Advertisement

ಟ್ಯಾಟೂ ನೀಡಿದ ಸಾಕ್ಷಿ: ಕೊಲೆ ಪ್ರಕರಣವನ್ನು ಭೇದಿಸಲು ಪೊಲೀಸರಿಗೆ ಸಹಾಯ ಮಾಡಿದ ಟ್ಯಾಟೂ

11:17 AM Aug 29, 2021 | Team Udayavani |

ಹೊಸದಿಲ್ಲಿ: ಟ್ರಾಲಿ ಬ್ಯಾಗಿನೊಳಗೆ ವ್ಯಕ್ತಿಯ ಶವ ತುಂಬಿ ಚರಂಡಿಯಲ್ಲಿ ಎಸೆದಿದ್ದ ಪ್ರಕರಣವನ್ನು ದೆಹಲಿ ಪೊಲೀಸರು ಒಂದು ಹಚ್ಚೆ (ಟ್ಯಾಟೂ) ದ ಸಹಾಯದಿಂದ ಭೇದಿಸಿದ್ದಾರೆ. ಕೊಲೆ ಮತ್ತು ಕೊಲೆಗೆ ಕುಮ್ಮಕ್ಕು ನೀಡಿದ ಕಾರಣಕ್ಕೆ ಮೃತಪಟ್ಟ ವ್ಯಕ್ತಿಯ ಪತ್ನಿ ಮತ್ತು ಇತರ ಆರು ಜನರನ್ನು ಪೊಲೀಸರು ಬಂಧಿಸಿದ್ದಾರೆ.

Advertisement

ನ್ಯೂ ಫ್ರೆಂಡ್ಸ್ ಕಾಲೋನಿ ಪೊಲೀಸ್ ಠಾಣೆಯ ತನಿಖಾಧಿಕಾರಿಗಳ ತಂಡವು ಮೃತನ ತೋಳಿನ ಮೇಲೆ ‘ನವೀನ್ ಎಂದು ಬರೆದಿದ್ದ ಒಂದೇ ಒಂದು ಟ್ಯಾಟೂ ಸಹಾಯದಿಂದ ಪ್ರಕರಣವನ್ನು ಬಿಚ್ಚಿಟ್ಟಿದೆ. ಸುಖದೇವ್ ವಿಹಾರ್‌ನ ಡಿಡಿಎ ಫ್ಲಾಟ್‌ಗಳ ಬಳಿ ಹಾಜಿ ಕಟ್ ಮತ್ತು ಗ್ಯಾಸ್ ಗೋಡೌನ್ ನಡುವೆ ಒಳಚರಂಡಿ ಕಾಲುವೆಯಲ್ಲಿ ಕಪ್ಪು ಟ್ರಾಲಿ ಬ್ಯಾಗಿನೊಳಗೆ ಶವ ತುಂಬಿ ಎಸೆಯಲಾಗಿತ್ತು. ಇದು ಆಗಸ್ಟ್ 10 ರಂದು ಪತ್ತೆಯಾಗಿತ್ತು. ಶವದ ಮುಖವನ್ನು ಗುರುತು ಹಿಡಿಯದ ರೀತಿ ಅದು ಪತ್ತೆಯಾಗಿತ್ತು. ಬೇರೆ ಯಾವುದೇ ಗುರುತು ಇರಲಿಲ್ಲ.

ಈ ಬಗ್ಗೆ ತನಿಖೆ ಆರಂಭಿಸಿದ ಪೊಲೀಸರು ಆದರೆ ಮೊದಲಿಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಸ್ಥಳದಲ್ಲಿ ಯಾವುದೇ ಪ್ರತ್ಯಕ್ಷ ಸಾಕ್ಷಿಗಳು ಕಂಡುಬಂದಿಲ್ಲ. ಹೀಗಾಗಿ, ಆ ವ್ಯಕ್ತಿಯನ್ನು ಬೇರೆಡೆ ಕೊಲೆ ಮಾಡಿ ಮೃತ ದೇಹವನ್ನು ನಂತರ ಚರಂಡಿಯಲ್ಲಿ ಎಸೆಯಲಾಗಿದೆ ಎಂಬ ತೀರ್ಮಾನಕ್ಕೆ ಪೊಲೀಸರು ಬಂದಿದ್ದರು.

ಇದನ್ನೂ ಓದಿ:ಕಾರು ಮತ್ತು ಬೈಕ್ ನಡುವೆ ಭೀಕರ ಅಪಘಾತ : ಸವಾರರು ಪ್ರಾಣಾಪಾಯದಿಂದ ಪಾರು

ತನಿಖಾಧಿಕಾರಿಗಳು ನಾಪತ್ತೆಯಾದವರ ಪಟ್ಟಿ ನೋಡಿದಾಗ ಆಗಸ್ಟ್ 12 ರಂದು ನೆಬ್ ಸರಾಯ್ ಪೊಲೀಸ್ ಠಾಣೆಯಲ್ಲಿ ದೇವ್ಲಿ ಗ್ರಾಮದ ನವೀನ್ ನಾಪತ್ತೆಯಾಗಿದ್ದಾನೆ ಎಂದು ದೂರು ನೀಡಲಾಗಿತ್ತು. ದೂರನ್ನು ನವೀನ್ ಪತ್ನಿ ಮುಸ್ಕಾನ್ ಸಲ್ಲಿಸಿದ್ದು, ಪತಿ ಆಗಸ್ಟ್ 8 ರಿಂದ ಮನೆಗೆ ಮರಳಿಲ್ಲ ಎಂದು ಹೇಳಿದ್ದರು. ಆದರೆ ಆತನ ಬಲಗೈ ಮುಂದೋಳಿನ ಮೇಲೆ ‘ನವೀನ್’ ಎಂಬ ಟ್ಯಾಟೂ ಬಗ್ಗೆ ಮಾಹಿತಿಯನ್ನು ಪೊಲೀಸರಿಗೆ ಆಕೆ ನೀಡಿರಲಿಲ್ಲ.

Advertisement

ಮುಸ್ಕಾನ್ ಗಾಗಿ ಹುಡುಕಾಟ ಆರಂಭಿಸಿದ ಪೊಲೀಸರು ಆಕೆ ನೀಡಿದ ವಿಳಾಸದಲ್ಲಿ ಹುಡುಕಿದಾಗ ಆಕೆ ಅಲ್ಲಿರಲಿಲ್ಲ. ಆಕೆಯ ಮನೆಯ ಮಾಲೀಕರು ಆಗಸ್ಟ್ 11 ರಂದು ಇದ್ದಕ್ಕಿದ್ದಂತೆ ಆಕೆ ಮನೆ ಖಾಲಿ ಮಾಡಿ ಬೇರೆ ಕಡೆಗೆ ಹೋಗಿದ್ದಾರೆ ಎಂದು ಹೇಳಿದ್ದರು. ಮುಸ್ಕಾನ್ ಅಲ್ಲಿಂದ ಹೊರಡುವ ಕೆಲವು ರಾತ್ರಿಗಳ ಮೊದಲು ಆಕೆಯ ಮನೆಯಲ್ಲಿ ಗದ್ದಲವನ್ನು ಉಂಟಾಗಿದ್ದನ್ನು ಕೇಳಿದ್ದೇವೆ ಎಂದು ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಮುಸ್ಕಾನ್ ಮೊಬೈಲ್ ಸಂಖ್ಯೆಯನ್ನು ಟ್ರೇಸ್ ಮಾಡಿದ ಪೊಲೀಸರಿಗೆ ಆಕೆ ದೆಹಲಿಯ ಖಾನಪುರ ಗ್ರಾಮಕ್ಕೆ ಹೋಗಿರುವುದು ಪತ್ತೆಯಾಗಿತ್ತು.

ಪೊಲೀಸರು ವಿಚಾರಣೆ ನಡೆಸಿದಾಗ ಆರಂಭದಲ್ಲಿ ಮುಸ್ಕಾನ್ ತನ್ನ ಗಂಡನ ತೋಳಿನ ಮೇಲೆ ‘ನವೀನ್’ ಎಂಬ ಟ್ಯಾಟೂ ಇರುವುದನ್ನು ಒಪ್ಪಿರಲಿಲ್ಲ. ಈ ಮೂಲಕ ತನಿಖೆಯ ದಾರಿತಪ್ಪಿಸಲು ಪ್ರಯತ್ನಿಸಿದ್ದಳು. ಪೊಲೀಸರು ಮುಸ್ಕಾನ್ ಮೊಬೈಲ್ ಫೋನಿನಲ್ಲಿ ನವೀನ್ ನ ಫೋಟೋಗಳನ್ನು ಪರಿಶೀಲಿಸಿದಾಗ ಟ್ಯಾಟೂ ಬಗ್ಗೆ ಖಚಿತವಾಗಿತ್ತು. ಅದಲ್ಲದೆ ನವೀನ್ ಸಹೋದರ ಸಂದೀಪ್‌ ನಿಂದ ಟ್ಯಾಟೂ ಬಗ್ಗೆ ಮಾಹಿತಿ ನೀಡಿದ್ದರು.

ಪೊಲೀಸ್ ತಂಡವು ಮುಸ್ಕಾನ್ ಮೊಬೈಲ್ ಫೋನ್ ಪರಿಶೀಲಿಸಿ ಆಕೆ ಡಿಲೀಟ್ ಮಾಡಿದ್ದ ದೂರವಾಣಿ ಕರೆ ದಾಖಲೆಗಳನ್ನು ಮರು ಪಡೆದುಕೊಂಡು ತನಿಖೆ ನಡೆಸಿದ್ದರು. ಈ ವೇಳೆ ಆಕೆ ಒಂದು ಫೋನ್ ಸಂಖ್ಯೆಯೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿರುವುದನ್ನು ಕಂಡುಬಂದಿತ್ತು. ಅದು ಆಕೆಯ ಸ್ನೇಹಿತ ಜಮಾಲ್‌ಗೆ ಸೇರಿದ್ದು ಎಂದು ಖಚಿತಪಡಿಸಿಕೊಂಡ ಪೊಲೀಸರು ಜಮಾಲ್‌ನ ಸಿಡಿಆರ್ ಅನ್ನು ವಿಶ್ಲೇಷಿಸಿದಾಗ, ಆಗಸ್ಟ್ 7-8ರ ರಾತ್ರಿ ಆತ ದೇವ್ಲಿ ಗ್ರಾಮದಲ್ಲಿರುವ ಮುಸ್ಕಾನ್ ನಿವಾಸದಲ್ಲಿದ್ದ ಎಂದು ಪತ್ತೆಯಾಗಿತ್ತು.

ಮತ್ತಷ್ಟು ಅನುಮಾನಗೊಂಡ ಪೊಲೀಸರು ಮುಸ್ಕಾನ್ ರನ್ನು ಸುದೀರ್ಘವಾಗಿ ವಿಚಾರಣೆಗೊಳಪಡಿಸಿತ್ತು. ಅಂತಿಮವಾಗಿ ಆಗಸ್ಟ್ 7 ರ ರಾತ್ರಿ, ಅವಳು ತನ್ನ ನಿವಾಸದಲ್ಲಿ ಜಮಾಲ್ ಜೊತೆಗಿದ್ದಳು. ಇದ್ದಕ್ಕಿದ್ದಂತೆ ಅವಳ ಪತಿ ನವೀನ್ ಬಂದಾಗ ಜಮಾಲ್ ನನ್ನು ಕಂಡು ಸಿಟ್ಟಿಗೆದ್ದಿದ್ದ. ನವೀನ್ ಮಸ್ಕಾನ್ ನ ಮುಖಕ್ಕೆ ಹೊಡೆದಿದ್ದ. ಮನೆಯ ಹೊರಗಿದ್ದ ಜಮಾಲ್‌ನ ಇಬ್ಬರು ಸ್ನೇಹಿತರಾದ ವಿವೇಕ್ ಬಗ್ಡಿ ಮತ್ತು ಕೌಶ್ಲೇಂದರ್ ಈ ಗಲಾಟೆ ಕೇಳಿ ಮನೆಯನ್ನು ಪ್ರವೇಶಿಸಿ ನವೀನ್ ಮೇಲೆ ಎರಗಿದ್ದರು. ವಿವೇಕ್ ಬಗ್ಡಿ ನವೀನ್ ಕೈಗಳನ್ನು ಮುಸ್ಕಾನ್ ಕಾಲುಗಳನ್ನು ಹಿಡಿದು ಅದುಮಿಟ್ಟು ಕೌಶ್ಲೇಂದರ್ ನವೀನನ ಕುತ್ತಿಗೆಗೆ ಚಾಕುವಿನಿಂದ ಇರಿದಿದ್ದ ಎಂದು ಬಾಯ್ಬಿಟ್ಟಿದ್ದಳು.

ಘಟನೆ ನಡೆದ ಮರುದಿನ, ಜಮಾಲ್ ಶವವನ್ನು ಹೊರಹಾಕಲು ಸಹಾಯ ಮಾಡಲು ರಾಜಪಾಲ್ ಎಂಬ ಸ್ನೇಹಿತನಿಗೆ ಕರೆ ಮಾಡಿದ್ದ. ನವೀನ್, ಜಮಾಲ್ ಮತ್ತು ಆತನ ಸಹಚರರ ರಕ್ತ-ಬಣ್ಣದ ಬಟ್ಟೆಗಳನ್ನು ಚರಂಡಿಯಲ್ಲಿ ಎಸೆಯಲಾಗಿತ್ತು. ಜಮಾಲ್ ತನ್ನ ಮನೆಯಿಂದ ಒಂದು ಟ್ರಾಲಿ ಚೀಲವನ್ನು ತಂದು ಅದರಲ್ಲಿ ಆತ ನವೀನ್ ದೇಹವನ್ನು ತುಂಬಿಸಿ ನಂತರ ಅದನ್ನು ಸುಖದೇವ್ ವಿಹಾರ್‌ನ ಒಳಚರಂಡಿ ಕಾಲುವೆಗೆ ಎಸೆದಿದ್ದ.

ಪೊಲೀಸರು ಮುಸ್ಕಾನ್, ಆಕೆಯ ತಾಯಿ ಮತ್ತು ಜಮಾಲ್ ಮತ್ತು ಆತನ ಸಹಚರರು ಸೇರಿದಂತೆ ಏಳು ಆರೋಪಿಗಳನ್ನು ಬಂಧಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next