ಬೆಳಗಾವಿ: ಜಿಎಸ್‌ಟಿ ಜಾರಿಯಾದಾಗಿನಿಂದ ತೆರಿಗೆ ಸಂಗ್ರಹ ದುಪ್ಪಟ್ಟಾಗಿದ್ದು, ಇನ್ನು ಕೆಲವೇ ವರ್ಷಗಳಲ್ಲಿ ಜಿಎಸ್‌ಟಿಯ ಮೂಲ ಉದ್ದೇಶ ಈಡೇರಲಿದೆ ಎಂದು ಸಂಸದ ಸುರೇಶ ಅಂಗಡಿ ಹೇಳಿದರು. ನಗರದಲ್ಲಿ ಆದಾಯ ತೆರಿಗೆ ಇಲಾಖೆ ವತಿಯಿಂದ ರವಿವಾರ ನಡೆದ ಜಿಎಸ್‌ಟಿ ಅನುಷ್ಠಾನದ ಮೊದಲ ವರ್ಷಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಜಿಎಸ್‌ಟಿಯಿಂದಾಗಿ ತೆರಿಗೆ ಅಪಾರ ಪ್ರಮಾಣದಲ್ಲಿ ಹರಿದು ಬರುತ್ತಿದೆ. ದೇಶದ ಖಜಾನೆ ಭರ್ತಿಯಾಗುತ್ತಿದ್ದು, ಭಾರತದ ಸಮಗ್ರ ಅಭಿವೃದ್ಧಿಗೆ ಇದು ಸಹಕಾರಿಯಾಗಲಿದೆ. ಇನ್ನು ಮುಂದಿನ ದಿನಗಳಲ್ಲಿ ತೆರಿಗೆ ಪ್ರಮಾಣದಲ್ಲಿ ಗಣನೀಯ ಇಳಿಕೆ ಕಂಡು ಬರಲಿದೆ ಎಂದು ಹೇಳಿದರು.
ಜಿಎಸ್‌ಟಿಯಿಂದ ಯುವ ಜನತೆ ಹಾಗೂ ಉದ್ಯಮಿಗಳಿಗೆ ಬಹಳಷ್ಟು ಅನುಕೂಲವಾಗಲಿದೆ. ಭಾರತದ ಭವಿಷ್ಯದ ದೃಷ್ಟಿಯಿಂದ ಪ್ರಧಾನಿ ನರೇಂದ್ರ ಮೋದಿ ಕೈಗೊಂಡ ನಿರ್ಧಾರ ಪ್ರಸ್ತುತವಾಗಿದೆ. ಜಿಎಸ್‌ಟಿ ಅನುಷ್ಠಾನದ ನಂತರ ದೇಶದಲ್ಲಿ ತೆರಿಗೆ ಸಂಗ್ರಹದ ಪ್ರಮಾಣದಲ್ಲಿಯೂ ಹೆಚ್ಚಳವಾಗಿದೆ ಎಂದು ಹೇಳಿದರು.
ಜಿಎಸ್‌ಟಿ ಅನುಷ್ಠಾನದ ಯಶಸ್ಸಿನಲ್ಲಿ ಎಲ್ಲ ಪಕ್ಷಗಳು ಕೈ ಜೋಡಿಸಿವೆ. ಹೀಗಾಗಿ ಎಲ್ಲ ಪಕ್ಷಗಳ ಸಂಸದರನ್ನು ಅಭಿನಂದಿಸಲು ನಾನು ಮರೆಯುವುದಿಲ್ಲ. ಒಂದೇ ದೇಶ, ಒಂದೇ ತೆರಿಗೆ ಎಂಬ ಪರಿಕಲ್ಪನೆಯಡಿ ಜಿಎಸ್‌ಟಿ ಅನುಷ್ಠಾನಕ್ಕೆ ತರಲು ತೆಗೆದುಕೊಂಡ ನಿರ್ಧಾರ ನಿಜಕ್ಕೂ ಪ್ರಶಂಸನೀಯ ಎಂದರು. ಬೆಳಗಾವಿ ವ್ಯಾಪ್ತಿಯಲ್ಲಿ ತೆರಿಗೆ ಸಂಗ್ರಹದ ಪ್ರಮಾಣ ದುಪ್ಪಟ್ಟಾಗಿದೆ. ಇದು ಬೆಳಗಾವಿಗರಿಗೂ ಅನುಕೂಲಕರವಾಗಲಿದ್ದು, ಮುಂದಿನ ದಿನಗಳಲ್ಲಿ ಬೆಳಗಾವಿ ಅಭಿವೃದ್ಧಿಗೆ ಮತ್ತಷ್ಟು ಲಾಭದಾಯಕವಾಗಿದೆ ಎಂದರು.
ರಾಜ್ಯಸಭಾ ಸದಸ್ಯ ಡಾ| ಪ್ರಭಾಕರ ಕೋರೆ ಮಾತನಾಡಿ, ಜಿಎಸ್‌ಟಿ ಸ್ನೇಹಮಯಿ ತೆರಿಗೆ ಪದ್ಧತಿಯಾಗಿದೆ. ದೇಶದ ಆದಾಯ ಹೆಚ್ಚಳಕ್ಕೂ ಕಾರಣವಾಗಿದೆ. ಈ ಮೊದಲು ವ್ಯಾಪಾರಸ್ಥರು, ಉದ್ದಿಮೆದಾರರಿಗೆ ತೆರಿಗೆ ಅಧಿಕಾರಿಗಳಿಂದ ಆಗುತ್ತಿದ್ದ ಕಿರುಕುಳ ಜಿಎಸ್‌ಟಿ ಅನುಷ್ಠಾನದಿಂದ ತಡೆದಂತಾಗಿದೆ ಎಂದರು.ಆದಾಯ ತೆರಿಗೆ ಇಲಾಖೆ ಆಯುಕ್ತ ವಿಜಯಕುಮಾರ ಮಾತನಾಡಿ, ಒಂದು ದೇಶ, ಒಂದು ಮಾರುಕಟ್ಟೆ, ಒಂದು ತೆರಿಗೆ ಎನ್ನುವುದು ಜಿಎಸ್‌ಟಿಯ ಮೂಲ ಉದ್ದೇಶವಾಗಿದ್ದು, ಈ ಉದ್ದೇಶದ ಸಾಫಲ್ಯ ಸಾಧಿಸುವಲ್ಲಿ ಜಿಎಸ್‌ಟಿ ಮೊದಲ ವರ್ಷದಲ್ಲಿಯೇ ಯಶಸ್ವಿಯಾಗಿದೆ. ಜಿಎಸ್‌ಟಿ ಸಂಪೂರ್ಣ ದೇಶವನ್ನು ಒಗ್ಗೂಡಿಸಿದೆ ಎಂದರು. ಬೆಳಗಾವಿ ವ್ಯಾಪ್ತಿಯಲ್ಲಿಯೇ 5 ಸಾವಿರದಷ್ಟು ಕೇಂದ್ರ ಅಬಕಾರಿ ಹಾಗೂ 35 ಸಾವಿರದಷ್ಟು ಸೇವಾ ತೆರಿಗೆದಾರರನ್ನು ಜಿಎಸ್‌ಟಿ ಗೆ ಪರಿವರ್ತಿಸಲಾಗಿದೆ. ಜಿಎಸ್‌ಟಿ ಬಗ್ಗೆ ಆದಾಯ ತೆರಿಗೆ ಇಲಾಖೆ ದೇಶದ ಅತಿ ಸಣ್ಣ, ಸಣ್ಣ ಹಾಗೂ ಮದ್ಯಮ ಉದ್ದಿಮೆದಾರರಿಗೆ ಸಮಗ್ರ ತಿಳಿವಳಿಕೆ ನೀಡಿದೆ ಎಂದರು. ಆದಾಯ ತೆರಿಗೆ ಇಲಾಖೆ ಜಂಟಿ ಆಯುಕ್ತ ಎಸ್.ಕೆ. ಮೆಹತಾ ಸ್ವಾಗತಿಸಿದರು. ಆಡಿಟ್ ವಿಭಾಗದ ಆಯುಕ್ತ ಡಾ| ಶಿವಾಜಿ ಸ್ವಾಗತಿಸಿದರು.
ಜಿಎಸ್‌ಟಿ ಅಂದ್ರೆ ಒಬ್ಬನೇ ಗಂಡ, ಒಬ್ಬಳೇ ಹೆಂಡತಿ
ಜಿಎಸ್‌ಟಿ ಅಂದರೆ ಒಬ್ಬನೇ ಗಂಡ, ಒಬ್ಬಳೇ ಹೆಂಡತಿ ಎಂಬಂತಿದೆ. ಹೀಗಾಗಿ ಜಿಎಸ್ ಟಿಯನ್ನು ಗೊಂದಮಯವಾಗಿ
ಅರ್ಥೈಸಿಕೊಳ್ಳುವುದು ಬೇಡ. ಜಿಎಸ್‌ಟಿಯಿಂದ ದೇಶದ ಆರ್ಥಿಕ ಸ್ಥಿತಿ ಸುಧಾರಿಸುತ್ತಿದೆ. ಒಂದೇ ದೇಶ, ಒಂದೇ ತೆರಿಗೆ ಎಂಬ ಅರ್ಥ ನೀಡಲಾಗಿದೆ ಎಂದು ರಾಜ್ಯಸಭಾ ಸದಸ್ಯ ಡಾ| ಪ್ರಭಾಕರ ಕೋರೆ ವ್ಯಾಖ್ಯಾನಿಸಿದರು.