ಮೈಸೂರು: ಮಹಾನಗರ ಪಾಲಿಕೆ ಮೇಯರ್ ಚುನಾವಣೆ ಬಳಿಕ ಕಾಂಗ್ರೆಸ್ ಒಡೆದ ಮನೆಯಾಗಿದ್ದು, ಸಿದ್ದರಾಮಯ್ಯ ಅವರ ಸೂಚನೆ ಧಿಕ್ಕರಿಸಿದ ಆರೋಪದ ಮೇಲೆ ಶಾಸಕ ತನ್ವೀರ್ ಸೇಠ್ ವಿರುದ್ಧ ಕಾಂಗ್ರೆಸ್ ನಾಯಕರು ಗರಂ ಆಗಿದ್ದಾರೆ. ಈ ನಡುವೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಿರುದ್ಧ ತನ್ವೀರ್ ಸೇಠ್ ಬೇಸರ ಹೊರ= ಹಾಕಿದ್ದಾರೆ.
ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ತನ್ವೀರ್ ಸೇಠ್ ರಮೇಶ್ ಕುಮಾರ್ ಅವರು ಯಾರನ್ನು ಕೇಳಿ ಮೈತ್ರಿ ಮಾಡಿಕೊಂಡಿದ್ದೀರಿ ಎಂಬ ಮೂಲ ಪ್ರಶ್ನೆ ಎತ್ತಿದ್ದಾರೆ. ಅವರ ಪ್ರಶ್ನೆಗೆ ನಿನ್ನೆಯೇ ಉತ್ತರ ನೀಡಿದ್ದೇನೆ. ಸಿದ್ದರಾಮಯ್ಯನವರೇ ಮೈತ್ರಿಗೆ ಮುಂದಾಗಿ ಎಂದು ಸೂಚನೆ ನೀಡಿದ್ದರು. ಮೇಯರ್ ಸ್ಥಾನ ಲಭಿಸುವಂತೆ ನೋಡಿಕೊಳ್ಳಿ ಎಂದಿದ್ದರು. ಅವರ ಪ್ರಶ್ನೆಗೆ ಉತ್ತರ ಲಭಿಸಿದೆ ಎಂದು ಕೊಳ್ಳುತ್ತೇನೆ, ದ್ವಂದ್ವ ನೀತಿ ನೀವು ಸೃಷ್ಟಿಸಿ ನನ್ನ ಮೇಲೆ ಯಾಕೆ ಆರೋಪ ಮಾಡುತ್ತೀರಿ ಎಂದು ಪ್ರಶ್ನಿಸಿದರು.
ಮಗು ಗಂಡಾದರೇನು, ಹೆಣ್ಣಾದರೇನು: ಉಪ ಮೇಯರ್ ಸ್ಥಾನಕ್ಕೆ ಯಾಕೆ ಒಪ್ಪಿಕೊಂಡಿರಿ, ನಾವು ಕೇಳಿದ್ದು ಮೇಯರ್ ಸ್ಥಾನ ಎನ್ನುತ್ತಾರೆ. ಮಗು ಬೇಕೆಂದು ನಿರ್ಧಾರ ಮಾಡಿದ ಮೇಲೆ ಗಂಡಾದರೇನು? ಹೆಣ್ಣಾದರೇನು ಸ್ವೀಕರಿಸಬೇಕಷ್ಟೆ. ಇವೆರಡರಲ್ಲಿ ನೀವು ಯಾವುದನ್ನು ಸ್ವೀಕರಿಸುತ್ತೀರಿ, ಯಾವುದನ್ನು ಬಿಡುತ್ತೀರಿ. ಈ ಸಂಸ್ಕೃತಿ, ದ್ವಂದ್ವ ನೀತಿಯನ್ನು ನೀವು ಸೃಷ್ಟಿ ಮಾಡಿಕೊಂಡು ನನ್ನ ಮೇಲೆ ಆರೋಪ ಮಾಡುತ್ತಿದ್ದೀರಿ. ನಾನು ಪಕ್ಷದಸಿದ್ಧಾಂತಕ್ಕೆ ಚ್ಯುತಿ ಬರುವ ಕೆಲಸ ಮಾಡಿಲ್ಲ. ನಮ್ಮ ಮುಂದೆ ಇದ್ದದ್ದು ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವುದು ಮಾತ್ರ. ಅದನ್ನು ನಾವು ಸಾಧಿಸಿದ್ದೇವೆ. ಕೊನೆ ಕ್ಷಣದಲ್ಲಿ ಮಾಡಿದರೂ ಅಂದಮೇಲೆ ಯಾರ ಶಕ್ತಿ ಎಷ್ಟಿದೆ ಎಂಬುದನ್ನು ಅವರೇ ಬಿಂಬಿಸಿದ್ದಾರೆ. ಎಲ್ಲ ವಿಚಾರಗಳನ್ನು ಇಲ್ಲಿ ವಿಶ್ಲೇಷಣೆ ಮಾಡಲು ಆಗಲ್ಲ. ಹೆಚ್ಚಾಗಿ ಸಾರ್ವಜನಿಕ ವಲಯದಲ್ಲಿ ಚರ್ಚೆ ಮಾಡುವಂತಹ ವಿಚಾರವೂ ಅಲ್ಲ. ಪಕ್ಷ ನನಗೆ ವರದಿ ಕೇಳಿದೆ. ವರದಿ ಕೊಡಲು ಸಿದ್ಧ ಮಾಡಿಕೊಂಡಿದ್ದೇನೆ. ಪಕ್ಷ ಏನು ತೀರ್ಮಾನ ತೆಗೆದುಕೊಳ್ಳುತ್ತದೋ ಅದರ ನಂತರ ನನ್ನ ಸ್ಪಷ್ಟನೆ ನೀಡುತ್ತೇನೆ ಎಂದು ತಿಳಿಸಿದರು.
ಈ ಪ್ರಶ್ನೆಗೆ ನನ್ನ ಬಳಿ ಉತ್ತರ ಇಲ್ಲ.. :
ನಿಮ್ಮ ನಿರ್ಧಾರದಿಂದ ಸಿದ್ದರಾಮಯ್ಯನವರ ಪ್ರತಿಷ್ಠೆ ಹಾಳಾಯಿತು ಎಂಬ ಮಾತು ಕೇಳಿ ಬರುತ್ತಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ತನ್ವೀರ್ ಸೇಠ್ ಈ ಪ್ರಶ್ನೆಗೆ ನನ್ನ ಬಳಿ ಉತ್ತರ ಇಲ್ಲ. ಪಕ್ಷದ ಅಧ್ಯಕ್ಷರು ಬೆಂಗಳೂರಿಗೆ ಬರಲು ಹೇಳಿದ್ದು, ಸೋಮವಾರ ವರದಿ ಸಮೇತ ಅವರನ್ನು ಭೇಟಿ ಮಾಡುತ್ತೇನೆ. ಎಲ್ಲ ವಿದ್ಯಮಾನಗಳನ್ನು ಚರ್ಚಿಸುತ್ತೇನೆ. ನಾನು ನನ್ನ ಕರ್ತವ್ಯ ನಿರ್ವಹಿಸುವ ನಿಟ್ಟಿನಲ್ಲಿ ಬದ್ಧನಾಗಿದ್ದು, ನನ್ನ ಮೇಲೆ ಯಾವ ಕ್ರಮ ತೆಗೆದುಕೊಂಡರೂ ಸಿದ್ಧನಿದ್ದೇನೆ. ಬಹುಮಾನ ಕೊಡುತ್ತಾರೋ ಅಥವಾ ಶಿಕ್ಷೆ ಕೊಡುತ್ತಾರೋ ಅಥವಾ ಮತ್ತೂಬ್ಬರ ಮಾತಿಗೆ ನನ್ನ ಬಲಿ ಮಾಡುತ್ತಾರೋ ಎಲ್ಲದಕ್ಕೂ ನಾನು ಸಿದ್ಧವಿದ್ದೇನೆ ಎಂದು ತಿಳಿಸಿದರು.
ವೈಯಕ್ತಿಕವಾಗಿ ನನ್ನ ಮೇಲೆ ಕೆಲವು ಗಂಭೀರ ಆರೋಪಗಳು ಕೇಳಿ ಬರುತ್ತಿವೆ. ಹಣಕಾಸಿನ ವ್ಯವಹಾರ ನಡೆದಿದೆ, ಪಕ್ಷೇತರ ಅಭ್ಯರ್ಥಿಗಳನ್ನು ನಾನು ಕಳುಹಿಸಿಕೊಟ್ಟಿದ್ದೇನೆ, ಮತ್ತೂಂದು ಪಕ್ಷದ ನಾಯಕರನ್ನು ಖುಷಿ ಪಡಿಸುವ ಕೆಲಸ ಮಾಡಿದ್ದೇನೆ. ನಮ್ಮ ಪಕ್ಷದ ನಾಯಕರಿಗೆ ಅವಮಾನ ಮಾಡಲು ಮತ್ತೂಬ್ಬರೊಂದಿಗೆ ಕೈಜೋಡಿಸಿದ್ದೇನೆ ಎಂಬ ಆಧಾರ ರಹಿತ ಆರೋಪ ಮಾಡುತ್ತಿದ್ದಾರೆ. ಈ ಕುರಿತು ಸತ್ಯ ಸಂಗತಿಗಳು ಹೊರ ಬರುವವರೆಗೆ ಹೋರಾಟ ಮುಂದುವರಿಯಲಿದೆ.
– ತನ್ವೀರ್ ಸೇಠ್ ಶಾಸಕ