ಬೆಂಗಳೂರು: ಮೈಸೂರು ಮತ್ತು ಸುತ್ತ್ತಮುತ್ತಲಿನ ಪ್ರದೇಶಗಳಲ್ಲಿ ನಡೆದ ಪ್ರತ್ಯೇಕ ಘಟನೆಗಳಲ್ಲಿ ಉದಯಗಿರಿ ಬಡಾವಣೆಯ ರಾಜು ಸೇರಿದಂತೆ ಆರ್‌ಎಸ್‌ಎಸ್‌ನ ನಾಲ್ವರು ಕಾರ್ಯಕರ್ತರನ್ನು ಕೊಲೆಮಾಡಿದ ಆರೋಪ ಎದುರಿಸುತ್ತಿರುವ ಹಂತಕನನ್ನು ಬೆಂಗಳೂರು ಕೇಂದ್ರ ಅಪರಾಧ ವಿಭಾಗ(ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ.
ಮೈಸೂರು ಮೂಲದ ಅತೀಕ್ ಷರೀಫ್ ಅಲಿಯಾಸ್ ಟಿಂಬರ್ ಅತೀಕ್(39) ಬಂಧಿತ ಆರೋಪಿ. ಅತೀಕ್ ಮತ್ತಿತರ ಆರೋಪಿಗಳು ಬೆಂಗಳೂರಿನ ವಾಸಿ, ಕರ್ನಾಟಕ ಫೋರಂ ಫಾರ್ ಡಿಗ್ನಿಟಿ(ಕೆಎಫ್ಡಿ) ಸಂಘಟನೆಯ ಮಾಜಿ ಅಧ್ಯಕ್ಷ ಖಲೀಮುಲ್ಲಾ ರಷ್ದಿ (ಈಗ ಬದುಕಿಲ್ಲ) ಎಂಬಾತನಿಂದ ಪ್ರೇರಿತರಾಗಿದ್ದರು ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.
ಅತೀಕ್, 2009ರಿಂದ 2016ರ ಅವಧಿಯಲ್ಲಿ ಮೈಸೂರು ಹಾಗೂ ಸುತ್ತ-ಮುತ್ತಲ ಪ್ರದೇಶಗಳಲ್ಲಿ ಆರ್‌ಎಸ್‌ಎಸ್‌ನಲ್ಲಿ ಗುರುತಿಸಲ್ಪಟ್ಟು ಬಿಜೆಪಿಯಲ್ಲಿದ್ದ ನಾಲ್ವರನ್ನು ಹತ್ಯೆಗೈದಿ ದ್ದಾನೆ. ಕೆಲ ನಾಯಕರ ಹತ್ಯೆಗೂ ಯತ್ನಿಸಿದ್ದಾನೆ.
ಆ.8 2016ರಿಂದ ತಲೆಮರೆಸಿಕೊಂಡಿದ್ದ ಅತೀಕ್, ಕರ್ನಾಟಕ ಹಾಗೂ ಮಹಾರಾಷ್ಟ್ರದ ವಿವಿಧ ಪ್ರದೇಶಗಳಲ್ಲಿ ಅಡಗಿದ್ದ. ಇದೀಗ ಸಿಸಿಬಿ ಪೊಲೀಸರು ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ಸಿಕ್ಕಿ ಬಿದ್ದಿದ್ದಾನೆ.
ರಾಜು ಕೊಲೆ ಮಾಡಿದ್ದ: ಅತೀಕ್ ತನ್ನ ಇತರೆ ಸಹಚರರ ಜತೆ ಸೇರಿಕೊಂಡು 2016 ಮಾ.13ರಂದು ಮೈಸೂರಿನ ಉದಯಗಿರಿ ಬಡಾವಣೆಯ ಆರ್‌ಎಸ್‌ಎಸ್ ಕಾರ್ಯಕರ್ತ ರಾಜು ಎಂಬವರನ್ನು ಬರ್ಬರವಾಗಿ ಕೊಲೆಗೈದಿದ್ದ. ಈ ಸಂಬಂಧ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದಕ್ಕೂ ಮೊದಲು 2008 ಜುಲೈ 12ರಂದು ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಿಜೆಪಿ ಮುಖಂಡ ಶಶಿಕುಮಾರ್ ಎಂಬವರ ಕೊಲೆಗೈದಿದ್ದ. ಹೆಚ್ಚಿನ ತನಿಖೆಗಾಗಿ ಪ್ರಕರಣವನ್ನು ಸಿಐಡಿಗೆ ವರ್ಗಾವಣೆ ಮಾಡಲಾಗಿತ್ತು. 2009 ಜುಲೈ 3ರಂದು ಮೈಸೂರಿನ ಆರ್‌ಎಸ್‌ಎಸ್ ಮುಖಂಡ ಗಿರಿಧರ್ ಕೊಲೆಗೆ ಯತ್ನಿಸಿದ್ದು, ಈ ಪ್ರಕರಣ ನರಸಿಂಹರಾಜ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು.
2009 ಅ.12ರಂದು ಆರ್‌ಎಸ್‌ಎಸ್ ನಾಯಕ ಹಾಗೂ ಮೈಸೂರಿನ ರಮೇಶ್ ಬುಕ್ ಸ್ಟಾಲ್ ಮಾಲೀಕ ಹರೀಶ್‌ನನ್ನು ಕೊಂದಿದ್ದ. ಈ ಪ್ರಕರಣ ಮಂಡಿ ಮೊಹಲ್ಲಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. ಅದೇ ವರ್ಷ ಜೂನ್ 9ರಂದು ಆರ್‌ಎಸ್‌ಎಸ್ ಹಾಗೂ ಬಿಜೆಪಿ ನಾಯಕರಾದ ಆನಂದ್ ಪೈ ಹಾಗೂ ರಮೇಶ್ ಮೇಲೆ ದಾಳಿ ನಡೆಸಿದ್ದ. ಈ ವೇಳೆ ತೀವ್ರವಾಗಿ ಗಾಯಗೊಂಡಿದ್ದ ರಮೇಶ್ ಮೃತಪಟ್ಟಿದ್ದರು. ಈ ಸಂಬಂಧ ಲಷ್ಕರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ರಾಜು ಕೊಲೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಮೈಸೂರು ಸಿಸಿಬಿ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ 10 ಹೆಚ್ಚು ಮಂದಿ ಆರೋಪಿಗಳನ್ನು ಬಂಧಿಸಿದ್ದರು.