Advertisement

ಸಂಪ್ರದಾಯ-ಸಂಸ್ಕೃತಿಗಳ ಮೂಲ ಆಶಯ ಇಂದೂ ನಿಗೂಢ

11:38 AM Dec 18, 2017 | |

ಮುಂಬಯಿ: ಸಾವಿರಾರು ವರ್ಷಗಳ ಇತಿಹಾಸ, ಪರಂಪರೆಯ ಸಂಸ್ಕೃತಿಯನ್ನು  ಹೊಂದಿರುವ ಕರ್ನಾಟಕದ ಈ ಸಿರಿಗೆರೆಯ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ ಜನಮಾನಸದಲ್ಲಿ ಹಾಸುಹೊಕ್ಕಾಗಿ ನೆಲೆಸಿದೆ. ಕಾರಣ ನಮ್ಮಲ್ಲಿನ ಸಂಸ್ಕೃತಿ, ಪರಂಪರೆಗಳ ಉಳಿವಿಗಾಗಿ ಅದ್ವೀತಿಯ ಸಾಧನೆ ಮೆರೆದಿದೆ. ಅದಕ್ಕಾಗಿ ನಮ್ಮ ಮಠದ ಕೊಡುಗೆ ಅಸಾಮಾನ್ಯ. ಇತರರಿಂದ ಸಾಧ್ಯವಾಗದ್ದನ್ನು ನಮ್ಮ ಮಠ ಮಾಡಿ ತೋರಿಸಿದೆ. ಸಮಾಜಮುಖೀ ನಿಲುವನ್ನು ತಾಳಿ ಹಿಂದೆಂದಿಗಿಂತಲೂ ಜನಮಾನಸದೊಂದಿಗೆ ನಿಕಟ ಸಂಬಂಧ ಹೊಂದಿದೆ. ಹೀಗಾಗಿ ಜನರೂ ನಮ್ಮತ್ತ ಹೆಚ್ಚಾಗಿ ಒಲಿಯುತ್ತಿದ್ದಾರೆ ಎಂದು  ಶ್ರೀ ಮದುಜ್ಜಯಿನಿ ಸದ್ಧರ್ಮ ಸಿಂಹಾಸನಾಧೀಶ ಜಗದ್ಗುರು ಶ್ರೀ ತರಳಬಾಳು ಜಗದ್ಗುರು ಶ್ರೀ 1108 ಡಾ| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ತಿಳಿಸಿದರು.

Advertisement

ಡಿ. 16ರಂದು ಅಪರಾಹ್ನ ಮಾಟುಂಗಾ ಪೂರ್ವದ ಮೈಸೂರು ಅಸೋಸಿಯೇಶನಿನ ಕಿರು ಸಭಾಗೃಹ‌ದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಶ್ರೀಗಳು, ಸಂಪ್ರದಾಯ, ಸಂಸ್ಕೃತಿಗಳ ಮೂಲ ಆಶಯ ಇಂದೂ ನಿಗೂಢವಾಗಿದೆ. ಆದರೆ ಭಾರತೀಯ ಸಂಸ್ಕೃತಿ ವಿಶ್ವಕ್ಕೇ ಮಾದರಿಯಾಗಿದೆ. ಪಾಶ್ಚಿಮಾತ್ಯ ಸಂಸ್ಕೃತಿಗಿಂತ  ನಮ್ಮ ಜಾನಪದ ಕಲೆಯೇ ಶ್ರೇಷ್ಠವಾದದ್ದು. ಚಿತ್ರದುರ್ಗದ ಸಿರಿಗೆರೆಯ ಶ್ರೀ ತರಳಬಾಳು ಜಗದ್ಗುರು  ಬೃಹನ್ಮಠದ ಸಂಚಾಲಕತ್ವದ  ಶಾಲಾ ಸುಮಾರು 350 ಮಂದಿ ಕಲಾವಿದ ಮಕ್ಕಳು ಪ್ರದರ್ಶಿಸುವ “ದೇಶದ ಸಿರಿ-ಜನಪದ ಸಿರಿ’ ವಿಶೇಷ ಕಾರ್ಯಕ್ರಮದ ಬಗ್ಗೆ ತಿಳಿಸಿದ ಶ್ರೀಗಳು,  ಭಾವೀ ಜನಾಂಗದಲ್ಲಿ ಉದಾತ್ತ ಹಾಗೂ ಉಜ್ವಲ ಸಂಪ್ರದಾಯವನ್ನು ದಾಖಲಿಸಿ, ವಿಶ್ವದೆಲ್ಲೆಡೆ ವ್ಯಾಪಿಸುವ ನಿಟ್ಟಿನಲ್ಲಿ ನಮ್ಮ ಸಂಸ್ಕೃತಿಯನ್ನು ಪರಿಚಯಿಸುವುದೇ ನಮ್ಮ ಉದ್ದೇಶ. ಯುವ ಪೀಳಿಗೆಗಾಗಿ ಇದೊಂದು ಹೊಸ ಪ್ರಯತ್ನ ಇದು ರಾಷ್ಟ್ರದ ಸಮಸ್ತ ಜನತೆಗೆ ಇಷ್ಟವಾಗಬಹುದು. ಇದು ಬರೇ ಮನೋರಂಜನೆಯಾಗಿರದೆ ನಾಡಿನ ಬದುಕಿನ ಅನಾವರಣ ವಾಗಿದೆ. ಅಪರೂಪದ ಜಾನಪದ ಉತ್ಸವವಾಗಿ ಜನತೆ ಸ್ವೀಕರಿಸುವರು ಎಂಬುದು ನಮ್ಮ ಅಭಿಮತವಾಗಿದೆ ಎಂದು ನುಡಿದು ಎಲ್ಲರ ಸಹಕಾರ ಬಯಸಿದರು.

ಮೈಸೂರು ಅಸೋಸಿಯೇಶನ್‌ ಮುಂಬಯಿ ಇದರ ಡಾ| ಬಿ. ಆರ್‌. ಮಂಜುನಾಥ್‌ ಸ್ವಾಗತಿಸಿದರು.  ಜಾನಪದ ಉತ್ಸವದ ಸಂಯೋಜಕ ಶ್ರೀನಿವಾಸ ಜಿ. ಕಣ್ಣಪ್ಪ ಪ್ರಸ್ತಾವನೆಗೈದು ಕಾರ್ಯಕ್ರಮದ ಉದ್ದೇಶವನ್ನು ವಿವರಿಸಿದರು. ಮೈಸೂರು ಅಸೋಸಿಯೇಶನ್‌ ಮುಂಬಯಿ ಕಾರ್ಯದರ್ಶಿ ಡಾ| ಗಣಪತಿ ಶಂಕರಲಿಂಗ, ನಿತ್ಯಾನಂದ ಡಿ. ಕೋಟ್ಯಾನ್‌, ಕೆ. ಮಂಜುನಾಥ್‌, ಮೋಹನ್‌ ಮಾರ್ನಾಡ್‌, ಪಿ. ಸಿ. ಎನ್‌. ರಾವ್‌, ಗುರುರಾಜ್‌ ಎನ್‌. ನಾಯಕ್‌, ಸಾಹಿತಿ ಶ್ರೀನಿವಾಸ ಜೋಕಟ್ಟೆ, ಅಶೋಕ್‌ ಎಸ್‌. ಸುವರ್ಣ, ಸತೀಶ್‌ ಎನ್‌. ಬಂಗೇರ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಡಿ. 17ರಂದು ಸಂಜೆ 5ರಿಂದ ಇದೇ ಮೊದಲ ಬಾರಿ ಮುಂಬಯಿ  ವಡಾಲದ ಎನ್‌ಕೆಇಎಸ್‌ ವಿದ್ಯಾ ಸಂಕುಲದಲ್ಲಿ ಮೈಸೂರು ಅಸೋಸಿಯೇಶನ್‌ ಮುಂಬಯಿ, ರಾಷ್ಟ್ರೀಯ ಕನ್ನಡ ಶಿಕ್ಷಣ ಸಂಸ್ಥೆ ವಡಾಲ ಮತ್ತು ಕರ್ನಾಟಕ ಸಂಘ ಮುಂಬಯಿ ಇವುಗಳ ಸಹಯೋಗದೊಂದಿಗೆ ಜಾನಪದ ಉತ್ಸವ ನಡೆಯಲಿದೆ.  ಶ್ರೀನಿವಾಸ ಜಿ. ಕಣ್ಣಪ್ಪ ಅವರ ವಿನ್ಯಾಸ ಹಾಗೂ ಸಂಯೋಜನೆಯ ದೇಶದ ಸಿರಿ-ಜನಪದ ಸಿರಿ’ ಪ್ರದರ್ಶನಗೊಳ್ಳಲಿದೆ. ಈ ಜಾನಪದ ನೃತ್ಯ ಕಾರ್ಯಕ್ರಮದಲ್ಲಿ ಮುಂಬಯಿಯ ಕನ್ನಡಿಗರಿಗೆ ಪಾಲ್ಗೊಳ್ಳಲು ಒಂದು ಅಪೂರ್ವ ಹಾಗೂ ಮುಕ್ತ ಅವಕಾಶವಿದ್ದು ಮಹಾನಗರದಲ್ಲಿನ ಕನ್ನಡಾಭಿಮಾನಿಗಳು, ಸಂಸ್ಕೃತಿ ಪ್ರಿಯರು, ಕಲಾಸಕ್ತರು  ಪಾಲ್ಗೊಂಡು ಸಹಕರಿಸುವಂತೆ ಇದೇ ಸಂದರ್ಭದಲ್ಲಿ  ತಿಳಿಸಲಾಯಿತು. 

Advertisement
Advertisement

Udayavani is now on Telegram. Click here to join our channel and stay updated with the latest news.

Next