Advertisement

ಕೆಂಪು ಕಲ್ಲು ಕೋರೆಗಳ ಮೇಲೆ ಟಾಸ್ಕ್ ಪೋರ್ಸ್‌ ನಿಗಾ

02:11 AM Dec 08, 2020 | mahesh |

ಮಂಗಳೂರು: ಕರಾವಳಿಯ ನಿರ್ಮಾಣ ಕ್ಷೇತ್ರದ ಆಧಾರವಾಗಿರುವ ಕೆಂಪು ಕಲ್ಲಿನ ಕೋರೆ ನಡೆಸುವವರ ಮೇಲೆ ನಿಗಾ ವಹಿಸಲು ದ.ಕ. ಜಿಲ್ಲಾಡಳಿತವು “ಗ್ರಾಮ ಮಟ್ಟದ ಟಾಸ್ಕ್ಫೋರ್ಸ್‌’ ರಚಿಸಿದೆ.

Advertisement

ದ.ಕ. ಜಿಲ್ಲೆಯಲ್ಲಿ ಅನಧಿಕೃತ ಕೆಂಪು ಕಲ್ಲಿನ ಕೋರೆ ನಡೆಸುವುದಕ್ಕೆ ಜಿಲ್ಲಾಡಳಿತ 15 ದಿನಗಳ ಹಿಂದೆ ತಡೆ ನೀಡಿದ್ದು, ಉಲ್ಲಂಘನೆಯಾದಲ್ಲಿ ಪಿಡಿಒ ಮತ್ತು ಗ್ರಾಮಕರಣಿಕರನ್ನೇ ಹೊಣೆಗಾರರನ್ನಾಗಿಸುವುದಾಗಿ ಎಚ್ಚರಿಸಿತ್ತು.ಜಿಲ್ಲೆಯಲ್ಲಿ 600ಕ್ಕೂ ಅಧಿಕ ಕೆಂಪು ಕಲ್ಲಿನ ಕೋರೆಗಳಿದ್ದರೂ ಪರವಾನಿಗೆ ಪಡೆದಿರುವವರು ಕೇವಲ 40 ಮಂದಿ!

ಪಟ್ಟಾ ಜಾಗದಲ್ಲಿ ಕೆಂಪು ಕಲ್ಲಿನ ಕೋರೆ ಮಾಡಲು 3 “ಎ’ ಅರ್ಜಿ ಹಾಕಬೇಕು. ಆದರೆ ಇಲ್ಲಿಯವರೆಗೆ ಗ್ರಾಮಕರಣಿಕರು ಹಾಗೂ ಪಿಡಿಒಗಳಿಗೆ ಈ ಬಗ್ಗೆ ಮಾಹಿತಿ ಇರಲಿಲ್ಲ. ಅನುಮತಿ ನೀಡಿರುವ ಭೂಮಿಯಲ್ಲಿಯೇ ಗಣಿಗಾರಿಕೆ ಮಾಡುತ್ತಿದ್ದಾರೆಯೇ? ಎಂಬ ಖಚಿತತೆಯೂ ಇರಲಿಲ್ಲ. ಹೀಗಾಗಿ ವ್ಯವಸ್ಥೆಯ ಸುಧಾರಣೆಗೆ ಜಿಲ್ಲಾಡಳಿತ ನಿರ್ಧರಿಸಿದೆ.

ಮಾರ್ಗಸೂಚಿಯೇ ಇಲ್ಲ!
ದ.ಕ., ಉಡುಪಿ, ಉತ್ತರ ಕನ್ನಡ, ಬೀದರ್‌ ಭಾಗದಲ್ಲಿ ಕೆಂಪು ಕಲ್ಲು ಸಿಗುತ್ತದೆ. ಆದರೆ ಕಲ್ಲು ತೆಗೆಯುವ ನಿಯಮಗಳ ಬಗ್ಗೆ ಸರಕಾರದಿಂದ ಅಧಿಕೃತ ಮಾರ್ಗಸೂಚಿಯೇ ಇಲ್ಲ. ಗಣಿ ಇಲಾಖೆಯಿಂದ ಪರವಾನಿಗೆ ಪಡೆಯಬೇಕು ಎಂದು ಜಿಲ್ಲಾಡಳಿತ ತಿಳಿಸಿದರೆ, 2018ರಲ್ಲೇ ಗಣಿ ಇಲಾಖೆಗೆ ಅರ್ಜಿ ಸಲ್ಲಿಸಿದ್ದರೂ ಪರವಾನಿಗೆ ನೀಡಿಲ್ಲ ಎಂಬುದು ಕೋರೆ ನಡೆಸುತ್ತಿರುವ 100ಕ್ಕೂ
ಅಧಿಕ ಮಂದಿಯ ಆರೋಪ.

ನಿರುದ್ಯೋಗ ಸಮಸ್ಯೆ, ಕಲ್ಲು ಕೊರತೆ ಭೀತಿ!
ದ.ಕ. ಜಿಲ್ಲೆಯಲ್ಲಿ 60 ಸಾವಿರಕ್ಕೂ ಅಧಿಕ ಮಂದಿ ಕೆಂಪು ಕಲ್ಲಿನ ಕೋರೆಗಳನ್ನೇ ನಂಬಿದ್ದಾರೆ. ಕೆಲವು ದಿನಗಳಿಂದೀಚೆಗೆ ಕೋರೆಗಳು ಬಂದ್‌ ಆಗಿರುವುದ ರಿಂದ ಅವರಿಗೆ ಕೆಲಸವಿಲ್ಲದೆ ಸಮಸ್ಯೆಯಾಗಿದೆ. ಜತೆಗೆ ಈ ಹಿಂದೆ ಮರಳು ಸಮಸ್ಯೆ ಉಲ್ಬಣವಾದಂತೆ ಕೆಂಪು ಕಲ್ಲಿನ ಕೊರತೆಯೂ ಎದುರಾಗಿದೆ.

Advertisement

ಪ್ರತ್ಯೇಕ ನೀತಿ ಅಗತ್ಯ
ಜಿಲ್ಲಾಡಳಿತ ಸೂಚಿಸಿರುವಂತೆ ಕೆಂಪು ಕಲ್ಲಿನ ಕೋರೆ ನಡೆಸುವ ಪರವಾನಿಗೆಗೆ 15 ದಿನದೊಳಗೆ ಗಣಿ ಇಲಾಖೆಗೆ ಅರ್ಜಿ ಸಲ್ಲಿಸಲಾಗುವುದು. ಕೋರೆಗಳನ್ನು ಅಧಿಕೃತಗೊಳಿಸಿಕೊಳ್ಳಲು ಕನಿಷ್ಠ 3 ತಿಂಗಳು ಅವಕಾಶ ನೀಡುವಂತೆಯೂ ಮನವಿ ಸಲ್ಲಿಸಿದ್ದೇವೆ. ಕೆಂಪು ಕಲ್ಲು ಗಣಿಗಾರಿಕೆಗೆ ಸಂಬಂಧಿಸಿ ಪ್ರತ್ಯೇಕ ನೀತಿ ಜಾರಿಗೆ ತರುವಂತೆ ಸರಕಾರದ ಗಮನ ಸೆಳೆಯಲಾಗುವುದು ಎಂದು ಅವಿಭಜಿತ ದ.ಕ. ಜಿಲ್ಲಾ ಕೆಂಪು ಕಲ್ಲು ಪಾಯ ನಿರ್ವಾಹಕರ ಒಕ್ಕೂಟದ ಅಧ್ಯಕ್ಷ ಸತೀಶ್‌ ಆಚಾರ್ಯ ತಿಳಿಸಿದ್ದಾರೆ.

ಪರವಾನಿಗೆಗಾಗಿ ಗಣಿ ಇಲಾಖೆಗೆ ಸಲ್ಲಿಸುವ ಅರ್ಜಿಯನ್ನು ಗ್ರಾಮ ಮಟ್ಟದ ಟಾಸ್ಕ್ಫೋರ್ಸ್‌ಗೆ ಕಳುಹಿಸಲಾಗುತ್ತದೆ. ಗ್ರಾಮ ಕರಣಿಕರು, ಪಿಡಿಒ, ಡಿಆರ್‌ಎಫ್‌ಒ, ಸಹಾಯಕ ಕೃಷಿ ಅಧಿಕಾರಿ, ತೋಟಗಾರಿಕಾ ಇಲಾಖೆ ಅಧಿಕಾರಿ, ಸರ್ವೇಯರ್‌, ಬೀಟ್‌ ಪೊಲೀಸ್‌ ಇರುವ ತಂಡವನ್ನು ಇದಕ್ಕಾಗಿ ಮಾಡಲಾಗಿದೆ. ಕೆಂಪು ಕಲ್ಲು ತೆಗೆಯಲು ಮೀಸಲಾದ ಜಾಗವನ್ನು ಈ ತಂಡ ದೃಢೀಕರಿಸಿ ಆ ಕುರಿತ ಪ್ರಮಾಣ ಪತ್ರವನ್ನು 15 ದಿನದೊಳಗೆ ತಹಶೀಲ್ದಾರ್‌ ಹಾಗೂ ಸಹಾಯಕ ನಿರ್ದೇಶಕರಿಗೆ ನೀಡಬೇಕು. ಅದು ಗಣಿ ಇಲಾಖೆಯ ಉಪನಿರ್ದೇಶಕರಿಗೆ ಹೋಗಿ ಅದರ ಆಧಾರದಲ್ಲಿ 1 ತಿಂಗಳೊಳಗೆ ಪರವಾನಿಗೆ ನೀಡುತ್ತಾರೆ. ಅರ್ಜಿ ಸಲ್ಲಿಕೆಗೆ ಇನ್ನಷ್ಟು ಸಮಯಾವಕಾಶ ನೀಡಲಾಗದು.
– ಡಾ| ರಾಜೇಂದ್ರ ಕೆ.ವಿ., ದ.ಕ. ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next