Advertisement

ಸರ್ಕಾರಿ ಕಚೇರಿಗಳಿಂದ ವಸೂಲಿಯಾಗದ ತೆರಿಗೆ

12:00 PM Aug 01, 2017 | Team Udayavani |

ಮೈಸೂರು: ನಗರ ಪಾಲಿಕೆ ವ್ಯಾಪ್ತಿಗೆ ಒಳಪಡುವ ಸರ್ಕಾರಿ ಕಚೇರಿಗಳಿಂದ ವಾರ್ಷಿಕ ತೆರಿಗೆ ವಸೂಲಿ ಮಾಡಿರುವ ಬಗ್ಗೆ ಪಾಲಿಕೆ ಕೌನ್ಸಿಲ್‌ ಸಭೆಯಲ್ಲಿ ಚರ್ಚೆ ನಡೆಯಿತು. ಮೇಯರ್‌ ಎಂ.ಜೆ.ರವಿಕುಮಾರ್‌ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಕೌನ್ಸಿಲ್‌ ಸಭೆಯಲ್ಲಿ ಪಾಲಿಕೆಯ 41ನೇ ವಾರ್ಡ್‌ ಸದಸ್ಯ ರವೀಂದ್ರಕುಮಾರ್‌ ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು.

Advertisement

ಮಹಾ ನಗರಪಾಲಿಕೆ ವ್ಯಾಪ್ತಿಗೊಳಪಡುವ ಸರ್ಕಾರಿ ಕಚೇರಿಗಳ ಸಂಖ್ಯೆ ಎಷ್ಟು ಹಾಗೂ ಈ ಕಚೇರಿಗಳಿಂದ ವಾರ್ಷಿಕ ತೆರಿಗೆ(ಸೇವಾ ಶುಲ್ಕ) ವಸೂಲಿ ಮಾಡಲಾಗುತ್ತಿದೆಯೇ, ಮಾಡದೆ ಇರುವ ಕಚೇರಿಗಳ ಸಂಖ್ಯೆ ಎಷ್ಟು ಎಂದು ಪ್ರಶ್ನಿಸಿದ್ದರು. ಇದಕ್ಕೆ ಪಾಲಿಕೆಯ 9 ವಲಯ ಕಚೇರಿ ವ್ಯಾಪ್ತಿಯಲ್ಲಿ 165 ಸರ್ಕಾರಿ ಕಚೇರಿಗಳಿದ್ದು, ಇವುಗಳಲ್ಲಿ 62 ಕಚೇರಿಗಳಿಂದ ವಾರ್ಷಿಕ ತೆರಿಗೆ ವಸೂಲಿ ಮಾಡಿದ್ದು, 103 ಕಚೇರಿಗಳಿಂದ ಸೇವಾ ಶುಲ್ಕ ವಸೂಲಿ ಮಾಡಿಲ್ಲ ಎಂದು ತಿಳಿಸಲಾಗಿತ್ತು.

ಈ ಹಿನ್ನೆಲೆ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ರವೀಂದ್ರಕುಮಾರ್‌, ಪಾಲಿಕೆ ವ್ಯಾಪ್ತಿಯ 165 ಸರ್ಕಾರಿ ಕಚೇರಿಗಳಲ್ಲಿ 103 ಕಚೇರಿಗಳಿಂದ ವಾರ್ಷಿಕ ತೆರಿಗೆ ವಸೂಲಿ ಮಾಡದೆ ಬಾಕಿ ಉಳಿದಿರುವುದು ದುರಾದೃಷ್ಟಕರ. ಈ ಕಚೇರಿಗಳಿಂದ ತೆರಿಗೆ ವಸೂಲಿ ಮಾಡಲು ಪಾಲಿಕೆ ಅಧಿಕಾರಿಗಳಿಗೆ ಸಾಧ್ಯವಿಲ್ಲ ಎಂಬುದಾದರೆ, ಸರ್ಕಾರಕ್ಕೆ ಇದೇ ರೀತಿಯಲ್ಲಿ ಪತ್ರ ಬರೆಯುತ್ತೇನೆ. ಸರ್ಕಾರಿ ಕಚೇರಿಗಳಿಂದ ವಾರ್ಷಿಕ ತೆರಿಗೆ ವಸೂಲಿ ಮಾಡಲು ಲೋಪವೇಕೆ? ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಮಾಜಿ ಮೇಯರ್‌ ಎಚ್‌.ಎನ್‌.ಶ್ರೀಕಂಠಯ್ಯ ಮಾತನಾಡಿ, ಪ್ರತಿಬಾರಿ ನಗರಪಾಲಿಕೆ ಬಜೆಟ್‌ನಲ್ಲಿ ಪಾಲಿಕೆ ವ್ಯಾಪ್ತಿಯ ಸರ್ಕಾರಿ ಕಚೇರಿಗಳಿಂದ ವಾರ್ಷಿಕ ತೆರಿಗೆ ಬರಲಿದೆ ಎಂದು ಅಂದಾಜಿಸಲಾಗಿರುತ್ತದೆ. ಆದರೆ ನಿರೀಕ್ಷಿತ ಪ್ರಮಾಣದಲ್ಲಿ ಪಾಲಿಕೆಗೆ ಆದಾಯ ಬರದಿದ್ದರೆ ಬಜೆಟ್‌ನಲ್ಲಿ ಕೈಗೊಳ್ಳುವ ಯೋಜನೆಗಳಿಗೆ ಹಣವನ್ನು ಖರ್ಚು ಮಾಡುವುದಾದರೋ ಹೇಗೆ? ಅಲ್ಲದೆ, ಸರ್ಕಾರಿ ಕಚೇರಿಗಳೇ ಸಮರ್ಪಕವಾಗಿ ತೆರಿಗೆ ಪಾವತಿಸದಿದ್ದಾಗ ಖಾಸಗಿ ಆಸ್ತಿಗಳಿಗೆ ತೆರಿಗೆ ಪಾವತಿಸುವಂತೆ ಸಾರ್ವಜನಿಕರನ್ನು ಕೇಳಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಮೇಯರ್‌ ರವಿಕುಮಾರ್‌, ಸರ್ಕಾರಿ ಕಚೇರಿಗಳಿಂದ ಪಾವತಿಯಾಗದೆ ಬಾಕಿಯಿರುವ ತೆರಿಗೆ ಹಣವನ್ನು ಶೀಘ್ರವೇ ವಸೂಲಿ ಮಾಡುವಂತೆ ಸಂಬಂಧಪಟ್ಟ ಕಂದಾಯ ಅಧಿಕಾರಿಗಳಿಗೆ ನಿರ್ದೇಶಿಸಲಾಗಿದೆ. ಒಂದೊಮ್ಮೆ ತೆರಿಗೆ ಪಾವತಿಸದಿದ್ದರೆ ಸಂಬಂಧಪಟ್ಟವರ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದರು.

Advertisement

ಪಾಲಿಕೆ ಆಯುಕ್ತ ಜಿ.ಜಗದೀಶ್‌ ಮಾತನಾಡಿ, ಆಸ್ತಿ ತೆರಿಗೆ ಸಂಗ್ರಹದ ಬಗ್ಗೆ ಪಾಲಿಕೆ ಅಧಿಕಾರಿಗಳು ಸ್ವಯಂ ಆಸ್ತಿ ತೆರಿಗೆ ಘೋಷಣೆ ಬಗ್ಗೆ ಪರಿಶೀಲನೆ ನಡೆಸಿದ ಪರಿಣಾಮ 30 ಕೋಟಿ ರೂ. ತೆರಿಗೆ ಸಂಗ್ರಹವಾಗಿದೆ. ಅಲ್ಲದೆ ಮುಂದಿನ ದಿನಗಳಲ್ಲಿ ಸ್ವಯಂ ಆಸ್ತಿ ತೆರಿಗೆ ಘೋಷಣೆ ಬಗ್ಗೆ ಮತ್ತೂಮ್ಮೆ ಪರಿಶೀಲಿಸಿದರೆ ಮುಂದಿನ ದಿನಗಳಲ್ಲಿ 50 ಕೋಟಿ ರೂ. ತೆರಿಗೆ ಸಂಗ್ರಹವಾಗುವ ನಿರೀಕ್ಷೆ ಹೊಂದಲಾಗಿದೆ ಎಂದು ಮಾಹಿತಿ ನೀಡಿದರು.

ಗದ್ದಲ, ಸಭೆ ಮುಂದಕ್ಕೆ: ಕೌನ್ಸಿಲ್‌ ಸಭೆಯ ಕಾರ್ಯ ಸೂಚಿಯಲ್ಲಿದ್ದ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಯದಿದ್ದರೂ ಮೇಯರ್‌ ಒಪ್ಪಿಗೆ ಸೂಚಿಸುತ್ತಿದ್ದರು. ಅದೇ ರೀತಿಯಲ್ಲಿ ಪಾಲಿಕೆ 35ನೇ ವಾರ್ಡ್‌ ವ್ಯಾಪ್ತಿಯ ದೊಡ್ಡವಕ್ಕಲಗೇರಿ ರಸ್ತೆಗಳಲ್ಲಿ ಕಾಂಕ್ರೀಟ್‌ ರಸ್ತೆಯ ನಿರ್ಮಿಸುವ 16.54 ಲಕ್ಷ ರೂ. ವೆಚ್ಚದ ಕಾಮಗಾರಿಗೂ ಒಪ್ಪಿಗೆ ನೀಡಲಾಯಿತು. ಆದರೆ ಯಾವುದೇ ಚರ್ಚೆ ನಡೆಯದಿದ್ದರೂ ಈ ಕಾಮಗಾರಿಗೆ ಒಪ್ಪಿಗೆ ನೀಡಿದ ಮೇಯರ್‌ ಕ್ರಮಕ್ಕೆ ನಗರಪಾಲಿಕೆ ಕಾಂಗ್ರೆಸ್‌ ಸದಸ್ಯರಾದ ಜಗದೀಶ್‌ ಹಾಗೂ ಅಯ್ಯೂಬ್‌ಖಾನ್‌ ಆಕ್ಷೇಪ ವ್ಯಕ್ತಪಡಿಸಿದರು.

ಈ ನಡುವೆ ಕಾರ್ಯಸೂಚಿ ವಿಷಯ ಹೊರತುಪಡಿಸಿ ಸಾಮಾನ್ಯ ವಿಷಯದ ಬಗ್ಗೆ ಚರ್ಚೆ ನಡೆಸಲು ಅವಕಾಶ ನೀಡುವಂತೆ ಕೆಲವು ಸದಸ್ಯರು ದನಿ ಎತ್ತಿದರು. ಇದರಿಂದಾಗಿ ಸಭೆಯಲ್ಲಿ ಹಲವು ಹೊತ್ತಿನವರೆಗೂ ಗದ್ದಲ ಉಂಟಾದ ಹಿನ್ನೆಲೆ ಮೇಯರ್‌ ರವಿಕುಮಾರ್‌ ಸಭೆಯನ್ನು ಮುಂದೂಡಿದರು. ಸಭೆಯಲ್ಲಿ ಪಾಲಿಕೆ ಉಪ ಮೇಯರ್‌ ರತ್ನಾ ಲಕ್ಷ್ಮಣ್‌ ಹಾಜರಿದ್ದರು.

ಇನ್ಮುಂದೆ ಬೆಳಗ್ಗೆ 11ಕ್ಕೆ ಸಭೆ
ಮುಂದಿನ ದಿನಗಳಲ್ಲಿ ಬೆಳಗ್ಗೆ 11 ಗಂಟೆಗೆ ನಗರ ಪಾಲಿಕೆ ಕೌನ್ಸಿಲ್‌ ಸಭೆ ನಡೆಸಲಾಗುವುದು ಎಂದು ಮೇಯರ್‌ ಎಂ.ಜೆ. ರವಿಕುಮಾರ್‌ ಹೇಳಿದರು. ಮಧ್ಯಾಹ್ನ 3 ಗಂಟೆಗೆ ಕೌನ್ಸಿಲ್‌ ಸಭೆ ನಡೆಸುವುದರ ಬಗ್ಗೆ ಕೆಲವು ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಮಧ್ಯಾಹ್ನದ ಸಂದರ್ಭದಲ್ಲಿ ಅನೇಕ ಅಧಿಕಾರಿಗಳು ಕೇಂದ್ರ ಕಚೇರಿಯಲ್ಲಿರುವುದಿಲ್ಲ, ಇದರಿಂದಾಗಿ ಕೆಲವು ವಿಷಯಗಳಿಗೆ ಅಧಿಕಾರಿಗಳಿಂದ ಸರಿಯಾದ ಉತ್ತರ ಅಥವಾ ಮಾಹಿತಿ ಪಡೆಯಲು ಸಾಧ್ಯವಾಗುವುದಿಲ್ಲ ಎಂದು ಪಾಲಿಕೆ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು. ಆದ್ದರಿಂದ ಮುಂದಿನ ದಿನಗಳಲ್ಲಿ ಬೆಳಗ್ಗೆ 11 ಗಂಟೆಗೆ ಕೌನ್ಸಿಲ್‌ ಸಭೆ ನಡೆಸುವುದಾಗಿ ಮೇಯರ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next