Advertisement

ಕಡಬ: ರಸ್ತೆ ಬದಿಯಲ್ಲಿಯೇ ಮೀನು ಮಾರಾಟ

09:58 PM Nov 05, 2020 | mahesh |

ಕಡಬ: ತಾಲೂಕು ಕೇಂದ್ರ ಕಡಬದಲ್ಲಿ ಸುಸಜ್ಜಿತ ಮೀನು ಮಾರುಕಟ್ಟೆ ಇಲ್ಲ. ಪ್ರಸ್ತುತ ಇರುವ ಹಸಿ ಮೀನು ಮಾರುಕಟ್ಟೆಯಲ್ಲಿ ಮೂಲ ಸೌಕರ್ಯ ಗಳಿಲ್ಲದೆ ಮೀನು ವ್ಯಾಪಾರ ನಡೆಯುತ್ತಿಲ್ಲ. ಪಂಚಾಯತ್‌ಗೆ ಸಾವಿರಾರು ರೂ. ಪಾವತಿಸಿ ಮೀನು ಮಾರಾಟದ ಹಕ್ಕು ಪಡೆದ ಮೀನು ಮಾರಾಟಗಾರರು ರಸ್ತೆಯ ಬದಿಯಲ್ಲಿಯೆ ಮೀನು ಮಾರಬೇಕಾದ ಅನಿವಾರ್ಯ ಸ್ಥಿತಿ ಎದುರಾಗಿದೆ.

Advertisement

ಸುಸಜ್ಜಿತ ಮೀನು ಮಾರುಕಟ್ಟೆ ಆಗಬೇಕಿದೆ
ಪ್ರಸ್ತುತ ಸಂತಕಟ್ಟೆಯ ಒಳಗೆ ಇರುವ ಮೀನು ಮಾರುಕಟ್ಟೆಯಲ್ಲಿ ಯಾವುದೇ ಮೂಲಸೌಕರ್ಯಗಳಿಲ್ಲ. ಮಾರುಕಟ್ಟೆ ಯಿಂದ ತ್ಯಾಜ್ಯನೀರು ಹರಿದು ಹೋಗಲು ಸರಿಯಾದ ವ್ಯವಸ್ಥೆಗಳಿಲ್ಲ. ತ್ಯಾಜ್ಯ ನೀರು ಸಂಗ್ರಹವಾಗಲು ನಿರ್ಮಿಸಲಾಗಿದ್ದ ಸಣ್ಣ ಗುಂಡಿಯಲ್ಲಿ ನೀರು ತುಂಬಿ ಉಕ್ಕಿಹರಿದು ದುರ್ವಾಸನೆ ಬೀರಲು ಆರಂಭವಾದ ಕಾರಣದಿಂದಾಗಿ ಮೀನು ಮಾರಾಟಗಾರರು ಮಾರುಕಟ್ಟೆಯಲ್ಲಿ ಮೀನು ಮಾರಲು ಸಾಧ್ಯವಿಲ್ಲ ಎಂದು 2 ವರ್ಷಗಳ ಹಿಂದೆ ಪಂಚಾಯತ್‌ಗೆ ದೂರು ನೀಡಿದ್ದರು. ಬಳಿಕ ರಸ್ತೆ ಬದಿಯಲ್ಲಿ ತಾತ್ಕಾಲಿಕ ನೆಲೆಯಲ್ಲಿ ಮೀನು ಮಾರಲು ಪಂಚಾಯತ್‌ ಅವಕಾಶ ನೀಡಿತ್ತು. ಆದರೆ ರಸ್ತೆ ಬದಿಯಲ್ಲಿ ಮೀನು ಮಾರಲು ಆರಂಭವಾಗಿ 2 ವರ್ಷ ಕಳೆದರೂ ಮೀನು ಮಾರುಕಟ್ಟೆಯ ಸಮಸ್ಯೆ ಮಾತ್ರ ಬಗೆಹರಿದಿಲ್ಲ. ಮೀನು ಮಾರಾಟದ ಹಕ್ಕಿಗಾಗಿ ನಡೆಯುವ ಹರಾಜಿನಲ್ಲಿ ಸ್ಥಳೀಯಾಡಳಿತಕ್ಕೆ ಸಾವಿರಾರು ರೂ. ಆದಾಯ ಇದ್ದರೂ ಸುಸಜ್ಜಿತ ಮೀನು ಮಾರುಕಟ್ಟೆ ನಿರ್ಮಾಣಕ್ಕೆ ಮುಂದಾಗದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಸ್ವತ್ಛ ಗ್ರಾಮ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದ್ದ ಕಡಬ ಗ್ರಾಮ ಪಂಚಾಯತ್‌ ಈಗ ಪಟ್ಟಣ ಪಂಚಾಯತ್‌ ಆಗಿ ಮೇಲ್ದರ್ಜೆಗೇರಿದೆ. ಸಂಬಂಧಪಟ್ಟವರು ಈ ನಿಟ್ಟಿನಲ್ಲಿ ಗಂಭೀರ ಚಿಂತನೆ ನಡೆಸುವ ಅಗತ್ಯವಿದೆ.

ದುರಸ್ತಿ
ಪ್ರಸ್ತುತ ಸಂತೆಕಟ್ಟೆಯ ಬಳಿ ಇರುವ ಮೀನು ಮಾರುಕಟ್ಟೆಯ ಕಟ್ಟಡ ಶಿಥಿಲಗೊಂಡಿದ್ದು, ಅದರ ದುರಸ್ತಿ ನಡೆಸಿ ಅಲ್ಲಿಯೇ ಮೀನು ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸಲಾಗುವುದು.ದುರಸ್ತಿ ಕಾರ್ಯ ಮುಗಿಯುವ ತನಕ ಮೀನು ಮಾರುಕಟ್ಟೆಯ ಆವರಣದಲ್ಲಿಯೇ ವಾಹನದಲ್ಲಿ ಮೀನು ಮಾರಾಟಕ್ಕೆ ಅವಕಾಶ ಕಲ್ಪಿಸಲು ನಿರ್ಧರಿಸಲಾಗಿದೆ. ಮುಂದಿನ ದಿನಗಳಲ್ಲಿ ರಸ್ತೆ ಬದಿಯಲ್ಲಿ ಮೀನು ಮಾರಾಟಕ್ಕೆ ಅವಕಾಶ ನೀಡುವುದಿಲ್ಲ.
-ಅರುಣ್‌ ಕೆ., ಮುಖ್ಯಾಧಿಕಾರಿ, ಕಡಬ ಪಟ್ಟಣ ಪಂಚಾಯತ್‌

ನಾಗರಾಜ್‌ ಎನ್‌.ಕೆ.

Advertisement

Udayavani is now on Telegram. Click here to join our channel and stay updated with the latest news.

Next