ಯಾದಗಿರಿ: ಪ್ರಸಕ್ತ ಸಾಲಿನ ಬೆಂಬಲ ಬೆಲೆ ಯೋಜನೆಯಡಿ ಜಿಲ್ಲೆಯಲ್ಲಿ ಹೆಸರು, ಉದ್ದು ಖರೀದಿಗೆ ಹೆಚ್ಚು ಉತ್ಪಾದನೆ ಇರುವ ಪ್ರದೇಶಗಳಲ್ಲಿ ಖರೀದಿ ಕೇಂದ್ರ ಸ್ಥಾಪಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಧಿಕಾರಿ ಡಾ| ರಾಗಪ್ರಿಯಾ ಸೂಚಿಸಿದರು.
ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬೆಂಬಲ ಬೆಲೆ ಯೋಜನೆಯಡಿ ಹೆಸರು ಕಾಳು, ಉದ್ದು ಖರೀದಿಸಲು ಜಿಲ್ಲೆಯಲ್ಲಿ ಖರೀದಿ ಕೇಂದ್ರಗಳ ಸ್ಥಾಪನೆ ಕುರಿತು ಮಂಗಳವಾರ ನಡೆದ ಜಿಲ್ಲಾಮಟ್ಟದ ಟಾಸ್ಕ್ಫೋರ್ಸ್ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಸದೃಢವಾಗಿರುವ ಪಿಎಸಿಎಸ್, ಎಫ್‌ಪಿಒ ಹಾಗೂ ಟಿಎಪಿಸಿಎಮ್‌ಎಸ್ ಮೂಲಕ ಹೆಸರು-ಉದ್ದು ಖರೀದಿಸಲಾಗುತ್ತದೆ. ಹೆಸರು ಕಾಳು ಖರೀದಿಗೆ 10 ಕೇಂದ್ರ ಹಾಗೂ ಉದ್ದು ಖರೀದಿಗೆ 2 ಕೇಂದ್ರ ಸ್ಥಾಪಿಸಲಾಗುತ್ತಿದ್ದು, ಸೆ.15ರಿಂದ 90 ದಿನಗಳ ಅವಧಿಯಲ್ಲಿ ಬೆಳೆಗಳನ್ನು ಖರೀದಿಸಲಾಗುವುದು ಎಂದರು.
2020-21ನೇ ಸಾಲಿನ ಕೃಷಿ ಇಲಾಖೆ ಅಂಕಿ ಅಂಶದ ಪ್ರಕಾರ 23 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹೆಸರು ಬಿತ್ತನೆಯಾಗಿದ್ದು, ಅಂದಾಜು 1 ಲಕ್ಷ 30 ಸಾವಿರ ಕ್ವಿಂಟಲ್ ಹೆಸರು ಕಾಳು ಉತ್ಪಾದನೆ ನಿರೀಕ್ಷಿಸಲಾಗಿದ್ದು, ಕೇಂದ್ರ ಸರ್ಕಾರವು
ಘೋಷಿಸಿರುವ ಕನಿಷ್ಠ ಬೆಂಬಲ ಬೆಲೆ ಪ್ರತಿ ಕ್ವಿಂಟಲ್ ಗೆ 7,196 ರೂ. ಗಳಿಗಿಂತ ಕಡಿಮೆ ದರದಲ್ಲಿ ಮಾರಾಟವಾಗುತ್ತಿರುವುದರಿಂದ ಬೆಂಬಲ ಬೆಲೆ ಯೋಜನೆಯಡಿ ಗರಿಷ್ಠ 21,725 ಮೆಟ್ರಿಕ್ ಟನ್ ಹೆಸರು ಕಾಳು ಹಾಗೂ 398 ಹೆಕ್ಟೇರ್ ಪ್ರದೇಶದಲ್ಲಿ ಉದ್ದು ಬಿತ್ತನೆಯಾಗಿದೆ. ಪ್ರಸಕ್ತ ಸಾಲಿನಲ್ಲಿ ಅಂದಾಜು 1500 ಕ್ವಿಂಟಲ್ ಉದ್ದಿನ ಕಾಳು ಉತ್ಪಾದನೆ ನಿರೀಕ್ಷಿಸಲಾಗಿದೆ. ಬೆಂಬಲ ಬೆಲೆ ಪ್ರತಿ ಕ್ವಿಂಟಲ್‌ಗೆ 6000 ರೂ. ಇದ್ದು, ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಗರಿಷ್ಠ 6,575 ಮೆಟ್ರಿಕ್ ಟನ್ ಎಫ್‌ಎಕ್ಯೂ ಗುಣಮಟ್ಟದ ಉದ್ದಿನಕಾಳನ್ನು ಮಾರ್ಗಸೂಚಿಗಳ ಪ್ರಕಾರ ಖರೀದಿಸಲಾಗುವುದು ಎಂದರು.
ಈ ವೇಳೆ ಕೃಷಿ ಮಾರಾಟ ಇಲಾಖೆ ಸಹಾಯಕ ನಿರ್ದೇಶಕ ಭೀಮರಾಯ ಕಲ್ಲೂರ, ಕೃಷಿ ಇಲಾಖೆ ಜಂಟಿ ನಿರ್ದೇಶಕಿ ದೇವಿಕಾ ಆರ್, ಆಹಾರ ಇಲಾಖೆ ಉಪ ನಿರ್ದೇಶಕ ಮಲ್ಲಿಕಾರ್ಜುನ, ರಾಜ್ಯ ಸಹಕಾರ ಮಾರಾಟ ಮಹಾ ಮಂಡಳಿ ನಿಯಮಿತ ಶಹಾಪುರ ಶಾಖಾ ವ್ಯವಸ್ಥಾಪಕ ಮಾರಣ್ಣ ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳು ಇದ್ದರು.