ಕಾಸರಗೋಡು: ಶಾಲೆಗಳ ಪಠ್ಯ ಚಟುವಟಿಕೆಗಳ ಬಿಡುವಿನಲ್ಲಿ ವಿದ್ಯಾರ್ಥಿ ಗಳಿಗೆ ಆರೋಗ್ಯ ಪೂರ್ಣ ತಿನಿಸುಗಳನ್ನು ಒದಗಿಸುವ ಕುಟುಂಬಶ್ರೀ ಜಿಲ್ಲಾ ಘಟಕದ ಪ್ರಕೃತಿ ಸ್ನೇಹಿ ಯೋಜನೆ “ಟೇಸ್ಟಿ ಕ್ಯಾಶ್ಯೂ’ ಉದ್ಘಾಟನೆಗೊಂಡಿತು.
ನಾಯಮ್ಮಾರಮೂಲೆ ತನ್ ಬೀಹುಲ್ ಇಸ್ಲಾಮಿಕ್ ಹೈಯರ್ ಸೆಕೆಂಡರಿ ಶಾಲೆ ಯಲ್ಲಿ ಈ ಸಂಬಂಧ ಜರಗಿದ ಸಮಾ ರಂಭದಲ್ಲಿ ಜಿಲ್ಲಾಧಿಕಾರಿ ಡಾ| ಡಿ. ಸಜಿತ್ ಬಾಬು ಯೋಜನೆಯನ್ನು ಉದ್ಘಾಟಿಸಿದರು.
ಉಪಜಿಲ್ಲಾಧಿಕಾರಿ ಅರುಣ್ ಕೆ. ವಿಜಯನ್, ವಲಯ ಕಂದಾಯಾಧಿಕಾರಿ ಕೆ. ರವಿಕುಮಾರ್, ಶಿಕ್ಷಣ ಉಪನಿರ್ದೇಶಕಿ ಕೆ.ವಿ. ಪುಷ್ಪಾ, ಕುಟುಂಬಶ್ರೀ ಎ.ಡಿ.ಎಂ.ಸಿ. ಜೋಸೆಫ್ ಪೆರಿಗಿಲ್, ಶಾಲೆಯ ಮುಖ್ಯ ಶಿಕ್ಷಕಿ ಕುಸುಮಂ ಜಾನ್, ಸಹಾಯಕ ಮುಖ್ಯ ಶಿಕ್ಷಕ ಪಿ. ನಾರಾಯಣನ್ ಉಪಸ್ಥಿತರಿದ್ದರು.
ಜಿಲ್ಲೆಯ ಶಿಕ್ಷಣಾಲಯಗಳಲ್ಲಿ ಲಭಿಸಲಿದೆ “ಟೇಸ್ಟ್ ಕ್ಯಾಶ್ಯೂ’ ಶಾಲೆಯ ಚಟುವಟಿಕೆಗಳ ಬಿಡುವಿನ ವೇಳೆ ಇನ್ನು ಮುಂದೆ ಚಾಕಲೆಟ್, ಮಿಠಾಯಿ ಇತ್ಯಾದಿಗಳನ್ನು ಸೇವಿಸಿ ಆರೋಗ್ಯಕ್ಕೆ ಹಾನಿಮಾಡಿಕೊಳ್ಳುವ ದಿನಗಳೂ ದೂರವಾದುವು. ಬದಲಿಗೆ ವಿದ್ಯಾರ್ಥಿಗಳಿಗೆ ಆರೋಗ್ಯ ಪೂರ್ಣ ರುಚಿಯ ಅನುಭವ ನೀಡಲು ಜಾರಿಗೆ ಬರುತ್ತಿದೆ “ಟೇಸ್ಟಿ ಕ್ಯಾಶ್ಯೂ’. ಜಿಲ್ಲೆಗೆ ನೂತನ ವರ್ಷದ ಕೊಡುಗೆಯಾಗಿ ಕುಟುಂಬಶ್ರೀ ಜಿಲ್ಲಾ ಮಿಷನ್ ಈ ನೂತನ ಉತ್ಪನ್ನ ಜಾರಿಗೆ ತರುತ್ತಿದೆ.
ವಿದ್ಯಾರ್ಥಿಗಳಲ್ಲಿ ಉತ್ತಮ ಆಹಾರ ಕ್ರಮದ ಅಭ್ಯಾಸ ಬೆಳೆಸುವ ನಿಟ್ಟಿನಲ್ಲಿ ಕುಟುಂಬಶ್ರೀ ಜಿಲ್ಲಾ ಮಿಷನ್ ಟೇಸ್ಟಿ ಕ್ಯಾಶ್ಯೂ (ರುಚಿಕರ ಗೋಡಂಬಿ) ವಿದ್ಯಾಲಯಗಳಿಗೆ ತಲಪಿಸುತ್ತಿದೆ. ಸಿಹಿ, ತೆಂಗಿನಕಾಯಿ, ನೆಲಕಡಲೆ, ಗೋಡಂಬಿ, ಅಕ್ಕಿ ಪುಡಿ ಇತ್ಯಾದಿ ಬಳಸಿ ಉತ್ಪನ್ನ ಸಿದ್ಧಪಡಿಸಲಾಗುವುದು.
ಚಾಕಲೆಟ್ ಇತ್ಯಾದಿ ಸೇವನೆಯಿಂದ ಬರಬಹುದಾದ ಆರೋಗ್ಯ ಸಮಸ್ಯೆ ನಿಯಂತ್ರಣದ ಜತೆಗೆ ಅವುಗಳ ರ್ಯಾಪರ್ ಇತ್ಯಾದಿಗಳಿಂದ ಪ್ಲಾಸ್ಟಿಕ್ ತ್ಯಾಜ್ಯ ಸಮಸ್ಯೆಯನ್ನೂ ಈ ಮೂಲಕ ನಿಯಂತ್ರಿಸಲು ಸಾಧ್ಯ. ಜಿಲ್ಲೆಯ ಕುಟುಂಬಶ್ರೀ ಘಟಕವಾಗಿರುವ ಸಫಲಂ ಕ್ಯಾಶ್ಯೂ ಪರೆಂಗಿ ನಟ್ಸ್‌ನ ಉತ್ಪನ್ನಗಳು ಈಗಾಗಲೇ ಮಾರುಕಟ್ಟೆಯಲ್ಲಿ ಧಾರಾಳ ಬೇಡಿಕೆ ಹೊಂದಿವೆ. ಇವುಗಳೊಂದಿಗೆ ಟೇಸ್ಟಿ ಕ್ಯಾಶ್ಯೂವನ್ನೂ ಈ ಸಂಸ್ಥೆ ಮಾರುಕಟ್ಟೆಗಿಳಿಸುತ್ತಿದೆ.