Advertisement

“ಕೈ’ನಾಯಕರ ವಿರುದ್ಧ ಉದ್ದೇಶ ಪೂರ್ವಕ ಟಾರ್ಗೆಟ್‌

11:32 PM Oct 26, 2019 | Team Udayavani |

ಬೆಂಗಳೂರು: ಕೇಂದ್ರ ಸರ್ಕಾರ ಉದ್ದೇಶ ಪೂರ್ವಕವಾಗಿ ಕಾಂಗ್ರೆಸ್‌ ನಾಯಕರನ್ನು ಕಳೆದ ಎರಡು, ಮೂರು ವರ್ಷದಿಂದ ಟಾರ್ಗೆಟ್‌ ಮಾಡುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಆರೋಪಿಸಿದರು. ದೆಹಲಿಯಿಂದ ಪಕ್ಷದ ಕಚೇರಿಗೆ ಆಗಮಿಸಿದ ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಅವರನ್ನು ಪಕ್ಷದ ಕಚೇರಿಯಲ್ಲಿ ಶಾಲು ಹೊದಿಸಿ ಸನ್ಮಾನಿಸಿ ಅವರು ಮಾತನಾಡಿದರು.

Advertisement

ಕೇಂದ್ರದ ಬಿಜೆಪಿ ನಾಯಕರು ಉದ್ದೇಶ ಪೂರ್ವಕವಾಗಿ ಕಾಂಗ್ರೆಸ್‌ ನಾಯಕರನ್ನು ಗುರಿಯಾಗಿಟ್ಟು ಕೊಂಡು ದಾಳಿ ಮಾಡಿಸುತ್ತಿದ್ದಾರೆ. ಗುಜರಾತ್‌ ರಾಜ್ಯಸಭೆ ಚುನಾವಣೆ ಸಂದರ್ಭದಲ್ಲಿ ಅಲ್ಲಿನ ಶಾಸಕರಿಗೆ ರಕ್ಷಣೆ ನೀಡಿದ ಕಾರಣಕ್ಕೆ ಡಿ.ಕೆ.ಶಿವಕುಮಾರ್‌ಗೆ ಕಿರುಕುಳ ನೀಡಲು ಪ್ರಾರಂಭಿಸಿದರು. ಐಟಿ, ಇ.ಡಿ ಇಲಾಖೆಗಳು ಕೇಂದ್ರ ಸರ್ಕಾರದ ಕೈಗೊಂಬೆಗಳಾಗಿ ಕಾರ್ಯ ನಿರ್ವಹಿಸುತ್ತಿವೆ ಎಂದು ಆರೋಪಿಸಿದರು.

ಡಿ.ಕೆ.ಶಿವಕುಮಾರ್‌ ಐಟಿ, ಇ.ಡಿ ತನಿಖೆಗೆ ಸಹಕರಿಸಿದ್ದರು. ಆದರೆ, ಅವರನ್ನು ಬಂಧಿಸುವ ಸಂಚನ್ನು ಬಿಜೆಪಿ ಹೈಕಮಾಂಡ್‌ ಮಾಡಿದೆ. ಅವರ ತಾಯಿ, ಪತ್ನಿ, ಸ್ನೇಹಿತರನ್ನು ಕರೆಸಿ ವಿಚಾ ರಣೆ ನಡೆಸಿ, ಮಾನಸಿಕ ಕಿರುಕುಳ ನೀಡಿದರು. ಅವರನ್ನು ಬಂಧಿಸಬಾರದಿತ್ತು, ಆದರೂ ಜೈಲಿಗೆ ಹಾಕಲಾಯಿತು ಎಂದು ದೂರಿದರು.  ಡಿಕೆಶಿ ಅವರು ಜೈಲಿನಿಂದ ನೇರವಾಗಿ ಪಕ್ಷದ ಕಚೇರಿಗೆ ಆಗಮಿಸಿದ್ದಕ್ಕೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ನಾವೇ ಅವರಿಗೆ ಪಕ್ಷದ ಕಚೇರಿಗೆ ಬರುವಂತೆ ಮನವಿ ಮಾಡಿದ್ದೆವು. ಬಿಜೆಪಿ ಅವರ ವಿರುದ್ಧ ಮಾಡಿರುವ ಹುನ್ನಾರ ವಿರೋಧಿಸಿ ಜನರು ಸ್ವಯಂ ಪ್ರೇರಿತರಾಗಿ ಆಗಮಿಸಿದ್ದಾರೆ. ಕೀಳು ಮಟ್ಟದ ರಾಜಕಾರಣ ಸಹಿಸಲು ಜನರಿಗೆ ಸಾಧ್ಯವಾಗುತ್ತಿಲ್ಲ. ಆದ್ದರಿಂದ ಜನರು ಅವರ ಪರವಾಗಿ ಬೀದಿಗೆ ಇಳಿದಿದ್ದಾರೆ ಎಂದು ಹೇಳಿದರು.

ಭವ್ಯ ಸ್ವಾಗತ ಸಿಕ್ಕಿದೆ: ಜನಾಭಿಪ್ರಾಯದ ಮೂಲಕ ಭವ್ಯ ಸ್ವಾಗತ ಸಿಕ್ಕಿದೆ. ಇಂತಹ ದಾಳಿ ಯಿಂದ ನಮ್ಮವರ ಶಕ್ತಿ, ಉತ್ಸಾಹ, ಹೋರಾ ಟದ ಮನೋಭಾವ ಹೆಚ್ಚಾಗಲಿದೆ. ನಾವು ಕಾಂಗ್ರೆಸ್‌ನವರು ಒಟ್ಟಾಗಿ ಅವರ ಜತೆ ಇದ್ದೇವೆ. ಇದು ಜನರ ಭಾವನೆಯ ಬೆಂಬಲ. ಇದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಅವರು ಮುಖ್ಯಮಂತ್ರಿಯಾಗಿದ್ದರೂ ಇಂತಹ ಸ್ವಾಗತ ಸಿಗುತ್ತಿತ್ತೋ ಇಲ್ಲವೋ ಗೊತ್ತಿಲ್ಲ. ಇವರ ಹೋರಾಟದಲ್ಲಿ ನಾವೆಲ್ಲಾ ಒಂದಾಗಿ ಇರುತ್ತೇವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಚಿವ ಕೆ.ಜೆ.ಜಾರ್ಜ್‌, ಸಂಸದ ಡಿ.ಕೆ.ಸುರೇಶ್‌, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್‌ ಖಂಡ್ರೆ ಸೇರಿ ಪ್ರಮುಖ ನಾಯಕರು ಹಾಜರಿದ್ದರು.

Advertisement

ಕಾರ್ಯಕರ್ತರ ಗದ್ದಲ: ಕೆಪಿಸಿಸಿ ಕಚೇರಿಗೆ ಡಿ.ಕೆ.ಶಿವಕುಮಾರ್‌ ಆಗಮಿಸುತ್ತಿದ್ದಂತೆ ಪಕ್ಷದ ಕಚೇರಿಯಲ್ಲಿ ಕಾರ್ಯಕರ್ತರ ನೂಕು ನುಗ್ಗಲು ಉಂಟಾಯಿತು. ಕಾರ್ಯಕರ್ತರನ್ನು ಹೊರಗೆ ಕಳುಹಿಸಲು ಮಾಧ್ಯಮ ಘಟಕದ ವರು ಹರಸಾಹಸ ಮಾಡಬೇಕಾಯಿತು. ಸುಮಾರು 15 ನಿಮಿಷಗಳ ಕಾಲ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು. ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್‌ ಖಂಡ್ರೆ ಹಾಗೂ ಡಿ.ಕೆ.ಶಿವಕುಮಾರ್‌ ಗದ್ದಲ ನಿಲ್ಲಿಸುವಂತೆ ಮನವಿ ಮಾಡಿದರು.

ತಿರುಗಿ ಬಿದ್ದ ಚಾಮುಂಡಿ..: ಪತ್ರಿಕಾಗೋಷ್ಠಿ ನಡೆಯುವ ಸಂದರ್ಭದಲ್ಲಿ ಮಾಧ್ಯಮದವರಿಗೆ ಮೀಸಲಿಟ್ಟ ಕುರ್ಚಿ ತೆರವು ಮಾಡುವಂತೆ ಸೂಚಿಸಿದಾಗ ಪಕ್ಷದ ಮುಖಂಡರ ವಿರುದ್ಧವೇ ಮೈಸೂರಿನಿಂದ ಆಗಮಿಸಿದ್ದ ಚಾಮುಂಡೆಮ್ಮ ಎಂಬ ಮಹಿಳೆ, “ನಾವಿದ್ದರೆ ನೀವೆಲ್ಲಾ.. ನಾನು ಸ್ಥಳ ಬಿಟ್ಟು ಕದಲುವುದಿಲ್ಲ. ನನಗೆ ಎಲ್ಲವೂ ಗೊತ್ತು. ನಾನು ಎಲ್ಲವನ್ನು ಬಯಲು ಮಾಡುತ್ತೇನೆ’ ಎಂದು ನಾಯಕರ ವಿರುದ್ಧವೇ ತಿರುಗಿ ಬಿದ್ದಾಗ ಕಾಂಗ್ರೆಸ್‌ ನಾಯಕರು ತಬ್ಬಿಬ್ಟಾದ ಘಟನೆ ನಡೆಯಿತು. ಕಡೆಗೆ, ಅವರಿಗೆ ಮುಂದಿನ ಸಾಲಿನಲ್ಲಿ ಪ್ರತ್ಯೇಕ ಕುರ್ಚಿ ಹಾಕಿ, ಕುಳಿತುಕೊಳ್ಳಲು ಅವಕಾಶ ಕೊಡಲಾಯಿತು.

ಎಚ್‌ಡಿಕೆ ಸ್ವಾಗತ: ದೆಹಲಿಯಿಂದ ಆಗಮಿಸಿದ ಡಿ.ಕೆ.ಶಿವಕುಮಾರ್‌ ಅವರನ್ನು ವಿಮಾನ ನಿಲ್ದಾಣದಲ್ಲಿಯೇ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಸ್ವಾಗತಿಸಿದರು.

ಡಿಕೆಸುಗೆ ಮೆಚ್ಚುಗೆ: ಡಿ.ಕೆ.ಶಿವಕುಮಾರ್‌ ಅವರು ಜೈಲು ಸೇರಿದಾಗ ಅವರೊಂದಿಗೆ ನಿರಂತರ ಜೊತೆಯಾಗಿದ್ದು, ಅವರಿಗೆ ಬೆನ್ನೆಲುಬಾಗಿ ಕೆಲಸ ಮಾಡಿದ ಸಂಸದ ಡಿ.ಕೆ.ಸುರೇಶ್‌ ಅವರ ಕಾರ್ಯದ ಬಗ್ಗೆ ದಿನೇಶ್‌ ಮೆಚ್ಚುಗೆ ವ್ಯಕ್ತಪಡಿಸಿದರು. ಡಿಕೆಶಿ ಬೆನ್ನಿಗೆ ಇನ್ನೊಂದು ಬಂಡೆಯಾಗಿ ಡಿ.ಕೆ. ಸುರೇಶ್‌ ನಿಂತರು. ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿ ಕೂಡ ಇವರ ಬೆಂಬಲಕ್ಕೆ ನಿಂತು ಧೈರ್ಯ ಹೇಳಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next