Advertisement

ಕಲ್ಲು ಗಣಿಗಾರಿಕೆಯಲ್ಲಿ ಸ್ಫೋಟಕ ಬಳಕೆಗೆ ಅನುಮತಿ ಕಡ್ಡಾಯ

03:50 PM Mar 08, 2021 | Team Udayavani |

ಹಾಸನ: ಜಿಲ್ಲೆಯಲ್ಲಿರುವ ಎಲ್ಲಾ ಕಲ್ಲು ಗಣಿ ಗುತ್ತಿಗೆದಾರರು ಸ್ಫೋಟಕ ಬಳಸಲು ಗಣಿ ಸುರಕ್ಷತೆ ಮಹಾನಿರ್ದೇಶಕರಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕೆಂದು ಜಿಲ್ಲಾಧಿಕಾರಿ ಆರ್‌.ಗಿರೀಶ್‌ ಸೂಚಿಸಿದ್ದಾರೆ.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಮರಳು, ಕಲ್ಲು ಗಣಿಗಾರಿಕೆ ಟಾಸ್ಕ್ ಫೋರ್ಸ್‌ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿರುವ ಎಲ್ಲಾ 160 ಕಲ್ಲುಗಣಿಗಾರಿಕೆಯಲ್ಲಿ ಸುರಕ್ಷತಾ ವ್ಯವಸ್ಥೆಗಳ ಬಗ್ಗೆ ಪರಿಶೀಲನೆ ನಡೆಸಿ ಖಾತ್ರಿ ಪಡಿಸಿಕೊಂಡು ವರದಿನೀಡಬೇಕು ಎಂದು ಗಣಿ ಮತ್ತೂ ಭೂ ವಿಜ್ಞಾನಿ ಇಲಾಖೆ ಅಧಿಕಾರಿ ಗಳಿಗೆ ಸೂಚನೆ ನೀಡಿದರು.

ಯಾವುದೇ ಗಣಿಯಲ್ಲಿಯೂ ಅನುಮತಿ ಇಲ್ಲದೆ ಅಪಾಯಕಾರಿ ಸ್ಫೋಟಗಳನ್ನು ಬಳಸುವಂತಿಲ್ಲ. ಕಾರ್ಮಿಕರ ಜೀವ ಮತ್ತು ಆರೋಗ್ಯ ಸುಧಾರಣೆಗೆ ಗರಿಷ್ಠ ಕ್ರಮಗಳನ್ನು ಅನುಸರಿಸಬೇಕು. ಹೊಸದಾಗಿ ಗಣಿಗಾರಿಕೆ ಪರವಾನಗಿ ನೀಡುವಾಗ ಹೆಚ್ಚಿನ ಮುತುವರ್ಜಿ ವಹಿಸಬೇಕು. ಮುಖ್ಯರಸ್ತೆಗೆ ಯಾವುದೇ ಕ್ವಾರಿಗಳು ಹತ್ತಿರದಲ್ಲಿ ಇರಬಾರದು. ಗಣಿ ಅನುಮತಿಯಿಂದ ಯಾವುದೇ ಮನೆ, ದೇವಾಲಯ, ಸಾರ್ವಜನಿಕ ಆಸ್ತಿಗಳಿಗೆ ಹಾನಿಯಾ ಗಬಾರದು ಎಂದು ಜಿಲ್ಲಾಧಿಕಾರಿ ಹೇಳಿದರು.

ಖಾತ್ರಿ ಪಡಿಸಿಕೊಳ್ಳಿ: ಈಗಾಗಲೇ ಕಲ್ಲು ಗಣಿಗಳಲ್ಲಿ ನಡೆದ ಅಹಿತಕರ ಘಟನೆಗಳು ಎಲ್ಲರನ್ನು ಎಚ್ಚರಗೊಳಿಸಿವೆ. ಹಾಗಾಗಿ ಅಧಿಕಾರಿಗಳು ಹಾಗೂ ಕಲ್ಲುಗಣಿಗಾರಿಕೆ ಮಾಲಿಕರು ಜಾಗೃತರಾಗಿ ಸುರಕ್ಷಾ ಕ್ರಮಗಳನ್ನು ಖಾತರಿಪಡಿಸಿಕೊಳ್ಳಬೇಕು ಎಂದರು.

ಜಿಲ್ಲೆಯಲ್ಲಿ ಮರಳು ಅಕ್ರಮ ಸಾಗಾಣಿಕೆಗೆ ಸಂಪೂರ್ಣ ನಿಯಂತ್ರಣರಬೇಕು ಎಲ್ಲಾ ಚೆಕ್‌ ಪೋಸ್ಟ್‌ಗಳಲ್ಲಿ ಹಾಗೂ ಸಂಚಾರ ತಪಾಸಣೆಗಳ ಮೂಲಕ ಅನಧಿಕೃತ ಗಣಿಗಾರಿಕೆ ನಡೆಯದಂತೆ ಕ್ರಮ ಕೈಗೊಳ್ಳಬೇಕು, ಚೆಕ್‌ ಪೋಸ್ಟ್‌ಗಳಲ್ಲಿ ಪೊಲೀಸ್‌ ಹಾಗೂ ಗೃಹ ರಕ್ಷಕದಳದ ಸಿಬ್ಬಂದಿಗಳನ್ನು ನಿಯೋಜಿಸಿ ತಾಲೂಕು ಮಟ್ಟದ ಅಧಿಕಾರಿಗಳ ತಂಡಗಳನ್ನು ರಚಿಸಿ ಅಕ್ರಮ ಮರಳು ಸಾಗಾಟದ ಮೇಲೆ ನಿಗಾ ವಹಿಸಬೇಕು ಎಂದು ಹೇಳಿದರು. ಜಿಪಿಎಸ್‌ ಅಳವಡಿಸಿರುವ ವಾಹನಗಳನ್ನು ದುರ್ಬಳಕೆ ಮಾಡಿಕೊಂಡಲ್ಲಿ ದಂಡ ವಿಧಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆರ್‌.ಗಿರೀಶ್‌ ಸೂಚನೆ ನೀಡಿದರು.

Advertisement

ಸಭೆಯಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶ್ರೀನಿವಾಸ್‌ಗೌಡ, ಅಪರ ಜಿಲ್ಲಾಧಿಕಾರಿ ಕವಿತಾ ರಾಜರಾಂ, ಜಿಪಂ ಉಪ ಕಾರ್ಯದರ್ಶಿ ಚಂದ್ರಶೇಖರ್‌, ಸಕಲೇಶಪುರ ಎಸಿ ಗಿರೀಶ್‌ ನಂದನ್‌, ಆಲೂರುತಹಶೀಲ್ದಾರ್‌ ಶಿರೀನ್‌ ತಾಜ್‌, ಹಿರಿಯ ಭೂ ವಿಜ್ಞಾನಿ ನಾಗರಾಜ್‌, ಸಹಾಯಕ ಅರಣ್ಯಸಂರಕ್ಷಣಾಧಿಕಾರಿ ಹರೀಶ್‌ ಮತ್ತಿತರರು ಸಭೆಯಲ್ಲಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next