Advertisement

ಯಾದಗಿರಿ:ಕಾಮಗಾರಿ ಆರಂಭಿಸದ ಅಧಿಕಾರಿಗಳಿಗೆ ತರಾಟೆ

07:07 PM Apr 01, 2021 | Team Udayavani |

ಯಾದಗಿರಿ: ಜಿಲ್ಲೆಯಲ್ಲಿ ಕಾಮಗಾರಿ ನಡೆಸಿ ಮುಕ್ತಾಯಗೊಳಿಸಿರುವ ಅನುಷ್ಠಾನ ಏಜೆನ್ಸಿಗಳು ಕಾಮಗಾರಿ ಮುಗಿದ ತಕ್ಷಣ ಸಾಫ್ಟ್‌ವೇರ್‌ನಲ್ಲಿ ಅಪ್‌
ಡೇಟ್‌ ಮಾಡಬೇಕು. ಇತ್ತೀಚಿನ ಸಾಲಿನ ನೂರಾರು ಕಾಮಗಾರಿಗಳನ್ನು ಇನ್ನೂ ಆರಂಭಿಸದಿರುವುದಕ್ಕೆ ವಿವಿಧ ಏಜೆನ್ಸಿಯ ಅಧಿಕಾರಿಗಳನ್ನು ಸರ್ಕಾರದ
ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ ತರಾಟೆಗೆ ತೆಗೆದುಕೊಂಡರು.

Advertisement

ಇಲ್ಲಿನ ಜಿಪಂ ಸಭಾಂಗಣದಲ್ಲಿ ಬುಧವಾರ ಕೋವಿಡ್‌-19 ಹಾಗೂ ಇನ್ನಿತರ ವಿಷಯಗಳ ಕುರಿತು ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಕಾರ್ಯದರ್ಶಿ ಡಾ| ಎನ್‌.ವಿ.ಪ್ರಸಾದ ಅವರು, ಕಲ್ಯಾಣ ಕರ್ನಾಟಕ
ಪ್ರದೇಶಾಭಿವೃದ್ಧಿ ಮಂಡಳಿ ಅನುದಾನದಲ್ಲಿ ವಿವಿಧ ಸಾಲಿನಲ್ಲಿ ಕೈಗೊಂಡು ಮುಗಿಸಿರುವ ಕಾಮಗಾರಿಗಳ ವಿವರಗಳನ್ನು ಮಂಡಳಿಯ ಸಾಫ್ಟ್‌ವೇರ್‌ನಲ್ಲಿ
ಅಪ್‌ಡೇಟ್‌ ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸುತ್ತಿದ್ದಂತೆ, ಯಾದಗಿರಿ ಜಿಲ್ಲೆಯಾಗಿ 10 ವರ್ಷ ಪೂರೈಸಿದ್ದರೂ, ಜಿಲ್ಲೆ ಇನ್ನು ಅಭಿವೃದ್ಧಿ ಕಂಡಿಲ್ಲ.
ಕಾರ್ಯನಿರ್ವಹಿಸುತ್ತಿರುವ ಅ ಧಿಕಾರಿಗಳು ಹೆಚ್ಚಿನವರು ಇದೇ ಜಿಲ್ಲೆಯವರಾಗಿದ್ದಾರೆ. ಸ್ವಂತ ಜಿಲ್ಲೆ ಎಂಬ ಅಭಿಮಾನದಿಂದ ಇಚ್ಛಾಶಕ್ತಿ ಪ್ರದರ್ಶಿಸಿ ಅಭಿವೃದ್ಧಿಗೆ
ಶ್ರಮಿಸಬೇಕು ಎಂದು ಕಿವಿಮಾತು ಹೇಳಿದರು.

ಇದಕ್ಕು ಮೊದಲು ಕೋವಿಡ್‌ ಸೋಂಕು ನಿಯಂತ್ರಣ ನಿಟ್ಟಿನಲ್ಲಿ ಸರ್ಕಾರದ ನಿರ್ದೇಶನದಂತೆ ಸೂಚಿಸಲಾಗಿರುವ ವಿವಿಧ ವರ್ಗದ ಎಲ್ಲಾ ಅರ್ಹರು ಕೋವಿಡ್‌ ಲಸಿಕೆ ಹಾಕಿಸಿಕೊಳ್ಳಬೇಕು. ಈಗಾಗಲೇ ಮೊದಲನೇ ಲಸಿಕೆ ಪಡೆದಿರುವ ಮುಂಚೂಣಿ ಕಾರ್ಯಕರ್ತರಾದ ವೈದ್ಯರು, ನರ್ಸ್‌, ಪೊಲೀಸರು ಮುಂತಾದವರು 2ನೇ ಲಸಿಕೆಯನ್ನೂ ಕಡ್ಡಾಯವಾಗಿ ಹಾಕಿಸಿಕೊಳ್ಳಬೇಕು ಎಂದು ಹೇಳಿದರು.

ಜಿಲ್ಲಾಧಿಕಾರಿ ಡಾ| ರಾಗಪ್ರಿಯಾ ಆರ್‌ ಮಾತನಾಡಿ, ಜಿಲ್ಲೆಯಲ್ಲಿ ಇದುವರೆಗೆ 10,803 ಕೋವಿಡ್‌ ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿವೆ. ಪ್ರಸಕ್ತ ಪ್ರತಿದಿನ 1,150 ಪ್ರಕರಣಗಳ ಪರೀಕ್ಷೆ ನಡೆಸುತ್ತಿದ್ದು, ಇನ್ನು ಮುಂದೆ 1500 ಪ್ರಕರಣಗಳ ಪರೀಕ್ಷೆ ನಡೆಸಲಾಗುವುದು ಎಂದು ಮಾಹಿತಿ ನೀಡಿದರು. ದಿನವೊಂದಕ್ಕೆ ಸರಾಸರಿ 5 ಸಾವಿರ ಕೋವಿಡ್‌ ಲಸಿಕೆ ಹಾಕುತ್ತಿರುವುದಕ್ಕೆ ಮೆಚ್ಚುಗೆಯ ಮಾತನಾಡಿದ ಮುಖ್ಯ ಕಾರ್ಯದರ್ಶಿ, ಜಿಲ್ಲೆಯಲ್ಲಿ ಕೋವಿಡ್‌ ನಿಯಂತ್ರಣಕ್ಕೆ ಜಿಲ್ಲಾಡಳಿತ ಕೈಗೊಂಡಿರುವ ಕ್ರಮಗಳ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು.

ಪ್ರಸಕ್ತ ಬೇಸಿಗೆಯಲ್ಲಿ ಜಿಲ್ಲೆಯಲ್ಲಿ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು. ಎಲ್ಲಿ ನೀರಿನ ಸಮಸ್ಯೆ ಇದೆಯೋ ಅಂತಹ ಪ್ರದೇಶಗಳಿಗೆ ಟ್ಯಾಂಕರ್‌
ಮೂಲಕ ನೀರು ಪೂರೈಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆ ಕುರಿತು ಜಿಲ್ಲಾ ಧಿಕಾರಿ
ಡಾ| ರಾಗಪ್ರಿಯಾ ಮತ್ತು ಸಿಇಒ ಶಿಲ್ಪಾ ಶರ್ಮಾ ವಿವರಿಸಿದರು.

Advertisement

ಇನ್ನು ವಿವಿಧ ಇಲಾಖೆಗಳ ಖಾಲಿ ಹುದ್ದೆಗಳಿಗೆ ಆಯ್ಕೆಯಾಗಿರುವ ಜಿಲ್ಲೆಯ ಒಟ್ಟು 51 ಅಭ್ಯರ್ಥಿಗಳಿಗೆ ಸಿಂಧುತ್ವ ಪ್ರಮಾಣ ಪತ್ರ ನೀಡುವುದು ಬಾಕಿ ಇದ್ದು,
ಶೀಘ್ರ ನೀಡಲು ಕ್ರಮವಹಿಸಬೇಕು ಎಂದು ಸೂಚಿಸಿದ ಅವರು, ಸಿಂಧುತ್ವ ಪ್ರಮಾಣ ಪತ್ರ ನೀಡುವ ಕುರಿತಂತೆ ಇರುವ ನಿಯಮಗಳನ್ನು ಸರಳೀಕರಿಸಬೇಕಾಗಿದೆ
ಎಂದು ಪ್ರತಿಪಾದಿಸಿದರು.

ಕಳೆದ ವರ್ಷ ಕೋವಿಡ್‌ ಸೋಂಕು ಇಡೀ ವರ್ಷ ಕಾಡಿದ್ದರಿಂದ ಅನುದಾನದ ಸಮಸ್ಯೆಯಾಗಿದ್ದು, 2021-22ನೇ ಸಾಲಿನಲ್ಲಿ ಯಾವುದೇ ಅನುದಾನದ
ಕೊರತೆಯಾಗುವುದಿಲ್ಲ. 2021-22ನೇ ಸಾಲಿಗೆ ಸಂಬಂಧಿಸಿದಂತೆ ಎಲ್ಲಾ ಕ್ರಿಯಾ ಯೋಜನೆಗಳನ್ನು ಬೇಗ ಸಿದ್ಧಪಡಿಸಿ ಮಂಜೂರಾತಿಗೆ ಕಳುಹಿಸಬೇಕು
ಎಂದು ಅ ಧಿಕಾರಿಗಳಿಗೆ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ ನಿರ್ದೇಶನ ನೀಡಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಭಗವಾನ್‌ ಸೋನಾವಣೆ ಮಾತನಾಡಿ, ದೋರನಹಳ್ಳಿಯಲ್ಲಿ ಇತ್ತೀಚೆಗೆ ನಡೆದ ಅಹಿತಕರ ಘಟನೆ ಬಿಟ್ಟರೆ, ಜಿಲ್ಲೆಯಲ್ಲಿ
ಕಾನೂನು-ಸುವ್ಯವಸ್ಥೆ ಶಾಂತಿಯುತವಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪ್ರಕಾಶ್‌ ಜಿ. ರಜಪೂತ್‌, ಸಹಾಯಕ ಆಯುಕ್ತ ಶಂಕರಗೌಡ ಎಸ್‌. ಸೋಮನಾಳ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು, ತಹಶೀಲ್ದಾರರು ಮುಂತಾದವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next