ಮಂಗಳೂರು: ಅರಬ್ಬಿ ಸಮುದ್ರದಲ್ಲಿ ಸೃಷ್ಟಿಯಾಗಿರುವ ವಾಯುಭಾರ ಕುಸಿತ ಚಂಡಮಾರುತವಾಗಿ ಪರಿವರ್ತನೆಯಾಗಿದ್ದು, ಕರಾವಳಿ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗುತ್ತಿದೆ.
ಜಿಲ್ಲೆಯ ಕೆಲವೆಡೆ ಶುಕ್ರವಾರ ರಾತ್ರಿಯೇ ಮಳೆ ಆರಂಭಗೊಂಡಿದ್ದು, ಶನಿವಾರವೂ ಮುಂದುವರೆದಿದೆ. ಮಳೆಯ ಜೊತೆ ಗಾಳಿ ಕೂಡ ಇದ್ದು, ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಿದೆ.
ಚಂಡಮಾರುತದ ಪರಿಣಾಮ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಈಗಾಗಲೇ ಎಚ್ಚರಿಕೆ ನೀಡಲಾಗಿದೆ. ಮುನ್ನೆಚ್ಚರಿಕಾ ಉದ್ದೇಶದಿಂದ ಜಿಲ್ಲೆಗೆ ಎನ್ ಡಿಆರ್ ಎಫ್ ತಂಡ ಆಗಮಿಸಿದೆ.
ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆಯಂತೆ ರಾಜ್ಯ ಕರಾವಳಿ ಭಾಗದಲ್ಲಿ ಇನ್ನೂ ಎರಡು ದಿನಗಳ ಕಾಲ ಉತ್ತಮ ಮಳೆಯಾಗುವ ಸಾಧ್ಯತೆ ಇದೆ.
ಮೂಡುಬಿದಿರೆ: ಶನಿವಾರ ಮುಂಜಾನೆಯಿಂದಲೇ ಮೂಡುಬಿದಿರೆ ಹಾಗೂ ಆಸುಪಾಸಿನ ಗ್ರಾಮಗಳಲ್ಲಿ ವ್ಯಾಪಕವಾಗಿ ಮಳೆ ಸುರಿಯುತ್ತ ಇದೆ. ಕರಿ ಮೋಡ ದಿಟ್ಟೈಸಿದೆ. ದಿನವಿಡೀ ಮಳೆ ಸುರಿಯುವ ಎಲ್ಲ ಲಕ್ಷಣ ಗೋಚರಿಸುತ್ತಿದೆ.
ಸುಳ್ಯ: ಕಳೆದ ರಾತ್ರಿಯಿಂದ ತೌಖ್ತೇ ಚಂಡಮಾರುತದ ಪರಿಣಾಮ ಸುಳ್ಯ ತಾಲೂಕಿನಾದ್ಯಂತ ತುಂತುರು ಮಳೆ ಮುಂದುವರೆಯುತ್ತಿದೆ.