Advertisement

ಕೈ ಪಾಳಯದಲ್ಲಿ  ‘ಟಾರ್ಗೆಟ್‌ 2018ಕ್ಕೆ ಆಂತರಿಕ ಸಮೀಕ್ಷೆ

03:45 AM Apr 21, 2017 | |

ಬೆಂಗಳೂರು: ಉಪ ಚುನಾವಣೆ ಫ‌ಲಿತಾಂಶದಿಂದ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿರುವ ಆಡಳಿತಾರೂಢ ಕಾಂಗ್ರೆಸ್‌ ಪಕ್ಷ ತೆರೆಯ ಮರೆಯಲ್ಲಿ ಬರುವ ವಿಧಾನಸಭಾ ಚುನಾವಣೆಗೆ ಸಿದ್ದತೆ ನಡೆಸಿದೆ. ಇದರ ಮೊದಲ ಹಂತವಾಗಿ ಅಭ್ಯರ್ಥಿಗಳನ್ನ ಆಯ್ಕೆ ಮಾಡುವ ಪ್ರಕ್ರಿಯೆಗೆ ಮುಂದಾಗಿದೆ. ಪಕ್ಷದ 124 ಹಾಲಿ ಶಾಸಕರೂ ಸೇರಿದಂತೆ ಯಾರಿಗೆ ಟಿಕೆಟ್‌ ನೀಡಿದರೆ ಪಕ್ಷ ಅಧಿಕಾರಕ್ಕೆ ಬರಲಿದೆ ಎನ್ನುವುದನ್ನು ಮನಗಾಣಲು ಸಮೀಕ್ಷೆಯ ಮೊರೆ ಹೋಗಿದೆ.

Advertisement

ಹಾಲಿ ಶಾಸಕರ ಕಾರ್ಯಕ್ಷಮತೆಯೂ ಸೇರಿದಂತೆಯೂ ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲಿಯೂ ಸೂಕ್ತ ಅಭ್ಯರ್ಥಿಯ ಆಯ್ಕೆಗೆ ಮತದಾರರು, ಪಕ್ಷದ ಮುಖಂಡರು, ಜಿಲ್ಲಾ ಹಾಗೂ ತಾಲೂಕು ಘಟಕದ ಅಧ್ಯಕ್ಷರು, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಿಂದ ಮಾಹಿತಿ ಪಡೆದು ಅಭ್ಯರ್ಥಿ ಆಯ್ಕೆಗೆ ಕಠಿಣ ಮಾನದಂಡಗಳನ್ನು ಅನುಸರಿಸಲು ತೀರ್ಮಾನಿಸಿದೆ.

ಅಭ್ಯರ್ಥಿ ಆಯ್ಕೆಗೆ ಅನುಸರಿಸಲಾಗುತ್ತಿರುವ ಮಾನದಂಡಗಳ ಪ್ರಕಾರ ಉತ್ತರ ಕಾರ್ಯಕ್ಷಮತೆ ಹೊಂದಿದ, ಕ್ಷೇತ್ರದಲ್ಲಿ ಮತದಾರರ ಜೊತೆ ಒಳ್ಳೆಯ ಬಾಂಧವ್ಯ ಹೊಂದಿದ, ಸರ್ಕಾರದ ಯೋಜನೆಗಳನ್ನು ಅನುಷ್ಠಾನಗೊಳಿಸಿ ಜನರ ಪ್ರೀತಿಗೆ ಪಾತ್ರರಾದ, ಯಾವುದೇ ವಿವಾದಗಳು ಭ್ರಷ್ಟಾಚಾರ ಆರೋಪಗಳನ್ನು ಹೊಂದಿರದ ಶಾಸಕರಿಗೆ ಟಿಕೆಟ್‌ ಸಿಗುವುದು ಬಹುತೇಕ ಖಚಿತ ಎಂದು ಹೇಳಲಾಗಿದೆ.

ಶಾಸಕರಾದ ನಂತರ ಪಕ್ಷ ಹಾಗೂ ಮತದಾರರಿಂದ ಅಂತರ ಕಾಯ್ದುಕೊಂಡು ರಾಜಕೀಯ ಚಟುವಟಿಕೆಗಳಲ್ಲಿಯೇ ನಿರತರಾಗಿರುವ ಶಾಸಕರು ಮತ್ತು ಪಕ್ಷಾಂತರ ಮಾಡುವ ಯೋಚನೆಯಲ್ಲಿರುವವರಿಗೆ ಟಿಕೆಟ್‌ ಅನುಮಾನ ಎಂದು ಹೇಳಲಾಗುತ್ತಿದೆ.

ಕಾಂಗ್ರೆಸ್‌ ಶಾಸಕರು ಇಲ್ಲದ ಕ್ಷೇತ್ರಗಳಲ್ಲಿ  ಹಿಂದಿನ ಚುನಾವಣೆಯಲ್ಲಿ ಕಡಿಮೆ ಮತಗಳ ಅಂತರದಿಂದ ಪರಾಭವಗೊಂಡ ಅಭ್ಯರ್ಥಿಗಳು ಹಾಗೂ ಬೇರೆ ಪಕ್ಷಗಳಿಂದ ಕಾಂಗ್ರೆಸ್‌ಗೆ ಬರಲು ಸಿದ್ದವಿರುವ ಮತ್ತು ಚುನಾವಣೆಯಲ್ಲಿ ಗೆಲ್ಲುವ ಸಾಮರ್ಥ್ಯ ಹೊಂದಿರುವ ಅಭ್ಯರ್ಥಿಗಳ ಬಗ್ಗೆಯೂ ಸಮೀಕ್ಷೆಯಲ್ಲಿ ಮಾಹಿತಿಯನ್ನು ಸಂಗ್ರಹ ಮಾಡಲಾಗುತ್ತದೆ.

Advertisement

ಉಪ ಚುನಾವಣೆ ಫ‌ಲಿತಾಂಶದಿಂದ ಸಂತಸಗೊಂಡಿರುವ ಹೈ ಕಮಾಂಡ್‌ 2018 ರ ವಿಧಾನಸಭಾ ಚುನಾವಣೆಗೆ ಸಿದ್ದತೆ ಮಾಡಿಕೊಳ್ಳುವಂತೆ ಪಕ್ಷದ ಹೈ ಕಮಾಂಡ್‌ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್‌ಗೆ ಸೂಚನೆ ನೀಡಿದ ಬೆನ್ನ ಹಿಂದೆಯೇ ಅಭ್ಯರ್ಥಿಗಳ ಆಯ್ಕೆಗೆ ಮೊದಲು ಸಮೀಕ್ಷೆ ನಡೆಸುವ ಕಾರ್ಯಕ್ಕೆ ಕೈ ಪಾಳಯ ಮುಂದಾಗಿದ್ದು, ಸಮೀಕ್ಷೆಯಲ್ಲಿ ಅನುಸರಿಸಬೇಕಾದ ಪ್ರಮುಖ ಅಂಶಗಳನ್ನು ಅಂತಿಮಗೊಳಿಸಲಾಗುತ್ತಿದೆ.

ಕಳೆದ ಬಾರಿ ಸ್ಪರ್ಧಿಸಿ ಸೋತಿರುವ ಅಭ್ಯರ್ಥಿಗಳಿಗೂ ಇದೇ ಮಾನದಂಡ ಅನುಸರಿಲಾಗುತ್ತದೆ. ಸೋತ ನಂತರ ಪಕ್ಷದ ಚುಟುವಟಿಕೆಗಳಲ್ಲಿ  ತೊಡಗಿಸಿಕೊಂಡಿರುವುದು. ಕಾರ್ಯಕರ್ತರು ಹಾಗೂ ಕ್ಷೇತ್ರದ ಜನತೆಯೊಂದಿಗೆ ಸಂಪರ್ಕದಲ್ಲಿದ್ದಾರಾ ? ಸೋತಿದ್ದರೂ ಸರ್ಕಾರದ ಯೋಜನೆಗಳ ಅನುಷ್ಠಾನ ಮಾಡಿರುವ ಕುರಿತಾಗಿಯೂ ತಿಳಿಯಲಾಗುತ್ತದೆ. ಕ್ಷೇತ್ರ ಮತ್ತು ಪಕ್ಷದಲ್ಲಿ ಅವರ ಸಕ್ರೀಯತೆಯನ್ನು ಪರಿಗಣಿಸಲಾಗುತ್ತದೆ.

ಹಾಲಿ ಶಾಸಕರು ಮತ್ತು ಸೋತ ಅಭ್ಯರ್ಥಿಗಳ ಕ್ಷೇತ್ರಗಳಲ್ಲಿ ಪಕ್ಷ ಕಟ್ಟುವ ಕೆಲಸದಲ್ಲಿ ತೊಡಗಿರುವ ಹೊಸ ಮುಖ ಪರಿಚಯಿಸುವ ಕುರಿತಂತೆಯೂ ಸಮೀಕ್ಷೆಯಲ್ಲಿ ಪರಿಗಣಿಸ‌ಲಾಗುತ್ತದೆ. ಹಾಲಿ ಶಾಸಕರ ಹೊರತಾಗಿಯೂ ಕ್ಷೇತ್ರದಲ್ಲಿ ಕಾರ್ಯಕರ್ತರು ಮತ್ತು ಸಾಮಾನ್ಯ ಜನರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದು, ಮುಂದಿನ ಚುನಾವಣೆಗೆ ಸ್ಪರ್ಧಿಸುವ ಇಚ್ಚೆ ಹೊಂದಿರುವ ಕಾಂಗ್ರೆಸ್‌ ಕಾರ್ಯಕರ್ತರು ಗೆಲ್ಲುವ ಸೂಚನೆ ಬಂದರೆ, ಅಂತವರಿಗೂ ಟಿಕೆಟ್‌ ಕೊಡಬೇಕೆಂಬ ಆಲೋಚನೆ ಪಕ್ಷಕ್ಕಿದೆ ಎಂದು ಕಾಂಗ್ರೆಸ್‌ನ ಉನ್ನತ ಮೂಲಗಳು ತಿಳಿಸಿವೆ.

ಕಳೆದ ವಾರ ಬೆಂಗಳೂರಿಗೆ ಆಗಮಿಸಿ ಚುನಾವಣೆ ಸಿದ್ದತೆ ಕುರಿತು ಹಿರಿಯ ಮುಖಂಡರೊಂದಿಗೆ ಸುದೀರ್ಘ‌ ಚರ್ಚೆ ನಡೆಸಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್‌ ಸಿಂಗ್‌, ಆದಷ್ಟು ಬೇಗ ಸಮೀಕ್ಷೆ ಕೈಗೊಂಡು ಗೆಲ್ಲುವ ಅಭ್ಯರ್ಥಿಗಳ ಪಟ್ಟಿ ಸಿದ್ದಪಡಿಸಿಕೊಳ್ಳುವಂತೆ ರಾಜ್ಯ ನಾಯಕರಿಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ಟಾರ್ಗೆಟ್‌ 2018 
ರಾಜ್ಯದ 224 ಕ್ಷೇತ್ರಗಳಲ್ಲಿ  ಏಕ ಕಾಲಕ್ಕೆ ಸಮೀಕ್ಷೆ ನಡೆಸಲು ತೀರ್ಮಾನಿಸಲಾಗಿದ್ದು, ಕ್ಷೇತ್ರಗಳಲ್ಲಿ  ಮುಂದಿನ ಚುನಾವಣೆಯಲ್ಲಿ ಗೆಲ್ಲುವ ಅಭ್ಯರ್ಥಿ ಯಾರು ಎಂದು ತಿಳಿಯುವುದೇ ಈ ಸಮೀಕ್ಷೆಯ ಮುಖ್ಯ ಉದ್ದೇಶ. 2018ರ ವಿಧಾನ ಸಭೆ ಚುನಾವಣೆಯಲ್ಲಿ ಬಿಜೆಪಿಯ ಮಿಷನ್‌ 150 ಗೆ ಪರ್ಯಾಯವಾಗಿ, ‘ಟಾರ್ಗೆಟ್‌ 2018’ ಯೋಜನೆ ರೂಪಿಸುತ್ತಿರುವ ಕಾಂಗ್ರೆಸ್‌ ಮುಂದಿನ ಚುನಾವಣೆಯಲ್ಲಿಯೂ ಕನಿಷ್ಠ 125 ಸ್ಥಾನಗಳನ್ನು ಗೆಲ್ಲಲೇಬೇಕೆಂದು ನಿರ್ಧರಿಸಿದೆ.

ಅಭ್ಯರ್ಥಿ ಆಯ್ಕೆಗೆ ಮಾನದಂಡಗಳು
ಕ್ಷೇತ್ರದ ಜನತೆಯೊಂದಿಗಿನ ಒಡನಾಟ
ಸರ್ಕಾರಿ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ಶ್ರಮ
ಪಕ್ಷದ ಕಾರ್ಯಕರ್ತರು ಮುಖಂಡರ ಜೊತೆಗಿನ ಸಂಬಂಧ
ಪಕ್ಷ ವಿರೋಧಿ ಚಟುವಟಿಕೆ ಮಾಡಿರುವ ಬಗ್ಗೆ ಮಾಹಿತಿ.
ಕ್ಷೇತ್ರದ ಅಭಿವೃದ್ಧಿಗೆ ಶಾಸಕರ ಕೊಡುಗೆ
ಸ್ಥಳೀಯ ಚುನಾವಣೆಯಲ್ಲಿ ಶಾಸಕರು, ಆಕಾಂಕ್ಷಿಗಳ ಸಾಧನೆ
ಪಕ್ಷ ಸಂಘಟನೆಯಲ್ಲಿ ಅವರ ಕೊಡುಗೆ
ಗೆಲ್ಲುವ ಸಾಮರ್ಥಯ ಇದಿಯಾ ?

– ಶಂಕರ ಪಾಗೋಜಿ.

Advertisement

Udayavani is now on Telegram. Click here to join our channel and stay updated with the latest news.

Next