Advertisement
ತ್ರಾಸಿ ಜಂಕ್ಷನ್ ಬಳಿಯಿಂದ ಕೊಡಪಾಡಿ, ನಾಯಕವಾಡಿ, ಗುಜ್ಜಾಡಿ, ಗಂಗೊಳ್ಳಿಗೆ ಸಂಪರ್ಕಿಸುವ ಲೋಕೋಪಯೋಗಿ ಇಲಾಖೆಯ ಅಧೀನದ ರಸ್ತೆ ಇದಾಗಿದೆ. ಶಾಸಕ ಬಿ.ಎಂ. ಸುಕುಮಾರ್ ಶೆಟ್ಟಿ ಅವರ ಮುತುವರ್ಜಿಯಲ್ಲಿ ಗಂಗೊಳ್ಳಿಯಿಂದ ಕಾಂಕ್ರೀಟ್ ಕಾಮಗಾರಿ ನಡೆದಿದೆ. ಆದರೆ ಗುಜ್ಜಾಡಿಯಿಂದ ತ್ರಾಸಿಯವರೆಗಿನ ಸುಮಾರು 2-3 ಕಿ.ಮೀ. ದೂರದ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಇದರಿಂದ ವಾಹನ ಸವಾರರು ಸಂಕಷ್ಟ ಪಡುವಂತಾಗಿದೆ. ಅದರಲ್ಲೂ ತ್ರಾಸಿ ಜಂಕ್ಷನ್ ಬಳಿ ದೊಡ್ಡ – ದೊಡ್ಡ ಹೊಂಡದಿಂದಾಗಿ ಪ್ರಯಾಸ ಪಡುತ್ತಿದ್ದಾರೆ.
ಗಂಗೊಳ್ಳಿಯಿಂದ ತ್ರಾಸಿಯವರೆಗಿನ ಮುಖ್ಯ ರಸ್ತೆಯುದ್ದಕ್ಕೂ ಅನೇಕ ಕಡೆಗಳಲ್ಲಿ ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ಪ್ರತೀ ವರ್ಷ ರಸ್ತೆಯಲ್ಲಿಯೇ ಮಳೆ ನೀರು ಹರಿದು ಹೋಗುತ್ತಿದೆ. ಇದರಿಂದ ವರ್ಷದಿಂದ ವರ್ಷಕ್ಕೆ ಈ ರಸ್ತೆಯ ಡಾಮರೆಲ್ಲ ಕಿತ್ತು ಹೋಗಿ, ಅಲ್ಲಲ್ಲಿ ಹೊಂಡ, ಗುಂಡಿಗಳು ಬೀಳುತ್ತವೆ. ಪ್ರತೀ ವರ್ಷ ತೇಪೆ ಹಾಕುವ ಕಾರ್ಯ ಮಾಡುತ್ತಿದ್ದರೂ, ಮಳೆಗಾಲದಲ್ಲಿ ಆ ತೇಪೆ ಹಾಕಿದ ಡಾಮರೆಲ್ಲ ಕಿತ್ತು ಹೋಗುತ್ತಿದೆ. ರಸ್ತೆಯ ಅಭಿವೃದ್ಧಿಯೊಂದಿಗೆ ಇಕ್ಕೆಲಗಳಲ್ಲಿ ಚರಂಡಿಯನ್ನು ನಿರ್ಮಾಣ ಮಾಡಲಿ ಎನ್ನುವುದು ಸ್ಥಳೀಯರ ಬೇಡಿಕೆಯಾಗಿದೆ. ಇದನ್ನೂ ಓದಿ:ಸಿಂದಗಿ ಉಪ ಚುನಾವಣೆ : ನಾಜಿಯಾ ಶಕೀಲಾ ಅಂಗಡಿ ಜೆಡಿಎಸ್ ಅಭ್ಯರ್ಥಿ
Related Articles
ಈ ರಸ್ತೆಯು ತ್ರಾಸಿಯಿಂದ ಗಂಗೊಳ್ಳಿಯ ಮೀನುಗಾರಿಕಾ ಬಂದರು, ಕಂಚು ಗೋಡಿನ ಮೀನುಗಾರಿಕಾ ರಸ್ತೆಯನ್ನು ಸಂಪರ್ಕಿಸುವ ಪ್ರಮುಖ ಕೊಂಡಿ ಯಾಗಿದೆ. ಗಂಗೊಳ್ಳಿಯ ಇಲ್ಲಿನ ಬಂದರಿನಿಂದ ಬೇರೆ ಬೇರೆ ಕಡೆಗಳಿಗೆ ಮೀನು ಸಾಗಾಟ ಮಾಡಲಾಗುತ್ತದೆ. ಮೀನು ಸಾಗಾಟದ ಲಾರಿಗಳು, ಐಸ್ ಸಾಗಾಟದ ವಾಹನ, ಮೀನುಗಾರಿಕೆ ಸಲಕರಣೆ ಸಾಗಿಸುವ ವಾಹನಗಳು, ಪ್ರತಿದಿನ ಹತ್ತಾರು ಸರಕಾರಿ ಹಾಗೂ ಖಾಸಗಿ ಬಸ್‌ಗಳು, ಶಾಲಾ ವಾಹನಗಳು, ಕಾರು, ಆಟೋರಿಕ್ಷಾ ಸಹಿತ ಸಾವಿರಾರು ವಾಹನಗಳು ಪ್ರತಿನಿತ್ಯ ಇದೇ ಮಾರ್ಗವಾಗಿ ಸಂಚರಿಸುತ್ತವೆ. ಈ ಹೊಂಡ – ಗುಂಡಿಗಳ ರಸ್ತೆಯಿಂದಾಗಿ ಮೀನು ಗಾರಿಕೆ ಸೇರಿದಂತೆ ಎಲ್ಲ ರೀತಿಯ ವಾಣಿಜ್ಯ ಚಟುವಟಿಕೆಗಳಿಗೂ ಅಡ್ಡಿಯಾಗುತ್ತಿದೆ.
Advertisement
ತೇಪೆ ಹಾಕುವುದು ಮಾತ್ರಪ್ರತೀ ಮಳೆಗಾಲ ಮುಗಿದಾಗಲೂ ಈ ರಸ್ತೆಗೆ ತೇಪೆ ಹಾಕುವುದು ಮಾತ್ರ. ನಾವು ಅನೇಕ ವರ್ಷಗಳಿಂದ ಈ ರಸ್ತೆಗೆ ಮರು ಡಾಮರು ಕಾಮಗಾರಿ ಅಥವಾ ಅಭಿವೃದ್ಧಿಗೆ ಆಗ್ರಹಿಸುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಅಭಿವೃದ್ಧಿಗೆ ಅನುದಾನ ಮಂಜೂರಾಗುತ್ತದೆ ಎನ್ನುವ ಆಶ್ವಾಸನೆ ಕೇವಲ ಭರವಸೆಯಾಗಿಯೇ ಉಳಿದಿದೆ. ಈ ಬಾರಿಯಾದರೂ ಈ ರಸ್ತೆಯ ಅಭಿವೃದ್ಧಿಯಾಗಲಿ ಎನ್ನುವುದಾಗಿ ಈ ಭಾಗದ ನಾಗರಿಕರು
ಆಗ್ರಹಿಸಿದ್ದಾರೆ. ಅಭಿವೃದ್ಧಿಗೆ ಕ್ರಮ
ಈಗಾಗಲೇ ಗಂಗೊಳ್ಳಿಯಿಂದ ಮುಖ್ಯ ರಸ್ತೆಯ ಕಾಂಕ್ರೀಟ್ ಕಾಮಗಾರಿ ಆಗಿದೆ. ಗುಜ್ಜಾಡಿಯಿಂದ ತ್ರಾಸಿಯವರೆಗಿನ ಮುಖ್ಯ ರಸ್ತೆಯ ಅಭಿವೃದ್ಧಿ ಬಗ್ಗೆ ಗಮನದಲ್ಲಿದ್ದು, ಈ ರಸ್ತೆಯ ಅಭಿವೃದ್ಧಿಗೆ ಮುಂದಿನ ದಿನಗಳಲ್ಲಿ ಆದ್ಯತೆ ನೆಲೆಯಲ್ಲಿ ಅನುದಾನ ಬಿಡುಗಡೆಗೆ ಪ್ರಯತ್ನಿಸಲಾಗುವುದು.
– ಬಿ.ಎಂ. ಸುಕುಮಾರ್ ಶೆಟ್ಟಿ,
ಬೈಂದೂರು ಶಾಸಕರು