಹಿನ್ನೆಲೆಯಲ್ಲಿ ಇಲಾಖೆಯ ಅಂದಿನ ನಿರ್ದೇಶಕ ಎಂ.ಕೆ. ಕೆಂಪೇಗೌಡ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿತ್ತು. ಅದು ನೀಡಿದ ವರದಿ ಆಧರಿಸಿ ತೆರಿಗೆ ನಿಗದಿಪಡಿಸಲಾಗಿತ್ತು. ಅದರಂತೆ ನವೀಕರಿಸಬಹುದಾದ ವಿದ್ಯುತ್‌ ಘಟಕಗಳಿಗೆ ಉತ್ಪಾದನ ಸಾಮರ್ಥ್ಯ ಆಧರಿಸಿ ಪ್ರತಿ 100 ಕಿ.ವ್ಯಾ.ಗೆ 500 ರೂ. ಮತ್ತು ಒಂದು ಮೆ.ವ್ಯಾ.ಗೆ 5 ಸಾವಿರ ರೂ. ವಿಧಿಸಲು ಆದೇಶಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next