Advertisement

ತಾತಯ್ಯನವರ ವಾಣಿ ಸ್ಮರಣೀಯ

12:07 PM Aug 21, 2017 | |

ಮೈಸೂರು: ಪರಸ್ಪರ ಪ್ರೀತಿ, ವಿಶ್ವಾಸ, ನಂಬಿಕೆಯಿಂದ ಮಾತ್ರ ಸದೃಢ ಸಮಾಜ ನಿರ್ಮಾಣ ಸಾಧ್ಯ ಎಂದು ರಾಮಕೃಷ್ಣ ವಿದ್ಯಾಶಾಲೆಯ ಸ್ವಾಮಿ ಯುಕ್ತೇಶಾನಂದಜೀ ಮಹಾರಾಜ್‌ ಹೇಳಿದರು. ಮೈಸೂರು ಬಲಿಜ ಸಮಾಜದ ವತಿಯಿಂದ ನಗರದಲ್ಲಿ ಭಾನುವಾರ ಏರ್ಪಡಿಸಿದ್ದ ಕೈವಾರ ತಾತಯ್ಯನವರ ಗುರುವಂದನಾ ಮತ್ತು ಪ್ರತಿಭಾ ಪುರಸ್ಕಾರ ಉದ್ಘಾಟಿಸಿ ಮಾತನಾಡಿದರು.

Advertisement

ಸಮಾಜದಲ್ಲಿ ವರ್ಗ ಸಂಘರ್ಷಗಳಿರಬಾರದು, ಸಂಘರ್ಷಗಳಿಂದ ಸ್ವಸ್ಥ ಸಮಾಜವನ್ನು ಕಾಣಲು ಸಾಧ್ಯವಾಗದು ಎಂದರು. ಸಾಮಾನ್ಯರಾಗಿ ಜನಿಸಿ ಅಸಮಾನ್ಯರೆನಿಸಿಕೊಂಡ ಅವತಾರ ಪುರುಷ ಕೈವಾರ ತಾತಯ್ಯ ಶ್ರೀಯೋಗಿ ನಾರೇಯಣ ಯತೀಂದ್ರರರು ತಮ್ಮ ಆದರ್ಶ ಜೀವನ ಹಾಗೂ ಆಧ್ಯಾತ್ಮಿಕ ವಿಚಾರಧಾರೆಯೊಂದಿಗೆ ಸಮಾಜಸೇವೆಯ ದೀಕ್ಷೆ ತೊಟ್ಟು ನವಸಮಾಜ ನಿರ್ಮಾಣಕ್ಕಾಗಿ ಹಂಬಲಿಸಿದ ಕ್ರಾಂತಿ ಪುರುಷ. ಅವರ ಸ್ಮರಣೆ ನಮಗೆ ದಾರಿದೀಪ ಎಂದು ಹೇಳಿದರು.

ಉನ್ನತ ಭಾವನೆಗಳಿದ್ದರೆ ಮನುಷ್ಯ ಉನ್ನತ ಜೀವನವನ್ನು ನಡೆಸಬಲ್ಲ ಎಂಬ ತಾತಯ್ಯನವರ ವಾಣಿ ಸ್ಮರಣೀಯವಾದುದು. ನಿಸ್ವಾರ್ಥ ಸೇವೆ ಜನಮಾನಸದಲ್ಲಿ ಸದಾಕಾಲ ಉಳಿಯುತ್ತದೆ. ಇತರಿಗಾಗಿ ಬದುಕದವನು ಬದುಕಿಯೂ ಸತ್ತಂತೆ. ಹೀಗಾಗಿ ನಾವೆಲ್ಲರೂ ಸಮಾಜ ಕಟ್ಟುವ ಕೆಲಸದಲ್ಲಿ ತೊಡಗೋಣ. ಅವರ ವಚನಗಳನ್ನು ಆದರ್ಶವಾಗಿಟ್ಟುಕೊಂಡು ಬದುಕೋಣ ಎಂದು ಕಿವಿಮಾತು ಹೇಳಿದರು.

ಇದೇ ವೇಳೆ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಹೆಚ್ಚು ಅಂಕ ಗಳಿಸಿದ ಸಮಾಜದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎಂ.ಆರ್‌.ಸೀತಾರಾಂ ಅಧ್ಯಕ್ಷತೆ ವಹಿಸಿದ್ದರು. ಮೈಲ್ಯಾಕ್‌ ಅಧ್ಯಕ್ಷ ಎಚ್‌.ಎ.ವೆಂಕಟೇಶ್‌, ಮಾಜಿ ಮೇಯರ್‌ ಸಂದೇಶ್‌ ಸ್ವಾಮಿ, ಬಿಜೆಪಿ ಮುಖಂಡ ಎಚ್‌.ವಿ.ರಾಜೀವ್‌, ಉದ್ಯಮಿ ವಿಜಯ್‌ ಸೂರ್ಯ ನಾಯ್ಡು, ಶ್ವೇತ ಎನ್‌.ನಾಯ್ಡು, ರಶ್ಮಿ, ಹೇಮಂತ್‌ ಕುಮಾರ್‌ ಮತ್ತಿತರರು ಉಪಸ್ಥಿತರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next