ಟಾಟಾ ಮೋಟಾರ್ಸ್ ಭಾರತದ ಮಾರುಕಟ್ಟೆಗೆ ಅನ್ವಯಿಸುವಂತೆ ಇಲೆಕ್ಟ್ರಿಕ್ ಕಾರುಗಳ ಸರಣಿಯಲ್ಲಿ ತನ್ನ ಎರಡನೇ ಪ್ರಯಾಣಿಕ ಕಾರನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ. ಇದು ಹುಂಡೈ ಕೊನಾ ಮತ್ತು ಎಂ.ಜಿ. ಅವರ ಝಡ್.ಎಸ್. ಎಲೆಕ್ಟ್ರಿಕ್ ಕಾರುಗಳಿಗೆ ಇದು ಸ್ಪರ್ಧಿಯಾಗಿ ಮಾರುಕಟ್ಟೆಗೆ ಲಗ್ಗೆ ಇರಿಸಲಿದೆ.
ಟಾಟಾ ನೆಕ್ಸಾನ್ ಇಲೆಕ್ಟ್ರಿಕ್ ಕಾರು ಎಕ್ಸ್.ಎಂ., ಎಕ್ಸ್.ಝಡ್ ಪ್ಲಸ್ ಮತ್ತು ಝಡ್ ಪ್ಲಸ್ ಲಕ್ಸ್ ಟ್ರಿಮ್ಸ್ ಮಾದರಿಗಳಲ್ಲಿ ಗ್ರಾಹಕರಿಗೆ ಲಭ್ಯವಾಗಲಿದೆ. ಇನ್ನು ಈ ಮೂರು ಮಾದರಿಗಳ ಎಕ್ಸ್-ಶೋ ರೂಂ ಬೆಲೆ ಈ ರೀತಿಯಾಗಿರಲಿದೆ. ಟಾಟಾ ನೆಕ್ಸಾನ್ ಇವಿ ಎಕ್ಸ್.ಎಂ. – 13.99 ಲಕ್ಷ ರೂಪಾಯಿಗಳು, ಟಾಟಾ ನೆಕ್ಸಾನ್ ಇವಿ ಎಕ್ಸ್.ಝಡ್. ಪ್ಲಸ್ – 14.99 ಲಕ್ಷ ರೂಪಾಯಿಗಳು, ಟಾಟಾ ನೆಕ್ಸಾನ್ ಇವಿ ಎಕ್ಸ್.ಝಡ್. ಪ್ಲಸ್ ಲಕ್ಸ್ – 15.99 ಲಕ್ಷ ರೂಪಾಯಿಗಳಿಗೆ ಲಭ್ಯವಾಗಲಿವೆ. ಗ್ಲೇಸಿಯರ್ ವೈಟ್, ಸಿಗ್ನೇಚರ್ ಟೀಲ್ ಬ್ಲೂ ಮತ್ತು ಮೂನ್ ಲಿಟ್ ಸಿಲ್ವರ್ ಬಣ್ಣಗಳಲ್ಲಿ ಗ್ರಾಹಕರಿಗೆ ಈ ಕಾರು ಲಭ್ಯವಿರಲಿದೆ.
ಇದಕ್ಕೂ ಮೊದಲು ಟಾಟಾ ಟೈಗರ್ ಇವಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿತ್ತು. ಎಂಜಿ ಕಂಪೆನಿ ತನ್ನ ಝಡ್.ಎಸ್. ಇವಿ ಮಾದರಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದ ಒಂದು ವಾರದೊಳಗಾಗಿ ಟಾಟಾ ತನ್ನ ಎರಡನೇ ಇಲೆಕ್ಟ್ರಿಕ್ ಮಾದರಿಯನ್ನು ಬಿಡುಗಡೆ ಮಾಡಿರುವುದು ವಿಶೇಷವಾಗಿದೆ.
ಈ ನೂತನ ಮಾದರಿಯ ಇಲೆಕ್ಟ್ರಿಕ್ ಕಾರಿನಲ್ಲಿ ಝಿಪ್ಟ್ರಾನ್ ಪವರ್ ಟ್ರೈನ್ ತಂತ್ರಜ್ಞಾನ ಅಳವಡಿದಲಾಗಿದೆ. ಐಪಿ.67 ಪ್ರಮಾಣೀಕೃತ 30.2 ಕಿಲೋ ವ್ಯಾಟ್ ಲಿಥಿಯಂ ಅಯಾನ್ ಬ್ಯಾಟರಿ ಈ ಕಾರುಗಳಲ್ಲಿ ಇರಲಿದೆ. ಇದಕ್ಕೆ 8 ವರ್ಷಗಳ ಅಥವಾ 1.6 ಲಕ್ಷ ಕಿಲೋ ಮೀಟರ್ ಗಳ ವಾರಂಟಿ ಸೌಲಭ್ಯ ಲಭ್ಯವಿದೆ.
ಇನ್ನು ಇದರ ಚಾರ್ಜಿಂಗ್ ವಿಷಯಕ್ಕೆ ಬರುವುದಾದರೆ 3.3 ಕಿಲೋ ವ್ಯಾಟ್ ಎಸಿ ಚಾರ್ಜಿಂಗ್ ಸೌಲಭ್ಯವನ್ನು ಕಾರಿನಲ್ಲೇ ನೀಡಲಾಗಿದೆ. ಫಾಸ್ಟ್ ಚಾರ್ಜರ್ (ಸಿಸಿಎಸ್ 2) ಬಳಸಿಕೊಂಡು ಕೇವಲ 60 ನಿಮಿಷಗಳಲ್ಲಿ ಶೂನ್ಯ ಪ್ರತಿಶತದಿಂದ 80 ಪ್ರತಿಶತದವರೆಗೆ ಮತ್ತು ರೆಗ್ಯುಲರ್ ಚಾರ್ಜರ್ (15 ಎ.ಎಂ.ಪಿ.ಯ ಯಾವುದೇ ಪ್ಲಗ್ ಪಾಯಿಂಟ್) ಮೂಲಕ 8 ಗಂಟೆಗಳಲ್ಲಿ 20 ಪ್ರತಿಶತದಿಂದ 100 ಪ್ರತಿಶದವರೆಗೆ ಚಾರ್ಜ್ ಮಾಡಬಹುದಾಗಿರುತ್ತದೆ.
ARAI ಪ್ರಮಾಣೀಕೃತವಾಗಿರುವಂತೆ ಒಂದು ಬಾರಿ ಪೂರ್ತಿ ಚಾರ್ಜ್ ಮಾಡಿದಲ್ಲಿ 312 ಕಿಲೋ ಮೀಟರ್ ದೂರವನ್ನು ಕ್ರಮಿಸುವ ಸಾಮರ್ಥ್ಯವನ್ನು ಈ ಕಾರುಗಳು ಹೊಂದಿವೆ. ಇನ್ನು ಈ ವಾಹನದ ಸ್ಟ್ಯಾಂಡರ್ಡ್ ವಾರಂಟಿ ಮೂರು ವರ್ಷಗಳು ಅಥವಾ 1.25 ಲಕ್ಷ ಕಿಲೋಮೀಟರ್ ಗಳಾಗಿರುತ್ತವೆ. ಮಾತ್ರವವಲ್ಲದೇ ಟಾಟಾ ಐದು ವರ್ಷಗಳ ವಿಸ್ತೃತ ವಾರಂಟಿಯನ್ನೂ ಸಹ ಒದಗಿಸುತ್ತಿದೆ.