ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಪರಿಸ್ಥಿತಿಯನ್ನು ಸಮರ್ಥವಾಗಿ ಹತೋಟಿಗೆ ತರಲು ಸಿಐಐ (ಕಾನ್ಫಡರೇಶನ್ ಆಫ್ ಇಂಡಿಯನ್ ಇಂಡಸ್ಟ್ರಿ ) ಸಹಯೋಗದಲ್ಲಿ ಕಾರ್ಯಪಡೆ ರಚಿಸಲು ಶನಿವಾರ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಸಿಐಐ ಪ್ರತಿನಿಧಿಗಳೊಂದಿಗೆ ವೀಡಿಯೋ ಸಂವಾದ ನಡೆಸಿದ ಸಚಿವರು, ರಾಜ್ಯದಲ್ಲಿ ಕೊರೊನಾ ಪರಿಸ್ಥಿತಿಯನ್ನು ನಿಯಂತ್ರಿಸಲು ಸಿಐಐ ಹಾಗೂ ಆರೋಗ್ಯ ಇಲಾಖೆಯ ಸಹಯೋಗದಲ್ಲಿ ಟಾಸ್ಕ್ ಫೋರ್ಸ್ ರಚಿಸಲಾಗುತ್ತದೆ ಎಂದು ತಿಳಿಸಿದರು.
ಈ ಸಮಿತಿಯು ವೈದ್ಯಕೀಯ ಹಾಗೂ ಇತರೆ ಮೂಲಸೌಕರ್ಯಗಳನ್ನು ಬಲಪಡಿಸುವ ಕಾರ್ಯ ಮಾಡಲಿದೆ. ಕೊರೊನಾ ಕುರಿತ ಎಲ್ಲ ಸಮಸ್ಯೆಗಳನ್ನು ಪರಿಹರಿಸಲು ಕಾಲ್ ಸೆಂಟರ್, ಮಾಡ್ನೂಲರ್ ಐಸಿಯುಗಳ ನಿರ್ಮಾಣ ಸೇರಿದಂತೆ ಹಲವು ಕಾರ್ಯಗಳಲ್ಲಿ ಟಾಸ್ಕ್ ಫೋರ್ಸ್ ಮುಂದಾಳತ್ವ ವಹಿಸಬೇಕು ಎಂದು ಸಭೆಯಲ್ಲಿ ನಿರ್ಣಯಿಸಲಾಗಿದೆ. ಆರೋಗ್ಯ ವಲಯದಲ್ಲಿ ತಂತ್ರಜ್ಞಾನ ಬಳಕೆ, ಔಷಧಿಗಳ ಪೂರೈಕೆ, ವೈದ್ಯಕೀಯ ಸಾಧನ, ಉಪಕರಣಗಳ ಪೂರೈಕೆ, ತಂತ್ರಾಂಶ ಒದಗಿಸುವುದು ಸೇರಿದಂತೆ ಹಲವು ರೀತಿಯಲ್ಲಿ ಟಾಸ್ಕ್ ಫೋರ್ಸ್ ರಾಜ್ಯ ಸರ್ಕಾರಕ್ಕೆ ನೆರವು ನೀಡಲಿದೆ ಎಂದು ಹೇಳಿದರು.
ಇದನ್ನೂ ಓದಿ :ನಿನ್ನೆಗಿಂತ ಹೆಚ್ಚು ಪ್ರಕರಣ : ರಾಜ್ಯದಲ್ಲಿಂದು 29438 ಕೋವಿಡ್ ಹೊಸ ಕೇಸ್ ಪತ್ತೆ
ಕೋವಿಡ್ ನಿರ್ವಹಣೆಗೆ ಒಂದು ಕಾಲ್ ಸೆಂಟರ್ ನಿರ್ಮಿಸಿ ಎಲ್ಲವನ್ನೂ ಸಮನ್ವಯಗೊಳಿಸುವ ವ್ಯವಸ್ಥೆ ತರಬೇಕಿದೆ. ಈ ಕಾರ್ಯವನ್ನು ಟಾಸ್ಕ್ ಫೋರ್ಸ್‌ಗೆ ವಹಿಸಲಾಗಿದೆ. ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ತಜ್ಞರು ಸಹಾಯವಾಣಿ ಸಿಬ್ಬಂದಿಗೆ ತರಬೇತಿ ನೀಡಲಿದ್ದಾರೆ. ಕೋವಿಡ್ ರೋಗಿಗಳಿಗೆ ರಾಜ್ಯದಲ್ಲಿ 3,000-5,000 ಮಾಡ್ನೂಲರ್ ಐಸಿಯು ಹಾಸಿಗೆ ನಿರ್ಮಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಇದಕ್ಕೂ ಟಾಸ್ಕ್ ಫೋರ್ಸ್ ನೆರವಾಗಲಿದೆ. ಕೆಲ ಕಂಪನಿಗಳು ಕೇವಲ 7-10 ದಿನಗಳಲ್ಲಿ ಇಂತಹ ಐಸಿಯು ರೂಪಿಸುವುದಾಗಿ ತಿಳಿಸಿವೆ ಎಂದು ತಿಳಿಸಿದರು.
ಸಿಐಐ ಮಾಜಿ ಅಧ್ಯಕ್ಷ ಕ್ರಿಸ್ ಗೋಪಾಲಕೃಷ್ಣನ್, ವಿಕ್ರಮ್ ಕಿರ್ಲೋಸ್ಕರ್, ಖ್ಯಾತ ವೈದ್ಯ ಡಾ.ದೇವಿಶೆಟ್ಟಿ ಸಭೆಯಲ್ಲಿದ್ದರು.