ಕೋಲಾರ: ಬೆಂಗಳೂರು ಗ್ರಾಮಾಂತರ ಜಿಲ್ಲೆ ಬೈಲುನರಸಾಪುರದ ಸೋಂಕಿತ ವ್ಯಕ್ತಿ ತಾಲೂಕಿನ ನರಸಾಪುರ, ವೇಮ ಗಲ್ ವ್ಯಾಪ್ತಿಯಲ್ಲಿ ತಿರುಗಾಡಿರುವುದರಿಂದ ಈ ಭಾಗದಲ್ಲಿ ಕೋವಿಡ್-19ರ ಆತಂಕವಿದೆ. ಈ ಹಿನ್ನೆಲೆಯಲ್ಲಿ ಗ್ರಾಮದೊಳಕ್ಕೆ ಯಾರೂ ಹೊಸಬರು ಬಾರದಂತೆ ನಿಗಾವಹಿಸಿ ಎಂದು ತಾಲೂಕು ವೈದ್ಯಾಧಿಕಾರಿ ಡಾ.ರಮ್ಯದೀಪಿಕಾ ಸೂಚನೆ ನೀಡಿದರು.
ತಾಲೂಕಿನ ಅರಾಭಿಕೊತ್ತನೂರು ಗ್ರಾಮ ಪಂಚಾಯಿತಿ ವತಿಯಿಂದ ಗ್ರಾಮದ ಸೋಮೇಶ್ವರಸ್ವಾಮಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಕೋವಿಡ್-19ರ ಟಾಸ್ಕ್ಪೋರ್ಸ್ ಸಭೆ ಯಲ್ಲಿ ಪ್ರಗತಿ ಪರಿಶೀಲನೆ ನಡೆಸಿ ಆರೋಗ್ಯ ಮತ್ತು ಆಶಾ ಕಾರ್ಯಕರ್ತರನ್ನುದ್ದೇಶಿಸಿ ಅವರು ಮಾತನಾಡಿದರು.
ಅರಾಭಿಕೊತ್ತನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ಜನತೆ ತಮ್ಮ ವಹಿವಾಟು, ದಿನಸಿ ಖರೀದಿಗೆ ಸಾಮಾನ್ಯ ವಾಗಿ ನರಸಾಪುರವನ್ನು ಅವಲಂಬಿಸಿರು ವುದರಿಂದ ಈ ತುರ್ತು ಸಭೆ ಕರೆಯ ಲಾಗಿದೆ ಎಂದ ಅವರು, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಜನತೆಗೆ ಅರಿವು ಮೂಡಿಸುವ ಕೆಲಸ ಮಾಡಿ ಎಂದು ಸಲಹೆ ನೀಡಿದರು.
ವಿನಾಕಾರಣ ಹೊರಗೆ ಓಡಾಡದಿರಿ, ವ್ಯಾಪಾರ, ವಹಿವಾಟಿಗೆ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಕಡ್ಡಾಯವಾಗಿದ್ದು, ಈ ಸಂಬಂಧ ಗ್ರಾಪಂ ಚುನಾಯಿತ ಪ್ರತಿನಿಧಿಗಳು ತಮ್ಮ ಗ್ರಾಮಗಳಲ್ಲಿ ನಿಗಾವಹಿಸಬೇಕು ಎಂದು ಮನವಿ ಮಾಡಿದರು. ಗ್ರಾಮಗಳಿಗೆ ಯಾರೇ ಹೊಸದಾಗಿ ಬಂದರೆ ನಿಗಾವಹಿಸಿ ಮಾಹಿತಿ ನೀಡುವಂತೆ ಸೂಚಿಸಿದ ಡಾ. ರಮ್ಯದೀಪಿಕಾ, ಕರೋನಾ ಮಾರಿ ಕೊನೆಗೊಳ್ಳುವವರೆಗೂ ಗ್ರಾಮಗಳಿಂದ ಹೊರಹೋಗುವುದು, ಹೊಸಬರನ್ನು ಗ್ರಾಮಕ್ಕೆ ಸೇರಿಸಿಕೊಳ್ಳುವುದು ಬೇಡ ಎಂದು ತಿಳಿಸಿದರು.
ಗ್ರಾಮದಲ್ಲಿ ಜನತೆಗೆ ಅಗತ್ಯ ವಸ್ತುಗಳ ಪೂರೈಕೆಗೆ ಕೈಗೊಂಡಿರುವ ಕ್ರಮಗಳ ಕುರಿತು ಗಮನಹರಿಸಿದ ಅವರು, ಈ ಕಾರ್ಯಕ್ಕಾಗಿ ವಿಶೇಷ ತಂಡಗಳನ್ನು ರಚಿಸಿ, ದಿನಸಿ ಮತ್ತಿತರ ವಸ್ತುಗಳು ಜನತೆಗೆ ಸಿಗುವಂತೆ ಕ್ರಮ ಕೈಗೊಳ್ಳಿ ಎಂದು ತಾಕೀತು ಮಾಡಿದರು.
ಹೊಸಬರ ಪ್ರವೇಶ ಗ್ರಾಮಕ್ಕೆ ನಿಷೇದ್ಧ: ಪಿಡಿಒ ಅನುರಾಧಾ, ಬೈಲು ನರಸಾಪುರದ ಸೋಂಕಿತ ವ್ಯಕ್ತಿ ಪಕ್ಕದ ನರಸಾಪುರ ಗ್ರಾಮದಲ್ಲಿ ತಿರುಗಾಡಿ ಹೋಗಿರುವುದರಿಂದ ನಾವು ಮುಂಜಾಗ್ರತಾ ಕ್ರಮ ಕೈಗೊಂಡಿದ್ದೇವೆ, ಈ ಸಂಬಂಧ ಗ್ರಾಮದ ಜನತೆಗೆ ನರಸಾಪುರಕ್ಕೆ ಹೋಗದಂತೆ ತಿಳಿಸಿದ್ದೇವೆ, ಗ್ರಾಮಕ್ಕೆ ಹೊಸಬರ ಪ್ರವೇಶಕ್ಕೂ ಅವಕಾಶ ನೀಡುತ್ತಿಲ್ಲ, ಯಾರೇ ಬಂದರೂ ವಿಚಾರಣೆ ನಡೆಸಲಾಗುತ್ತಿದೆ ಎಂದು ಸಭೆಗೆ ವಿವರಿಸಿದರು.
ಸಭೆಯಲ್ಲಿ ಗ್ರಾಪಂ ಅಧ್ಯಕ್ಷೆ ಸವಿತಾ ಕೆಂಚೇಗೌಡ, ಉಪಾಧ್ಯಕ್ಷ ಶ್ರೀನಿವಾಸ್, ಗ್ರಾಪಂ ಸದಸ್ಯರು, ಹಿರಿಯ ಆರೋಗ್ಯ ಸಹಾಯಕಿ ವಾಣಿ, ಪ್ರೇರಕ ರಾಮ ಚಂದ್ರಪ್ಪ, ಕಿರಿಯ ಆರೋಗ್ಯ ಮಹಿಳಾ ಸಹಾಯಕಿಯರು, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ನೀರುಗಂಟಿ, ಗ್ರಾಪಂ ಸಿಬ್ಬಂದಿ ಇದ್ದರು.