ತಾವರಗೇರಾ: ಪಟ್ಟಣಕ್ಕೆ ಶಾಶ್ವತ ಕುಡಿಯುವ ನೀರು ಪೂರೈಕೆಗಾಗಿ ಕೊನೆಗೂ ಶಾಶ್ವತ ಪರಿಹಾರ ದೊರೆತಿದೆ. ಪಟ್ಟಣಕ್ಕೆ ಕುಡಿಯುವ ನೀರು ಪೂರೈಸಲು 88.16 ಕೋಟಿ ರೂ. ವೆಚ್ಚದ ಯೋಜನೆಗೆ ಗುರುವಾರ ನಡೆದ ಸಂಪುಟ ಸಭೆಯಲ್ಲಿ ಆಡಳಿತಾತ್ಮಕ ಅನುಮೋದನೆ ಸಿಕ್ಕಿದೆ.
ಪಟ್ಟಣಕ್ಕೆ ಕುಡಿಯುವ ನೀರಿಗಾಗಿ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ 18 ಕಿ.ಮೀ. ದೂರದ ತುರ್ವಿಹಾಳ ಹತ್ತಿರದ ತುಂಗಾಭದ್ರ ನದಿ ಎಡದಂಡೆ ಕಾಲುವೆಯಿಂದ ಪೈಪ್ ಮೂಲಕ ನೀರು ತರಬಹುದು ಎಂದು ನೀಡಿದ ಸಲಹೆ ಮೇರೆಗೆ ಅಧ್ಯಕ್ಷೆ, ಉಪಾಧ್ಯಕ್ಷ, ಸದಸ್ಯರು, ಪಪಂ ಮುಖ್ಯಾಧಿಕಾರಿಯೊಂದಿಗೆ ಚರ್ಚಿಸಿ ಎರಡು ವರ್ಷಗಲ ಹಿಂದೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಪ್ರಸ್ತಾವನೆ ಹಿನ್ನೆಲೆಯಲ್ಲಿ ಪಪಂ ಉಪಾಧ್ಯಕ್ಷ ನಾರಾಯಣಗೌಡ ಸೇರದಂತೆ ಪಪಂ ಸದಸ್ಯರು, ಬೆಂಗಳೂರಿನಲ್ಲಿರುವ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ಕಚೇರಿಗೆ ಹೋಗಿ ಚರ್ಚಿಸಿದರು. ಶಾಸಕ ಅಮರೇಗೌಡ ಪಾಟೀಲ ಬಯ್ನಾಪೂರ ನೇತೃತ್ವದಲ್ಲಿ ಆಗಿನ ಪೌರಾಡಳಿತ ಸಚಿವರಾದ ಈಶ್ವರ ಖಂಡ್ರೆ ಅವರನ್ನು ಸಂಪರ್ಕಿಸಿ, ಪಟ್ಟಣದ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ವಿವರಿಸಿದ್ದರು.
ಈ ಯೋಜನೆ ಜಾರಿಗೆ ಬರಬೇಕೆಂದರೆ ಪಪಂನಿಂದ 13.33 ಲಕ್ಷ ರೂ. ಅಂದಾಜು ಪಟ್ಟಿಯನ್ನು ತಯಾರಿಸಲು ಮತ್ತು ನೀರು ಸಂಗ್ರಹ ಮಾಡಲು ಸ್ಥಳ ನಿಗದಿ ಮಾಡಬೇಕು. ಅಂದಾಗ (ಡಿಪಿಆರ್) ನೀರು ಸರಬರಾಜು ವ್ಯವಸ್ಥೆ ವಿಸು÷ತವಾದ ಯೋಜನಾ ವರದಿ ತಯಾರಿಸಿ ಕೊಡಲಾಗಿತ್ತು. ಈ ಹಿನ್ನೆಲೆಯಲ್ಲಿ 2017 ಸೆಪ್ಟಂಬರ್ 1ರಂದು ಪಪಂ ಆಡಳಿತ ಮಂಡಳಿ ಅವರು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ಉಪವಿಭಾಗ ಹುನಗುಂದ ಸಂಪರ್ಕಿಸಿ ನೀರು ಸಂಗ್ರಹಿಸಲು ನಿಯೋಜಿಸಿದ್ದ ಸ್ಥಳ ಪರಿಶೀಲಿಸಿದ್ದರು.
ನಂತರ ವಿಜಯಪುರದಲ್ಲಿರುವ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿಯ ಕಾರ್ಯಪಾಲಕ ಕಚೇರಿಯ ಎಕ್ಸಿಕ್ಯೂಟಿವ್ ಇಂಜಿನಿಯರ್ ಅಶೋಕ ಮಾಡ್ಯಾಳ, ಹುನಗುಂದ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜನಿಯರ್ ಜಗದೀಶ ಹೊಸಮನಿ ಮತ್ತು ಸಿಬ್ಬಂದಿ ಆಗಿನ ಕುಷ್ಟಗಿ ತಹಶೀಲ್ದಾರ್ ಎಂ. ಗಂಗಪ್ಪ ಅವರೊಂದಿಗೆ ಪಟ್ಟಣದಿಂದ ಸಿಂಧನೂರು ರಸ್ತೆಗೆ 2 ಕಿ.ಮೀ. ದೂರದ ರಾಮನಗೌಡ ಕೆರೆ ಪರಿಶೀಲಿಸಿದ್ದರು. ಈ ಕೆರೆ 0.15 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. ಈ ಯೋಜನೆ ಸಾಕಾರಗೊಂಡರೆ ಪಟ್ಟಣದ ನೀರಿನ ಸಮಸ್ಯೆ ಶಾಶ್ವತವಾಗಿ ದೂರಾಗಲಿದೆ.
•ಎನ್. ಶಾಮೀದ್