ನಿಜವಾದ ಸ್ನೇಹಿತರು ಕಷ್ಟ ಕಾಲದಲ್ಲಿ ಜೊತೆಗೆ ನಿಲ್ಲುತ್ತಾರೆ. ಅಂಥದ್ದೇ ನಿಜವಾದ ಸ್ನೇಹಿತರು ನನ್ನ ಕಷ್ಟಕಾಲ ದಲ್ಲೂ ಜೊತೆಗೆ ನಿಂತಿದ್ದಾರೆ. ಅವರಿಂದಾ ಗಿಯೇ ಮತ್ತೆ ನಾನು ಸಿನಿಮಾ ಮಾಡುವಂತಾಯಿತು. ನನ್ನ ಪ್ರಕಾರ ಇದು ಕೇವಲ ಕಂ ಬ್ಯಾಕ್ ಸಿನಿಮಾ ಅಥವಾ ರೀ-ಎಂಟ್ರಿ ಸಿನಿಮಾವಲ್ಲ. ನನ್ನ ಸಿನಿಮಾ ಕೆರಿಯರ್‌ನಲ್ಲಿ ಮತ್ತೂಂದು ಆಯಾಮ ಕೊಡುತ್ತಿರುವ ಸಿನಿಮಾ. ಇದೇ ಮೊದಲ ಬಾರಿಗೆ ಇಂಥದ್ದೊಂದು ಪಾತ್ರ ಮಾಡುತ್ತಿದ್ದೇನೆ. ಮುಂದೆ ಇಂಥ ಪಾತ್ರಗಳು ಮತ್ತೆ ಸಿಗುತ್ತವೆಯೋ, ಇಲ್ಲವೋ ನನಗೂ ಗೊತ್ತಿಲ್ಲ. ಒಟ್ಟಿನಲ್ಲಿ ಎಲ್ಲರ ಸಹಕಾರದಿಂದ ಮತ್ತೆ ಸಿನಿಮಾ ಮಾಡುವಂತಾಯಿತು’ – ಹೀಗೆ ಹೇಳುತ್ತ ಮಾತಿಳಿಗಿದವರು ನಟಿ ಮೇಘನಾ ರಾಜ್.
ಅಂದಹಾಗೆ, ಮೇಘನಾ ರಾಜ್ ಇಂಥ ದ್ದೊಂದು ಮಾತು ಹೇಳಿರುವುದು ತಮ್ಮ ಮುಂಬರಲಿರುವ “ತತ್ಸಮ ತದ್ಭವ’ ಸಿನಿಮಾದ ಬಗ್ಗೆ.
“ತತ್ಸಮ ತದ್ಭವ’ ಸಿನಿಮಾದ ಕೊನೆ ದಿನದ ಚಿತ್ರೀಕರಣದ ವೇಳೆ ಚಿತ್ರತಂಡ ಮಾಧ್ಯಮಗಳನ್ನು ಆಹ್ವಾನಿಸಿತ್ತು. ಈ ವೇಳೆ ತಮ್ಮ ತಂಡದ ಜೊತೆ ಮಾತನಾಡಿದ ಮೇಘನಾ, “ಇದೊಂದು ಇನ್ವೆಸ್ಟಿಗೇಷನ್ ಸಸ್ಪೆನ್ಸ್-ಥ್ರಿಲ್ಲರ್ ಸಿನಿಮಾ. ತುಂಬ ಗಟ್ಟಿಯಾದ ಮತ್ತು ಅಷ್ಟೇ ಗಂಭೀರವಾದ ಪಾತ್ರ ಈ ಸಿನಿಮಾದಲ್ಲಿ ನನಗೆ ಸಿಕ್ಕಿದೆ. ಯಾವ ಥರದ ಸಿನಿಮಾದ ಮೂಲಕ ಮತ್ತೆ ಬರಬಹುದು ಎಂಬ ಯೋಚನೆಯಲ್ಲಿ ದ್ದಾಗ “ತತ್ಸಮ ತದ್ಭವ’ ಸಿನಿಮಾ ಸಿಕ್ಕಿತು. ಅನೇಕ ಆಯಾಮಗಳಲ್ಲಿ ಸಿನಿಮಾ ಸಾಗುತ್ತದೆ. ಮೊದಲ ಬಾರಿಗೆ ಇಂಥದ್ದೊಂದು ಪಾತ್ರದಲ್ಲಿ ಕಾಣಿಸಿ ಕೊಳ್ಳುತ್ತಿರುವುದಕ್ಕೆ ಖುಷಿಯಾಗುತ್ತಿದೆ. ಈ ಪಾತ್ರ ನೋಡುಗರ ಮನಸ್ಸಿನಲ್ಲಿ ಉಳಿಯುತ್ತದೆ ಎಂಬ ವಿಶ್ವಾಸವಿದೆ’ ಎಂದರು.
ನಟಿ ಶ್ರುತಿ ಮಾತನಾಡಿ, “ಯಾವುದೇ ಹೆಣ್ಣಿಗಾದರೂ ಅನುಕಂಪಕ್ಕಿಂತ, ಅವಕಾಶ ಕೊಡುವುದು ಮುಖ್ಯ. ಮೇಘನಾ ರಾಜ್ ವಿಷಯದಲ್ಲಿ, ಅವರ ಸ್ನೇಹಿತರೆಲ್ಲರೂ ಸೇರಿ ಅವರ ಕಂ ಬ್ಯಾಕ್‌ಗೆ ಒಂದು ಒಳ್ಳೆಯ ಅವಕಾಶ ಕಲ್ಪಿಸಿದ್ದಾರೆ. ಈ ಅವಕಾಶದಿಂದ ಮೇಘನಾ ಮತ್ತೆ ಸಕ್ರಿಯರಾಗುತ್ತಾರೆ ಎಂಬ ವಿಶ್ವಾಸವಿದೆ’ ಎಂದರು.
ನಟ ಪ್ರಜ್ವಲ್ ದೇವರಾಜ್ ತಮ್ಮ ಪಾತ್ರ ಪರಿಚಯ ಮಾಡಿಕೊಟ್ಟರೆ, ನಿರ್ದೇಶಕ ವಿಶಾಲ್ ಆತ್ರೇಯ “ತತ್ಸಮ ತದ್ಭವ’ ಸಿನಿಮಾದ ಕಥಾಹಂದರದ ಬಗ್ಗೆ ಮಾಹಿತಿ ನೀಡಿದರು. ಸಂಗೀತ ನಿರ್ದೇಶಕ ವಾಸುಕಿ ವೈಭವ್ ಹಾಡು ಗಳ ಬಗ್ಗೆ ಮತ್ತು ನಿರ್ಮಾಪಕ ಪನ್ನಗಾಭರಣ ಸಿನಿಮಾ ಸಾಗಿಬಂದ ರೀತಿ ವಿವರಿಸಿದರು.