ಕಲಬುರಗಿ: ಚಿತ್ತಾಪುರ ತಾಲೂಕಿನ ತರ್ಕಸ್‌ಪೇಟೆ ಗ್ರಾಮದ ಮತದಾರರಿಗೆ ಮೇ 12 ರಂದು ಮತ ಚಲಾಯಿಸುವಂತೆ ಚಿತ್ತಾಪುರ ತಹಶೀಲ್ದಾರ ಶಿವಾನಂದ ಸಾಗರ ಮನವಿ ಮಾಡಿದರು. ಮತದಾನ ಬಹಿಷ್ಕರಿಸಲು ಮುಂದಾಗಿರುವ ತರ್ಕಸ್‌ಪೇಟೆ ಗ್ರಾಮದ ಮತದಾರರ ಮನವೊಲಿಸಿ ಮತದಾನ ಮಾಡಲು ಪ್ರೇರೇಪಿಸಬೇಕೆಂಬ ಜಿಲ್ಲಾಧಿಕಾರಿಗಳ ಆದೇಶದ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರ ಮನವೊಲಿಸಲು ಪ್ರಯತ್ನಿಸಲಾಯಿತು.
ತರ್ಕಸ್‌ಪೇಟೆ ಗ್ರಾಮದ ಹಣಮಂತ ದೇವರ ಗುಡಿಯಲ್ಲಿ ಸೇರಿದ ಗ್ರಾಮಸ್ಥರನ್ನು ಉದ್ದೇಶಿಸಿ ಮಾತನಾಡಿದ ತಹಶೀಲ್ದಾರರು, ಈಗಾಗಲೇ ನಾಲ್ಕು ಬಾರಿ ಈ ಗ್ರಾಮಕ್ಕೆ ಭೇಟಿ ನೀಡಿ ಮತದಾನ ಮಾಡಲು ಕೋರಲಾಗಿದೆ ಎಂದು ಹೇಳಿದರು.
ಗ್ರಾಮ ಪಂಚಾಯತಿ ಡಿ ಲಿಮಿಟೇಷನ್ ಸಂದರ್ಭದಲ್ಲಿ ತರ್ಕಸ್‌ಪೇಠ ಗ್ರಾಮವು ರಾಂಪುರ ಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಅಳವಡಿಸಿ ಈಗಾಗಲೇ ಗೆಜೆಟ್ ನೋಟಿಫಿಕೇಷನ್ ಹೊರಡಿಸಲಾಗಿದೆ. ಪ್ರತಿ ಐದು ವರ್ಷಕ್ಕೊಂದು ಬಾರಿ ಜನಸಂಖ್ಯೆ ಆಧಾರದ ಮೇಲೆ ಗ್ರಾಪಂಗಳನ್ನು ಡಿಲಿಮಿಟೇಷನ್ ಮಾಡಲಾಗುತ್ತದೆ. ಮುಂದಿನ ಬಾರಿ ಡಿ ಲಿಮಿಟೇಷನ್ ಮಾಡುವಾಗ ತರ್ಕಸ್‌ಪೇಟೆ ಗ್ರಾಮವನ್ನು ಪಂಚಾಯತಿ ಕೇಂದ್ರ ಸ್ಥಾನವನ್ನಾಗಿಸಲು ಪ್ರಯತ್ನಿಸಬೇಕು. ಈ ಚುನಾವಣೆಯಲ್ಲಿ ತಾವು ಮತದಾನ ಬಹಿಷ್ಕರಿಸುವುದರಿಂದ ಯಾವುದೇ ಪ್ರಯೋಜನವಿಲ್ಲ. ಪ್ರಜಾಪ್ರಭುತ್ವದ ಭದ್ರಬುನಾದಿಗೆ ಸಹಕರಿಸಿ ತಮ್ಮ ಮತದಾನದ ಹಕ್ಕನ್ನು ಚಲಾಯಿಸಬೇಕು ಎಂದು ಮನವಿ ಮಾಡಿದರು.
ಚಿತ್ತಾಪುರ ಪಿಎಸ್‌ಐ ವಿಜಯಕುಮಾರ ಮಾತನಾಡಿ, ಪ್ರಜಾಪ್ರಭುತ್ವದಲ್ಲಿ ಮತದಾನ ಎಂಬ ಅಸ್ತ್ರವು ನಮಗೆ ಸಂವಿಧಾನಾತ್ಮಕವಾಗಿ ಪ್ರಾಪ್ತವಾಗಿದೆ. ಗ್ರಾಮಸ್ಥರು ತಮ್ಮ ನಿರ್ಧಾರ ಬದಲಾಯಿಸಿ ಮತದಾನ ಮಾಡಬೇಕು. ಯಾವುದೇ ಅಭ್ಯರ್ಥಿಗಳಿಗೆ ಮತ ಚಲಾಯಿಸಲು ಇಷ್ಟವಿಲ್ಲದಿದ್ದಲ್ಲಿ ಚುನಾವಣೆ ಆಯೋಗವು ನೋಟಾ ಎನ್ನುವ ಮತ ಚಲಾಯಿಸಲು ಅವಕಾಶ ಮಾಡಿದೆ. ಕಾರಣ ಗ್ರಾಮಸ್ಥರು ಮತದಾನದಿಂದ ವಂಚಿತರಾಗದೆ ಕಡ್ಡಾಯವಾಗಿ ಮತಚಲಾಯಿಸಬೇಕು. ಯಾವುದೇ ಕಾರಣಕ್ಕೂ ಕಾನೂನನ್ನು ಕೈಗೆ ತೆಗೆದುಕೊಂಡು ಅಶಾಂತಿಗೆ ಆಸ್ಪದ ನೀಡಬಾರದು ಎಂದರು.
ತರ್ಕಸ್‌ಪೇಟೆಗ್ರಾಮದ ಮುಖಂಡ ಬಸಂತರಾಯ ದಂಡಗಿ ಮಾತನಾಡಿ, ತರ್ಕಸ್‌ಪೇಠ ಗ್ರಾಮವು ಗ್ರಾಮ ಪಂಚಾಯತಿ ಕೇಂದ್ರ ಸ್ಥಾನವಾಗಲು ಎಲ್ಲ ಸವಲತ್ತುಗಳನ್ನು ಹೊಂದಿದೆ. ಆದರೂ ಸಹ ತರ್ಕಸ್‌ಪೇಟೆ ಗ್ರಾಮವನ್ನು ರಾಂಪುರ ಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಒಳಪಡಿಸಲಾಗಿದೆ. ಇದನ್ನು ಬದಲಾಯಿಸಲು ಹೈಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಲಾಗಿದೆ. ತರ್ಕಸ್‌ಪೇಟೆ ಗ್ರಾಮವು ಪಂಚಾಯತಿ ಕೇಂದ್ರ ಸ್ಥಾನವಾಗದಿದ್ದಲ್ಲಿ ಈ ಗ್ರಾಮವನ್ನು ಈ ಹಿಂದಿನ ಕೊಲ್ಲೂರು ಗ್ರಾಮ ಪಂಚಾಯತಿ ವ್ಯಾಪ್ತಿಗೆ ಒಳಪಡಿಸಬೇಕು. ನಮ್ಮ ಗ್ರಾಮವನ್ನು ಪಂಚಾಯತಿ ಕೇಂದ್ರಸ್ಥಾನ ಮಾಡಲಿಲ್ಲ ಎನ್ನುವ ಅಸಮಾಧಾನ ನಮಗಿದೆ. ಇದರಿಂದ ಮತದಾನ ಬಹಿಷ್ಕರಿಸುವುದಕ್ಕೆ ಮುಂದಾಗಿದ್ದೇವೆ ಎಂದರು.
ಚಿತ್ತಾಪುರ ಫ್ಲೆಯಿಂಗ್ ಸ್ಕ್ವಾಡ್ ತಂಡದ ಶ್ರೀಧರ, ಸೆಕ್ಟರ್ ಅಧಿಕಾರಿಗಳಾದ ಸಿದ್ದು ಅಣಬಿ, ಅಶೋಕ ಟಿಳೇಕರ, ನಾಲವಾರ ಕಂದಾಯ ನಿರೀಕ್ಷಕ ಗುರುಪ್ರಸಾದ, ತರ್ಕಸ್‌ಪೇಟೆ ಗ್ರಾಮ ಲೆಕ್ಕಾಧಿಕಾರಿ ಬಸವಣ್ಣಪ್ಪ ಹೂಗಾರ, ಗ್ರಾಮದ ಗಣ್ಯರಾದ ಅಮೀನರೆಡ್ಡಿ, ನಾಗರೆಡ್ಡಿ, ಚಂದ್ರಶೇಖರ ನೀಲಗಾರ, ಮಲ್ಲಿಕಾರ್ಜುನ ಶೆಳ್ಳಗಿ, ರಾಯಪ್ಪ ಪೂಜಾರಿ, ಮಶಾಕಸಾಬ ಹೈದ್ರಾಬಾದ ಪಾಲ್ಗೊಂಡಿದ್ದರು.