ಕೋವಿಡ್ 19 ದಾಳಿಯಿಂದಾಗಿ ಕನ್ನಡ ಚಿತ್ರರಂಗ ಸಂಪೂರ್ಣ ಸಂಕಷ್ಟದಲ್ಲಿದ್ದು, ಸರ್ಕಾರದ ನೆರವಿನ ನಿರೀಕ್ಷೆಯಲ್ಲಿದೆ. ಈ ಬಗ್ಗೆ ನಟಿ
ತಾರಾ ಅನುರಾಧ ಅವರು ಮುಖ್ಯಮಂತ್ರಿ
ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಮೂಲಕ ಚಿತ್ರರಂಗದ ನೆರವಿಗೆ ಧಾವಿಸಬೇಕು ಎಂದು ಮನವಿ ಮಾಡಿದ್ದಾರೆ.
ಹಲವು ನಿರ್ಮಾಪಕರು ಸಮಸ್ಯೆ ಅನುಭವಿಸುತ್ತಿದ್ದು,ಲಾಕ್‌ಡೌನ್ ತೆರವಾದರೂ ಚಿತ್ರರಂಗ ಸುಧಾರಿಸಿಕೊಳ್ಳಲು ಕನಿಷ್ಠ 6 ತಿಂಗಳು ಬೇಕು. ಹಾಗಾಗಿ ಸರ್ಕಾರ ಈ ವ್ಯಾಪ್ತಿಯಲ್ಲಿ ನೀಡಬಹುದಾದ ನೆರವು ಹಾಗು ಯಾವುದೇ ನಿರ್ಮಾಪಕರಿಗೆ ನಷ್ಟವಾಗದಂತೆ ಚಿತ್ರ ಬಿಡುಗಡೆಗೆ ಮಾರ್ಗಸೂಚಿ ರೂಪಿಸುವ ನಿಟ್ಟಿನಲ್ಲಿ ಸರ್ಕಾರದ ನೆರವು ಅಗತ್ಯವಾಗಿದೆ. ನಿರ್ದೇಶಕರು, ಛಾಯಾಗ್ರಾಹಕರು, ಸಂಕಲನಕಾರರು, ಪೋಷಕ ಕಲಾವಿದರು, ಒಕ್ಕೂಟ ಕಾರ್ಮಿಕರಿಗೆ ನೆರವು ನೀಡಲು ಮುಂದಾಗಬೇಕು.
ಮಂಡಳಿಯ ಅಂಗವಾಗಿ ದುಡಿಯುತ್ತಿರುವ ವಿತರಕರು, ಪ್ರದರ್ಶಕರು ಹಾಗು ನಿರ್ಮಾಪಕರು ಸಿನಿಮಾ ಬಿಡುಗಡೆ ಸಂದರ್ಭದಲ್ಲಿ ಬಡ್ಡಿಗೆ ಸಾಲ ಮಾಡಿದ್ದಾರೆ. ಆದರೆ, ಲಾಕ್‌ಡೌನ್‌ನಿಂದಾಗಿ ಸಂಕಷ್ಟದಲ್ಲಿದ್ದಾರೆ. ಮಾನವೀಯತೆ ದೃಷ್ಟಿಯಿಂದ ಸಾಲದ ಬಡ್ಡಿಯನ್ನು ಕಡಿಮೆ ಮಾಡುವಂತೆ ಸಂಬಂಧಿಸಿದವರಿಗೆ ಮನವೊಲಿಸಬಹುದು. ಲಾಕ್‌ಡೌನ್ ಜಾರಿಯ ಮುನ್ನ ರಿಲೀಸ್ ಆದ ಚಿತ್ರಗಳಿಗೆ ಕಡ್ಡಾಯವಾಗಿ ಸರ್ಕಾರದ ಸಹಾಯಧನ (ಸಬ್ಸಿಡಿ) ದೊರೆಯುವಂತೆ ಮಾಡಬಹುದು. ನಿರ್ಮಾಪಕರಿಗೆ ಎದುರಾಗುವ ಸಮಸ್ಯೆಗಳ ಕುರಿತು ಪರಿಶೀಲನೆ ನಡೆಸಿ, ಪರಿಹಾರಕ್ಕೆ ರೋಡ್ ಮ್ಯಾಪ್ ಸಿದ್ಧಪಡಿಸುವುದು ಎಲ್ಲಾ ವಲಯದವರಿಗೂ ನೀಡಬಹುದಾದ ನೆರವಿನ ಬಗ್ಗೆ ಕ್ರಮ ಕೈಗೊಳ್ಳಬೇಕು. ಈ ಸಮಸ್ಯೆಯಿಂದಾಗಿ ಸಂಕಷ್ಟಕ್ಕೆ ಸಿಲುಕಿರೋದು, ನಿರ್ದೇಶಕರು, ಛಾಯಾಗ್ರಾಹಕರು, ಸಂಕಲನಕಾರರು, ಕಲಾವಿದರು, ಕಾರ್ಮಿಕರು ಇವರಿಗೆ ಸರ್ಕಾರದ ಮಾರ್ಗಸೂಚಿ ಅನ್ವಯ ಬಿಪಿಎಲ್ ಕಾರ್ಡ್ ಹಾಗು ಎಪಿಎಲ್‌ಕಾರ್ಡ್ ನೀಡಲು ಕ್ರಮ ಸೇರಿದಂತೆ ಉಚಿತ ಆರೋಗ್ಯ ಸೇವೆ ಹಾಗು ಈ ವರ್ಗದವರಿಗೆ ಅಗತ್ಯ ದಿನಸಿ, ಔಷಧಕೊಳ್ಳಲು 5 ಸಾವಿರ ರೂ.ಮೊತ್ತದ ಕೂಪನ್ ಒದಗಿಸುವುದು ಸೇರಿದಂತೆ ಅನೇಕ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ತಾರಾ ಅನುರಾಧ ಅವರು ಮುಖ್ಯಮಂತ್ರಿಗಳ ನಿವಾಸಕ್ಕೆ ತೆರಳಿ ಮನವಿ ಸಲ್ಲಿಸಿದ್ದಾರೆ. ಈ ವೇಳೆ, ಬಿಜೆಪಿ ಮುಖಂಡ ರುದ್ರೇಶ್, ಮರಿಸ್ವಾಮಿ ಇತರರು ಇದ್ದರು.