Advertisement

ಪೌರ ಕಾರ್ಮಿಕರಿಗೆ ವಸತಿ ಸೌಲಭ್ಯ

07:41 PM Jan 27, 2020 | Naveen |

ತರೀಕೆರೆ: ಪೌರ ಕಾರ್ಮಿಕರಿಗೆ ಶಾಶ್ವತ ವಸತಿ ಸೌಲಭ್ಯ ಒದಗಿಸುವ ಉದ್ದೇಶದಿಂದ ಪುರಸಭೆ, ನಗರಸಭೆ ಮತ್ತು ಪಪಂನಲ್ಲಿ ವಸತಿ ಗೃಹ ನಿರ್ಮಿಸುತ್ತಿದೆ ಎಂದು ಶಾಸಕ ಡಿ.ಎಸ್‌. ಸುರೇಶ್‌ ಹೇಳಿದರು.

Advertisement

ಪಟ್ಟಣದ ಬಾಪೂಜಿ ಕಾಲೋನಿಯಲ್ಲಿ 1.30 ಕೋಟಿ ವೆಚ್ಚದ ನಾಲ್ಕು ವಸತಿ ಸಮುಚ್ಚಯಗಳಿಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಅವರು, ಪೌರ ಕಾರ್ಮಿಕರು ನಿವೃತ್ತಿ ನಂತರ ಪುರಸಭೆಯ ವ್ಯಾಪ್ತಿಯಲ್ಲಿ ವಾಸವಿದ್ದ ವಸತಿ ಗೃಹಗಳನ್ನು ತೆರವುಗೊಳಿಸಬೇಕಾಗಿತ್ತು. ಇದನ್ನು ಅರಿತ ಸರಕಾರ ಕಾರ್ಮಿಕರಿಗೆ ನಿವೃತ್ತ ಪೌರ ಕಾರ್ಮಿಕರಿಗೆ ವಸತಿ ಸಂಕೀರ್ಣ ನಿರ್ಮಾಣ ಮಾಡಿಕೊಡುತ್ತಿದೆ ಎಂದರು.

ಮೊದಲ ಹಂತದಲ್ಲಿ 16 ಪೌರ ಕಾರ್ಮಿಕರಿಗೆ ಮನೆಗಳನ್ನು ನಿರ್ಮಿಸಿ ಕೊಡಲಾಗುತ್ತಿದೆ. ಇನ್ನುಳಿದ 44 ಪೌರ ನೌಕರರಿಗೆ ಹಂತ ಹಂತವಾಗಿ ಮನೆಗಳನ್ನು ನಿರ್ಮಿಸಿ ಕೊಡಲು ಸರ್ಕಾರ ನಿರ್ಧರಿಸಿದೆ. ವಸತಿ ಮತ್ತು ನಿವೇಶನ ರಹಿತರಿಗೆ ಮನೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಸರಕಾರ ನೀಡುತ್ತಿರುವ ಸೌಲಭ್ಯ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ಸಮುಚ್ಚಯ ನಿರ್ಮಾಣದ ಕಾಮಗಾರಿ ಉತ್ತಮ ಗುಣಮಟ್ಟದ್ದಾಗಿರಬೇಕು. ಅಲ್ಲದೆ, ಮುಖ್ಯಾಧಿಕಾರಿ, ಇಂಜಿನಿಯರ್‌ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಬೇಕು. ಯಾವುದೇ ರೀತಿಯಲ್ಲೂ ಕಳಪೆ ಗುಣಮಟ್ಟದ ಕಾಮಗಾರಿಯನ್ನು ಗುತ್ತಿಗೆದಾರರು ನಿರ್ವಹಿಸದಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಂತೆ ಮಾರುಕಟ್ಟೆಯಲ್ಲಿ ಸಾರ್ವಜನಿಕರು ತರಕಾರಿಕೊಂಡು ಕೊಳ್ಳಲು ಮಳೆಗಾಲದಲ್ಲಿ ಬಹಳ ಶ್ರಮಪಡುತ್ತಿದ್ದರು. ಈ ನಿಟ್ಟಿನಲ್ಲಿ ವರ್ತಕರಿಗೆ ಮತ್ತು ಸಾರ್ವಜನಿಕರಿಗೆ ತೊಂದರೆಯಾಗದಂತೆ ಇರಲು ಸುಸಜ್ಜಿತವಾದ ಮಾರುಕಟ್ಟೆಯನ್ನು ನಗರೋತ್ಥಾನ ಯೋಜನೆಯಲ್ಲಿ ನಿರ್ಮಿಸಲಾಗಿದೆ ಎಂದರು.

Advertisement

ಪಟ್ಟಣದಲ್ಲಿ ಇರುವ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು 4ನೇ ಹಂತದ ಕುಡಿಯುವ ನೀರಿನ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಈ ಹಿಂದೆ ಪ್ರಸ್ತಾವನೆ ಸಲ್ಲಿಸಿದ್ದರು ಸಹ ಹಿಂದಿನ ಸರಕಾರ ಯೋಜನೆಗೆ ಅನುಮತಿ ನೀಡಿರಲಿಲ್ಲ, ಬಿಜೆಪಿ ನೇತೃತ್ವದ ಸರಕಾರದಲ್ಲಿ ಆಡಳಿತಾತ್ಮಕ ಮಂಜೂರಾತಿ ಕೆಲವೇ ದಿನಗಳಲ್ಲಿ ಸಿಗಲಿದೆ. ಪಟ್ಟಣದ ವಿವಿಧ ಭಾಗಗಳಲ್ಲಿ ಹಂತ ಹಂತವಾಗಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದರು.

ಆಡಳಿತಾಧಿಕಾರಿ ಮತ್ತು ಹಿರಿಯ ಉಪವಿಭಾಗಾಧಿಕಾರಿ ಬಿ.ಆರ್‌.ರೂಪ ಮಾತನಾಡಿ, ಮೊದಲನೇ ಹಂತ ಜಿ ಪ್ಲಸ್‌1 ಮನೆಗಳನ್ನು ನಿರ್ಮಾಣಕ್ಕೆ ಚಾಲನೆ ನೀಡಲಾಗಿದ್ದು, ಇನ್ನುಳಿದವರಿಗೆ ಮನೆಗಳ ಸೌಲಭ್ಯ ಕಲ್ಪಿಸಲು ಅಧಿಕಾರಿಗಳು ಪೂರ್ವ ತಯಾರಿ ಮಾಡಿಕೊಳ್ಳಬೇಕು. ಕೇವಲ ಮನೆಗಳನ್ನು ನಿರ್ಮಾಣ ಮಾಡಿದರೆ ಸಾಲದು ಅವರಿಗೆ ಅಗತ್ಯವಿರುವ ಎಲ್ಲಾ ಸೌಕರ್ಯವನ್ನು ಕಲ್ಪಿಸಿಕೊಡುವುದು ಪುರಸಭೆಯ ಕರ್ತವ್ಯ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಮುಖ್ಯಾಧಿಕಾರಿ ಟಿ.ಎಸ್‌. ಗಿರೀಶ್‌, ಮುಂದಿನ ದಿನಗಳಲ್ಲಿ 44 ಪೌರ ಕಾರ್ಮಿಕರಿಗೆ ಮನೆ ನಿರ್ಮಾಣ ಮಾಡಿಕೊಡಲಾಗುವುದು. ಈಗ ಆರಂಭಿಸಿರುವ ಸಮುಚ್ಚಯದಲ್ಲಿ ನಿವೃತ್ತಿಗೊಂಡವರಿಗೂ ಮನೆ ನೀಡಲಾಗುತ್ತಿದೆ ಎಂದರು. ತಾಪಂ ಅಧ್ಯಕ್ಷೆ ಪದ್ಮಾವತಿ, ತಹಶೀಲ್ದಾರ್‌ ಸಿ.ಜಿ.ಗೀತಾ, ಇಒ ವಿಶಾಲಾಕ್ಷಮ್ಮ, ಬಿಂದು, ತಾಹೀರತಸ್ನಿಮ್‌, ಪುರಸಭೆಯ ನೌಕರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next