ಮಳವಳ್ಳಿ: ಟಾಸ್ಕ್ವರ್ಕ್ ನೌಕರರ ಬೇಡಿಕೆಗಳನ್ನು ಈಡೇರಿಸುವ ಸಂಬಂಧ ಶನಿವಾರ (ಸೆ.7)ಗುತ್ತಿಗೆದಾರ ಹಾಗೂ ಎಂಜಿನಿಯರ್‌ಗಳ ಸಭೆ ಕರೆಯಲಾಗಿದ್ದು, ಸಮಸ್ಯೆ ಬಗೆಹರಿಸುವುದರಿಂದ ನೀರುಗಂಟಿಗಳು ಪ್ರತಿಭಟನೆ ಕೈ ಬಿಡಬೇಕು ಎಂದು ಶಾಸಕ ಡಾ. ಕೆ.ಅನ್ನದಾನಿ ಮನವಿ ಮಾಡಿದರು.
ಟಾಸ್ಕ್ವರ್ಕ್ ನೌಕರರು ತಾಲೂಕಿನ ಕಾಗೇಪುರ ಕಾವೇರಿ ನೀರಾವರಿ ನಿಗಮದ ಮುಂದೆ ಕಳೆದ 7 ದಿನಗಳಿಂದ ಬಾಕಿ ವೇತನಕ್ಕೆ ಆಗ್ರಹಿಸಿ ನಡೆಸುತ್ತಿರುವ ಪ್ರತಿಭಟನಾ ಸ್ಥಳಕ್ಕೆ ಬುಧವಾರ ರಾತ್ರಿ ತೆರಳಿ ಮಾತುಕತೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದ 5 ತಿಂಗಳ ವೇತನ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ನೀರುಗಂಟಿಗಳು ಪ್ರತಿಭಟನೆ ನಡೆಸುತ್ತಿದ್ದು, ಇವರ ಬೇಡಿಕೆಗಳನ್ನು ಈಡೇರಿಸಲು ಬದ್ಧನಾಗಿದ್ದೇನೆ ಎಂದು ಹೇಳಿದರು.
ಕೆಲಸಕ್ಕೆ ಹಾಜರಾಗಿ: ಸೆ.7ರಂದು ಎಂಜಿನಿಯರ್, ಗುತ್ತಿಗೆದಾರರು ಮತ್ತು ಟಾಸ್ಕ್ವರ್ಕ್ ನೌಕರರ ಸಭೆ ಕರೆದು ಸ್ಥಳದಲ್ಲಿಯೇ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳಲಾಗುವುದು. ರೈತರು ಈಗಾಗಲೇ ಭತ್ತದ ನಾಟಿ ಮಾಡಲು ಮುಂದಾಗುತ್ತಿರುವುದರಿಂದ ನೌಕರರು ಪ್ರತಿಭಟನೆಯನ್ನು ಕೈಬಿಟ್ಟು ಕೆಲಸಕ್ಕೆ ಹಾಜರಾಗಬೇಕು ಎಂದು ಮನವಿ ಮಾಡಿದರು.
ಸಮಾನ ವೇತನ ನೀಡಿ: ಟಾಸ್ಕ್ವರ್ಕ್ ನೌಕರರ ಸಂಘದ ಅಧ್ಯಕ್ಷ ಬೋರೇಗೌಡ ಮಾತನಾಡಿ, ಅಧಿಕಾರಿಗಳು ಹಿಂದಿನಿಂದಲೂ ಕೇವಲ ಭರವಸೆಗಳನ್ನು ನೀಡುತ್ತಾ ಬರುತ್ತಿದ್ದು, ನೌಕರರನ್ನು ತೀವ್ರವಾಗಿ ಶೋಷಿಸುತ್ತಿದ್ದಾರೆ. ಇಎಸ್‌ಐ, ಪಿಎಫ್ಗಳನ್ನು ನೀಡುತ್ತಿಲ್ಲ, ಸಮಾನ ಕೂಲಿಗೆ ಸಮಾನ ವೇತನ ಕಾರ್ಮಿಕ ಇಲಾಖೆಯಿಂದ ಜಾರಿ ಯಾಗಿದ್ದರೂ ಕೂಡ ನೌಕರರಿಗೆ ಸರಿಯಾಗಿ ನೀಡುತ್ತಿಲ್ಲ ಎಂದು ಹೇಳಿದರು.
ಟಾಸ್‌ವರ್ಕ್ ನೌಕರರ ಸಮಸ್ಯೆ ರಾಜ್ಯದಲ್ಲಿಯೇ ಇರುವುದರಿಂದ ವಿಧಾನಸಭಾ ಕಲಾಪದಲ್ಲಿ ಈ ಬಗ್ಗೆ ಚರ್ಚಿಸಿ ನೌಕರರ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಲು ತಾನು ಮತ್ತು ಜಿಲ್ಲೆಯ ಎಲ್ಲಾ ಶಾಸಕರು ಪ್ರಾಮಾಣಿಕವಾಗಿ ಶ್ರಮಿಸಲಿದ್ದು, ಪ್ರತಿಭಟನೆಯನ್ನು ಕೈ ಬಿಡಬೇಕೆಂದು ಮನವಿ ಮಾಡಿದರು.ಈ ಸಂದರ್ಭದಲ್ಲಿ ಎಇಇ ನಾಗರಾಜು, ಜೆಡಿಎಸ್ ತಾಲೂಕು ಅಧ್ಯಕ್ಷ ಮಲ್ಲೇಗೌಡ, ಸೇರಿದಂತೆ ಮತ್ತಿತರರು ಹಾಜರಿದ್ದರು.