ಮೈಸೂರು: ಈಗಾಗಲೇ ಎಲ್ಲೆಡೆ ಕೈಗಾರಿಕೆಗಳು ಪ್ರಾರಂಭವಾಗಿದ್ದು, ಸಣ್ಣ ಕೈಗಾರಿಕೆಗಳಿಗೆ ರಾಜ್ಯ ಸರ್ಕಾರ ವಿದ್ಯುತ್ ದರ ಮನ್ನಾ ಮಾಡಿದೆ. ದೊಡ್ಡ ಕೈಗಾರಿಕೆಗಳಿಗೂ ಆರ್ಥಿಕವಾಗಿ ನೆರವು ನೀಡಲಾಗಿದೆ ಎಂದು ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಜಗದೀಶ್ ಶೆಟ್ಟರ್ ತಿಳಿಸಿದರು.
ನಗರದ ಜಿಪಂ ಸಭಾಂಗಣದಲ್ಲಿ ನಡೆದ ಕೈಗಾರಿಕೋದ್ಯಮಿಗಳ ಸಭೆಯಲ್ಲಿ ಮಾತನಾಡಿ, ಕೈಗಾರಿಕೋದ್ಯಮಿಗಳಿಗೆ ಸರ್ಕಾರದಿಂದ ಸೌಲಭ್ಯ ಸಿಕ್ಕಿವೆ. ಕೇಂದ್ರದಿಂದ ಸಣ್ಣ ಕೈಗಾರಿಕೆಗಳಿಗೆ ಪ್ಯಾಕೇಜ್ ನೀಡುವ ಬಗ್ಗೆ ಚಿಂತನೆ ನಡೆಯುತ್ತಿದೆ. ಕಳೆದ ತಿಂಗಳ ಸಂಬಳ ಮತ್ತಿತರ ಆರ್ಥಿಕ ವಿಚಾರಗಳಿಗೆ ಸಂಬಂಧಪಟ್ಟಂತೆ ಕೇಂದ್ರ ಶೀಘ್ರವೇ ನಿರ್ಧಾರ ಕೈಗೊಳ್ಳುತ್ತದೆ. ಮುಂದಿನ ದಿನಗಳಲ್ಲಿ ಆರ್ಥಿಕ ಕ್ಷೇತ್ರವೂ ಚೇತರಿಕೆ ಕಾಣಲಿದೆ. ಯಾರೂ ಹೆದರುವ ಅವಶ್ಯವಿಲ್ಲ ಎಂದರು.
ವಿದೇಶಿ ಹೂಡಿಕೆಗೆ ಆಹ್ವಾನ: ರಾಜ್ಯದಲ್ಲಿ ಟಾಸ್ಕ್ ಪೋರ್ಸ್ ರಚನೆ ಮಾಡಿದ್ದು, ಬೇರೆ ದೇಶದಿಂದ ಬರುವ ಕೈಗಾರಿಕೋದ್ಯಮಿಗಳನ್ನು ಸ್ವಾಗತಿಸಬೇಕೆಂದು ಸಿಎಂಗೆ ಕೇಳಿಕೊಂಡಿದ್ದೇನೆ. ಇದರಿಂದ ಕರ್ನಾಟದಲ್ಲಿ ಬಂಡವಾಳ ಹೂಡಿಕೆ ಹೆಚ್ಚುವ ನಿರೀಕ್ಷೆ ಇದೆ. ಚೀನಾ ಕಂಪನಿಗಳನ್ನೂ ಸ್ವಾಗತಿಸಲಾಗುತ್ತದೆ. ಹೀಗೆ ಬೇರೆ ಬೇರೆ ದೇಶದಿಂದ ಕಂಪನಿಗಳು ಬಂದು ಇಲ್ಲಿ ಹೂಡಿಕೆ ಮಾಡಿದಾಗ ನಮ್ಮ ಆರ್ಥಿಕತೆ ಚೇತರಿಸಿಕೊಳ್ಳಲಿದೆ ಎಂದು ಹೇಳಿದರು.
ಮುಂಜಾಗ್ರತೆ ಕ್ರಮ ಅನುಸರಿಸಿ: ಕೋವಿಡ್ ತಡೆಗೆ ಕ್ರಮ ಕೈಗೊಳ್ಳಲು ಕಾರ್ಖಾನೆಗಳಲ್ಲಿ ಮಾಸ್ಕ್, ಸ್ಯಾನಿಟೈಸರ್ ಬಳಕೆ ಕಡ್ಡಾಯ. ಹೆಚ್ಚು ಜನರು ಸೇರದೆ ಶೇ.50ರಷ್ಟು ಕಾರ್ಮಿಕರು ಪಾಳಿ ಪ್ರಕಾರ ಕೆಲಸ ಮಾಡಬೇಕು. ಕೆಲಸ ಮಾಡುವಾಗ ಸಾರ್ವಜನಿಕ ಅಂತರ ಇರಬೇಕು. ರಾಸಾಯನಿಕ ಕಾರ್ಖಾನೆಗಳಲ್ಲಿ ಗಮನ ತೆಗೆದುಕೊಂಡು ಸುರಕ್ಷಿತವಾಗಿರುವಂತೆ ಸೂಚಿಸಲಾಗಿದೆ ಎಂದರು.
ಈಗ ಮೈಸೂರಿನಲ್ಲಿ 7 ಮಂದಿ ಮಾತ್ರ ಸೋಂಕಿತರಿದ್ದಾರೆ. ಅವರನ್ನು ಗುಣಪಡಿಸಿ ಮೈಸೂರನ್ನು ಕೊರೊನಾ ಮುಕ್ತ ಮಾಡುವುದು ನಮ್ಮ ಮೊದಲ ಆದ್ಯತೆ. ಅದರ ನಂತರ ಜ್ಯುಬಿಲಿಯಂಟ್ ಕಾರ್ಖಾನೆ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.
ಸಭೆಯಲ್ಲಿ ಸಚಿವ ಎಸ್ .ಟಿ.ಸೋಮಶೇಖರ್, ಸಂಸದ ಪ್ರತಾಪ್ ಸಿಂಹ, ಶಾಸಕರಾದ ಜಿ.ಟಿ.ದೇವೇಗೌಡ, ಎಸ್ .ಎ. ರಾಮದಾಸ್, ಸಾ.ರಾ.ಮಹೇಶ್, ಎಲ್ .ನಾಗೇಂದ್ರ, ಬಿ.ಹರ್ಷವರ್ಧನ್, ನಿರಂಜನ್ ಕುಮಾರ್, ವಿಧಾನಪರಿಷತ್ ಸದಸ್ಯರಾದ ಸಂದೇಶ್ ನಾಗರಾಜ್, ಧರ್ಮಸೇನಾ, ಜಿಪಂ ಅಧ್ಯಕ್ಷೆ ಪರಿಮಳಾ ಶ್ಯಾಂ, ಡೀಸಿ ಅಭಿರಾಂ ಜಿ.ಶಂಕರ್, ನಗರಪಾಲಿಕೆ ಆಯುಕ್ತ ಗುರುದತ್ತ ಹೆಗಡೆ, ಮೈಸೂರು ಜಿಲ್ಲಾ ಕೈಗಾರಿಕಾ ಸಂಘದ ಅಧ್ಯಕ್ಷ ವಾಸು ಇದ್ದರು.