Advertisement
444 ರನ್ ಕಠಿನ ಗುರಿ444 ರನ್ನುಗಳ ಕಠಿನ ಗುರಿ ಪಡೆದ ಭಾರತಕ್ಕೆ ನಾಯಕ ರೋಹಿತ್ ಶರ್ಮ-ಶುಭಮನ್ ಗಿಲ್ ಬಿರುಸಿನ ಆರಂಭವನ್ನೇನೋ ಒದಗಿಸಿದರು. ಆದರೆ ಗಿಲ್ ಎಡವಿದರು. ಬೋಲ್ಯಾಂಡ್ ಎಸೆತವನ್ನು ಡಿಫೆನ್ಸ್ ಮಾಡುವಾಗ ಎಜ್ ಆದ ಚೆಂಡನ್ನು ಗಲ್ಲಿ ವಿಭಾಗದಲ್ಲಿದ್ದ ಗ್ರೀನ್ ಕ್ಯಾಚ್ ಪಡೆದರು. ಆದರೆ ಅವರ ಕೈ ನೆಲಕ್ಕೆ ತಾಗಿದ್ದ ಬಗ್ಗೆ ಅನುಮಾನವಿತ್ತು. ಗಿಲ್ ಗಳಿಕೆ ಕೇವಲ 18 ರನ್ (19 ಎಸೆತ, 2 ಬೌಂಡರಿ). ಅಲ್ಲಿಗೆ ಟೀ ವಿರಾಮ ತೆಗೆದುಕೊಳ್ಳಲಾಯಿತು. ಭಾರತ ಒಂದಕ್ಕೆ 41 ರನ್ ಮಾಡಿತ್ತು.
3ನೇ ದಿನದಾಟದ ಅಂತ್ಯಕ್ಕೆ 4 ವಿಕೆಟಿಗೆ 123 ರನ್ ಗಳಿಸಿದ್ದ ಆಸ್ಟ್ರೇಲಿಯ ಶನಿವಾರ ಆಟ ಮುಂದುವರಿಸಿ ಲಂಚ್ ವೇಳೆ 6ಕ್ಕೆ 201 ರನ್ ಮಾಡಿತು. ಆದರೆ ಮೊದಲ ಅವಧಿಯ 26 ಓವರ್‌ಗಳ ಬ್ಯಾಟಿಂಗ್ ಆಸೀಸ್‌ಗೆ ಸುಲಭದ್ದೇನೂ ಆಗಿರಲಿಲ್ಲ. ಕೇವಲ 78 ರನ್ ಮಾಡಿದ ಕಾಂಗರೂ ಪಡೆ, 3ನೇ ದಿನದ ನಾಟೌಟ್ ಬ್ಯಾಟರ್‌ಗಳಿಬ್ಬರನ್ನೂ ಕಳೆದುಕೊಂಡಿತ್ತು. ಆದರೆ ಆತಂಕವೇನೂ ಇರಲಿಲ್ಲ. ಆಗಲೇ ಲೀಡ್ 374ಕ್ಕೆ ಏರಿತ್ತು.
Related Articles
Advertisement
ಕ್ಯಾಮರಾನ್ ಗ್ರೀನ್ ಮತ್ತು ಅಲೆಕ್ಸ್ ಕ್ಯಾರಿ ಸೇರಿಕೊಂಡು 16 ಓವರ್ ಜತೆಯಾಟ ನಿಭಾಯಿಸಿದರು. ಸ್ಕೋರ್ 167ಕ್ಕೆ ಏರಿತು. ಆಗ ರವೀಂದ್ರ ಜಡೇಜ ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಯಶಸ್ವಿಯಾದರು. 95 ಎಸೆತಗಳಿಂದ 25 ರನ್ ಮಾಡಿದ ಕ್ಯಾಮರಾನ್ ಗ್ರೀನ್ ಕ್ಲೀನ್‌ಬೌಲ್ಡ್ ಆದರು (4 ಬೌಂಡರಿ).
ಕೀಪರ್ ಅಲೆಕ್ಸ್ ಕ್ಯಾರಿ ಬಿರುಸಿನ ಆಟವಾಡುತ್ತ ಹೋದರು. ಲಂಚ್ ವೇಳೆ ಅವರು 41 ರನ್ ಮಾಡಿ ಬ್ಯಾಟಿಂಗ್ ಕಾಯ್ದುಕೊಂಡಿದ್ದರು. ಜತೆಗಾರ ಮಿಚೆಲ್ ಸ್ಟಾರ್ಕ್ 11 ರನ್ ಮಾಡಿದ್ದರು. ಕೈಬೆರಳಿಗೆ ಏಟು ಮಾಡಿಕೊಂಡಿದ್ದ ಅಜಿಂಕ್ಯ ರಹಾನೆ ಮುನ್ನೆಚ್ಚರಿಕೆಯ ಕ್ರಮವಾಗಿ ಕ್ಷೇತ್ರರಕ್ಷಣೆಗೆ ಇಳಿದಿರಲಿಲ್ಲ.
ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 2 ರನ್ನಿನಿಂದ ಅರ್ಧ ಶತಕ ತಪ್ಪಿಸಿಕೊಂಡಿದ್ದ ಅಲೆಕ್ಸ್ ಕ್ಯಾರಿ, ದ್ವಿತೀಯ ಸರದಿಯಲ್ಲಿ ಇದನ್ನು ಪೂರ್ತಿಗೊಳಿಸಿದರು. ಲಂಚ್ ನಂತರವೂ ಇವರ ಬಿರುಸಿನ ಆಟ ಮುಂದುವರಿಯಿತು. ಇವರಿಗೆ ಮಿಚೆಲ್ ಸ್ಟಾರ್ಕ್ ಉತ್ತಮ ಬೆಂಬಲ ನೀಡಿದರು. 7ನೇ ವಿಕೆಟಿಗೆ 120 ಎಸೆತಗಳಿಂದ 93 ರನ್ ಒಟ್ಟುಗೂಡಿತು. ಆಸೀಸ್ ಲೀಡ್ 400ರ ಗಡಿ ದಾಟಿ ಬೆಳೆಯಿತು.
ಸ್ಟಾರ್ಕ್ 41 ರನ್ ಕೊಡುಗೆ ಸಲ್ಲಿಸಿದರು. 57 ಎಸೆತಗಳ ಈ ಸೊಗಸಾದ ಇನ್ನಿಂಗ್ಸ್‌ನಲ್ಲಿ 7 ಬೌಂಡರಿ ಒಳಗೊಂಡಿತ್ತು. ಸ್ಟಾರ್ಕ್ ವಿಕೆಟ್ ಮೊಹಮ್ಮದ್ ಶಮಿ ಪಾಲಾಯಿತು. ಆಗಷ್ಟೇ ಭಾರತ ಹೊಸ ಚೆಂಡನ್ನು ಕೈಗೆತ್ತಿಕೊಂಡಿತ್ತು. ನಾಯಕ ಪ್ಯಾಟ್ ಕಮಿನ್ಸ್ (5) ಕೂಡ ಶಮಿ ಮೋಡಿಗೆ ಸಿಲುಕಿದರು. ತಮ್ಮ ವಿಕೆಟ್ ಬಿದ್ದೊಡನೆ ಇನ್ನಿಂಗ್ಸ್ ಡಿಕ್ಲೇರ್ ಮಾಡಿದರು. ಕ್ಯಾರಿ 66 ರನ್ ಮಾಡಿ ಅಜೇಯರಾಗಿ ಉಳಿದರು (105 ಎಸೆತ, 8 ಬೌಂಡರಿ).