ತರೀಕೆರೆ: ಪಟ್ಟಣದ ತಾಪಂ ಸಭಾಂಗಣದಲ್ಲಿ ಸೋಮವಾರ ಅಧ್ಯಕ್ಷೆ ಪದ್ಮಾವತಿ ಅಧ್ಯಕ್ಷತೆಯಲ್ಲಿ ಸರ್ವ ಸದಸ್ಯರ ಸಾಮಾನ್ಯ ಸಭೆ ನಡೆಯಿತು.
ಶಾಸಕ ಡಿ.ಎಸ್. ಸುರೇಶ್ ಮಾತನಾಡಿ, ತಾಲೂಕಿನ ನಾಗೇನಹಳ್ಳಿ, ಲಕ್ಕವಳ್ಳಿ ಮತ್ತಿತರ ಭಾಗಗಳ ಜಾನುವಾರುಗಳಲ್ಲಿ ಮಾರಕ ರೋಗಲಕ್ಷಣಗಳು ಕಾಣಿಸಿಕೊಳ್ಳುತ್ತಿದೆ. ಬೇರೆಡೆ ರೋಗ ಹರಡದಂತೆ ಎಚ್ಚರಿಕೆ ವಹಿಸಬೇಕು ಎಂದು ಪಶುಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಮೋಹನ್‌ಗೆ ಸೂಚನೆ ನೀಡಿದರು.
ಪಶು ಸಂಗೋಪನಾ ಇಲಾಖೆ ಸಹಾಯಕನಿರ್ದೇಶಕ ಎಂ.ಆರ್. ಮೋಹನ್ ಮಾತನಾಡಿ, ಜಾನುವಾರುಗಳಿಗೆ ಕಾಲು ಬಾಯಿ ಜ್ವರ ಬಾಧಿಸದಂತೆ ಲಸಿಕೆ ಹಾಕಲಾಗಿದೆ. ನಾಗೇನಹಳ್ಳಿ, ಲಕ್ಕವಳ್ಳಿ ಮತ್ತಿತರ ಕಡೆಗಳಲ್ಲಿ ಕಾಣಿಸಿಕೊಂಡಿದೆ ಎನ್ನಲಾಗುತ್ತಿರುವ ಲಿಂಪಿ ಸ್ಕಿನ್ ಡಿಸೀಸ್ ಕಾಯಿಲೆ ಕೋವಿಡ್ ಮಾದರಿಯದಾಗಿದ್ದು, ಈಗಾಗಲೇ ಲ್ಯಾಬ್ ಟೆಸ್ಟ್ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.
ಡಾ| ಬಿ.ಜಿ.ಚಂದ್ರಶೇಖರ್ ಮಾತನಾಡಿ, ತಾಲೂಕಿನಲ್ಲಿ ಈವರೆಗೆ 1436 ಕೋವಿಡ್ಪ್ರಕರಣ ಕಂಡು ಬಂದಿದ್ದು, 122 ಸಕ್ರಿಯವಾಗಿದೆ. ಈ ಪೈಕಿ 100 ಮಂದಿ ಸೋಂಕಿತರಿಗೆ ಮನೆಯಲ್ಲೇ ಇರಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಉಳಿದವರಿಗೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಮುಂದುವರಿದಿದೆ. ಪ್ರತಿ ದಿನ 450ಕ್ಕೂ ಹೆಚ್ಚು ಮಂದಿಯನ್ನು ಕೋವಿಡ್ ಪರೀಕ್ಷೆಗೊಳಪಡಿಸಲಾಗುತ್ತಿದ್ದು, ಪ್ರತಿ ಹಳ್ಳಿ- ಹಳ್ಳಿಗಳಿಗೆ ತೆರಳಿ ಪರೀಕ್ಷೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ತಾಪಂ ಅಧ್ಯಕ್ಷೆ ಪದ್ಮಾವತಿ ಮಾತನಾಡಿ, ಆಹಾರ ನಿರೀಕ್ಷಕ ತಿಮ್ಮಯ್ಯ ಪ್ರತಿ ಪಡಿತರ ಚೀಟಿಯಿಂದ ಕೇವಲ 2 ರೂ ವಸೂಲಿ ಮಾಡುತ್ತಿರುವುದು ಮಾತ್ರವಲ್ಲ, ನ್ಯಾಯಬೆಲೆ ಅಂಗಡಿಯಲ್ಲಿನ ಖಾಲಿಚೀಲ ತನ್ನ ಸುಪರ್ದಿಗೆ ಹಿಂದಿರುಗಿಸಬೇಕು ಎನ್ನುವ ಬೇಡಿಕೆ ಬಹಿರಂಗವಾಗಿಡುತ್ತಿದ್ದಾರೆ ಎಂದು ಕೆಲವು ನ್ಯಾಯಬೆಲೆ ಅಂಗಡಿ ಮಾಲೀಕರು ದೂರುತ್ತಿದ್ದಾರೆ. ಪಡಿತರ ಅಂಗಡಿ ಮಾಲೀಕರ ಮೂಲಕ ವಸೂಲಿ ಮಾಡಿದ ಹಣವನ್ನು ಡಿಸಿ, ಜಿಪಂ ಸಿಇಒ, ಎಸಿ, ತಹಶೀಲ್ದಾರ್ ಸೇರಿಜನಪ್ರತಿನಿ ಗಳಿಗೆ ಹಂಚಿಕೆ ಮಾಡಬೇಕುಎಂದು ಸುಳ್ಳು ಹೇಳಿ ವಸೂಲಿ ಕಡ್ಡಾಯಗೊಳಿಸಿದ್ದಾರೆಂಬ ಗಂಭೀರ ಆರೋಪ ಮಾಡಿದರು.
ಆಹಾರ ನಿರೀಕ್ಷರಿಗೆ ಅನಗತ್ಯ ಗೈರಾಗುವುದರ ಜತೆ ತಮ್ಮ ನಡವಳಿಕೆಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕೆಂದು ಕಳೆದ ಸಭೆಯಲ್ಲೇಎಚ್ಚರಿಕೆ ನೀಡಿ ಕಳುಹಿಕೊಡಲಾಗಿತ್ತಾದರೂ, ಪದೇ ಪದೇ ಇದೇ ವರ್ತನೆ ಪುನರಾವರ್ತಿಸುತ್ತಿದ್ದಾರೆ. ತಕ್ಷಣವೇ ಆಹಾರ ನಿರೀಕ್ಷಕ ತಿಮ್ಮಯ್ಯಗೆ ನೋಟಿಸ್ ಜಾರಿಗೊಳಿಸಿ ಡಿಸಿ ಮತ್ತು ಸಿಇಒಗೆಅವರ ವಿರುದ್ಧ ವರದಿ ಸಲ್ಲಿಸುವಂತೆ ತಾಪಂ ಇಒಗೆ ಸೂಚನೆ ನೀಡಿದರು.
ಅಂಗನವಾಡಿ ಕೇಂದ್ರಗಳಿಗೆ ಬೆಲ್ಲ ಸೇರಿ ಕಳಪೆ ಗುಣಮಟ್ಟದ ಆಹಾರ ಸಾಮಗ್ರಿ ಪೂರೈಸಲಾಗುತ್ತಿದೆ ಎಂಬ ಆರೋಪ ಮತ್ತು ಚರ್ಚೆ ನಡೆಯುತ್ತಿದೆ. ಎಂಎಸ್‌ಪಿಸಿ ಘಟಕದಲ್ಲಿ ಪ್ರಸ್ತುತ ಆಹಾರ ತಯಾರಿಸುತ್ತಿರುವ ಸ್ತ್ರೀಶಕ್ತಿ ಸಂಘಕ್ಕೆ ಗುಣಮಟ್ಟ ಕಾಯ್ದುಕೊಳ್ಳುವುದರ ಜತೆಗೆ ಸಕಾಲದಲ್ಲಿ ಆಹಾರ ಸಾಮಗ್ರಿ ವಿತರಣೆ ಮಾಡಲು ಆಸಕ್ತಿ ಇಲ್ಲದಿದ್ದರೆ, ಬೇರೆ ಸಂಘಕ್ಕೆ ಜವಾಬ್ದಾರಿ ವಹಿಸಿ ಎಂದು ಎಸಿಡಿಪಿಒ ಚರಣ್ ರಾಜ್‌ಗೆ ಸೂಚಿಸಿದರು. ತಾಪಂ ಉಪಾಧ್ಯಕ್ಷೆ ಶಿವಮ್ಮ, ಇಒ ಕೆ. ಯತಿರಾಜ್ ಮತ್ತಿತರರು ಇದ್ದರು.