Advertisement

ಕೇಂದ್ರ ಸರಕಾರದ ಜನಪರ ಯೋಜನೆಗಳ ಪರಿಣಾಮಕಾರಿ ಜಾರಿಗೆ ಕಾರ್ಯಪಡೆ

01:16 AM Feb 24, 2020 | Team Udayavani |

ಉಡುಪಿ: ಸುಮಾರು ಮೂರು ದಶಕಗಳಿಂದ ಬಿಜೆಪಿಯಲ್ಲಿ ಸಕ್ರಿಯರಾಗಿರುವ ಕುಯಿಲಾಡಿ ಸುರೇಶ್‌ ನಾಯಕ್‌ ಅವರು ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಫೆ. 24ರ ಅಪರಾಹ್ನ 4ಕ್ಕೆ ಹೊಟೇಲ್‌ ಕಿದಿಯೂರು ಶೇಷಶಯನ ಸಭಾಂಗಣದಲ್ಲಿ ನಡೆಯುವ ಸಂಕಲ್ಪ ಸಮಾವೇಶದಲ್ಲಿ ಹುದ್ದೆ ಸ್ವೀಕರಿಸಲಿರುವ ಅವರು “ಉದಯವಾಣಿ’ಗೆ ನೀಡಿದ ಸಂದರ್ಶನದ ಭಾಗ ಇಂತಿದೆ:

Advertisement

– ನಿಮ್ಮ ಸಾಧನೆ ನೋಡಿ ರಾಜ್ಯ ಘಟಕದವರು ಜಿಲ್ಲಾಧ್ಯಕ್ಷರಾಗಿ ಆಯ್ಕೆ ಮಾಡಿದ್ದಾರಾ?
ಪಕ್ಷದ ಕೆಲಸವನ್ನು ನಿರಂತರವಾಗಿ ಮಾಡಿಕೊಂಡು ಬಂದಿರುವುದನ್ನು ನೋಡಿ. ಪಕ್ಷ ಚುನಾವಣೆಯಲ್ಲಿ ಸೋತಾಗ ಕಾಪು ಮಂಡಲಾಧ್ಯಕ್ಷನಾಗಿ ಜವಾಬ್ದಾರಿಯನ್ನು ಸ್ವೀಕರಿಸಿ ಬಂದ ಎಲ್ಲ ಚುನಾವಣೆಗಳಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದೆ. ಇದು ನನ್ನ ಸಾಧನೆಯಲ್ಲ, ಎಲ್ಲರೂ ಜತೆಗೂಡಿ ರಥ ಎಳೆದರಷ್ಟೆ.

– ಮುಂದೆ ಯಾವ ಗುರಿಗಳನ್ನು ಇರಿಸಿಕೊಂಡಿದ್ದೀರಿ?
ಮುಂದೆ ಬರುವ ಗ್ರಾ.ಪಂ., ಜಿ.ಪಂ., ತಾ.ಪಂ. ಚುನಾವಣೆ, 2023ರ ವಿಧಾನಸಭಾ ಚುನಾವಣೆಗಳಲ್ಲಿ ಈಗಾಗಲೇ ಗೆದ್ದ, ಸೋತ ಎಲ್ಲ ಸ್ಥಾನಗಳಲ್ಲಿ ಗೆಲ್ಲುವ, ಎಲ್ಲ ಸಹಕಾರಿ ಕ್ಷೇತ್ರಗಳಲ್ಲಿಯೂ ಬಿಜೆಪಿ ಸದಸ್ಯರು ಗೆಲುವು ಸಾಧಿಸುವಂತೆ ಮಾಡುತ್ತೇವೆ. ಕೇಂದ್ರ ಸರಕಾರದ ಜನಪರ ಯೋಜನೆಗಳ ಫ‌ಲವನ್ನು ಜನರಿಗೆ ನೇರವಾಗಿ ತಲುಪಿಸುವ ಕುರಿತು ಕಾರ್ಯಕರ್ತರ ಒಂದು ಕಾರ್ಯಪಡೆಯನ್ನು ಮಾಡಬೇಕೆಂದಿದ್ದೇನೆ. ಸರಕಾರಿ ಕಚೇರಿಗಳಲ್ಲಿ ಜನರ ಕೆಲಸ ಶೀಘ್ರದಲ್ಲಿ ಆಗುವ ಕುರಿತು ಸಚಿವರು, ಶಾಸಕರು, ಸಂಸದರ ಜತೆ ಚರ್ಚಿಸುತ್ತೇನೆ.

– ಜಿಲ್ಲಾ ಸಮಿತಿ ರಚಿಸುವಾಗ ಯಾವ ಮಾನದಂಡವನ್ನು ಅನುಸರಿಸುತ್ತೀರಿ?
ಕ್ಷೇತ್ರವಾರು, ಸಮುದಾಯವಾರು ಪ್ರಾತಿನಿಧ್ಯವನ್ನು ನೀಡಲಾಗುತ್ತದೆ. ಹಿಂದಿನ ಅವಧಿಯಲ್ಲಿ ಪಕ್ಷದ ವಿವಿಧ ಘಟಕಗಳಲ್ಲಿ ನಿರ್ವಹಿಸಿದ ಕಾರ್ಯಕ್ಷಮತೆಯನ್ನು ಪರಿಗಣಿಸುತ್ತೇವೆ.

– ಕೇಂದ್ರ, ರಾಜ್ಯ ಸರಕಾರಗಳು ನಿಮ್ಮ ಪಕ್ಷದ್ದಾಗಿರುವಾಗ ಜಿಲ್ಲೆಯ ಅಭಿವೃದ್ಧಿಯಲ್ಲಿ ನಿಮ್ಮ ಪಾತ್ರ ಏನಿರುತ್ತದೆ?
ರಾ.ಹೆ., ಕುಡಿಯುವ ನೀರು ಸಹಿತ ವಿವಿಧ ಅಭಿವೃದ್ಧಿ ಕುರಿತಂತೆ ಸಚಿವರು, ಸಂಸದರು, ಶಾಸಕರೊಂದಿಗೆ ವಿಚಾರಗಳನ್ನು ಹಂಚಿಕೊಳ್ಳುತ್ತೇನೆ ಮತ್ತು ಅವರ ಕಲ್ಪನೆಯ ಯೋಚನೆಗಳಿಗೆ ಸಹಕಾರ ಕೊಡುತ್ತೇವೆ. ಡಾ| ವಿ.ಎಸ್‌. ಆಚಾರ್ಯರು ಹಾಕಿದ ಅಭಿವೃದ್ಧಿಯ ಭದ್ರಬುನಾದಿಯನ್ನು ಮುಂದುವರಿಸುತ್ತೇವೆ.

Advertisement

– ನಿತ್ಯ ಸಂಜೆ ಕಚೇರಿಯಲ್ಲಿ ಲಭ್ಯ
ಕಾರ್ಯಕರ್ತರ ಜತೆ ಸೌಹಾರ್ದ ಸಂಬಂಧವನ್ನು ಕಾಯ್ದುಕೊಂಡು ಪಕ್ಷವನ್ನು ಸಂಘಟಿಸುತ್ತೇನೆ. ರವಿವಾರ ಮತ್ತು ನಿಗದಿತ ಕಾರ್ಯಕ್ರಮಗಳು ಇಲ್ಲದಿರುವ ದಿನಗಳನ್ನು ಹೊರತುಪಡಿಸಿ ಪ್ರತಿ ನಿತ್ಯ ಸಂಜೆ 4.30ರಿಂದ 6.30ರ ವರೆಗೆ ಪಕ್ಷದ ಕಾರ್ಯಾಲಯದಲ್ಲಿ ಸಿಗುತ್ತೇನೆ.
– ಕುಯಿಲಾಡಿ ಸುರೇಶ್‌ ನಾಯಕ್‌

Advertisement

Udayavani is now on Telegram. Click here to join our channel and stay updated with the latest news.

Next