Advertisement

ಗಿನ್ನೆಸ್‌ ದಾಖಲೆಯತ್ತ ತನುಶ್ರೀ ಪಿತ್ರೋಡಿ

08:15 AM Apr 04, 2018 | Team Udayavani |

ಕಟಪಾಡಿ: ಉಡುಪಿ ಜಿಲ್ಲೆಯ ಉದ್ಯಾವರದ 11ರ ಬಾಲಕಿ ತನುಶ್ರೀ ಪಿತ್ರೋಡಿ ಅವರು ಒಂದು ನಿಮಿಷದಲ್ಲಿ ಯೋಗ ಭಂಗಿಯೊಂದನ್ನು ಅತೀ ಹೆಚ್ಚು ಬಾರಿ ಮಾಡುವ ಗಿನ್ನೆಸ್‌ ದಾಖಲೆ ಸ್ಥಾಪಿಸಲು ಎಪ್ರಿಲ್‌ 7ರಂದು ಪ್ರಯತ್ನಿಸಲಿದ್ದಾಳೆ. ಎದೆಭಾಗ ಸ್ಥಿರವಿರಿಸಿ ದೇಹದ ಉಳಿದ ಭಾಗಗಳನ್ನು ನಿಮಿಷಕ್ಕೆ ಅತೀ ಹೆಚ್ಚು ಬಾರಿ ಚಲನೆಗೊಳಪಡಿಸುವ ನಿರಾಲಂಭ ಪೂರ್ಣ ಚಕ್ರಾಸನ ಭಂಗಿಯನ್ನು ಆಕೆ ಪ್ರದರ್ಶಿಸಲಿದ್ದಾಳೆ.

Advertisement

ಪ್ರಸ್ತುತ ಪ್ಯಾಲೆಸ್ತೀನ್‌ನ 13 ವರ್ಷದ ಬಾಲಕ ಮೊಹಮ್ಮದ್‌ ಆಲ್‌ ಶೇಖ್‌ ಹೆಸರಿನಲ್ಲಿ ಈ ದಾಖಲೆಯಿದೆ. ಆತ ನಿಮಿಷಕ್ಕೆ 38 ಬಾರಿ ಈ ಭಂಗಿಯನ್ನು ಮಾಡಿದ್ದಾನೆ. ಇದನ್ನು ಮುರಿದು ತನ್ನ ಹೆಸರಿನಲ್ಲಿ ದಾಖಲೆ ಬರೆಯಲು ತನುಶ್ರೀ ಅಣಿಯಾಗಿದ್ದು, ಎ. 7ಕ್ಕೆ ಅಖಾಡ ಸಿದ್ಧಗೊಂಡಿದೆ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಮುಂಬಯಿಯಿಂದ ಬಂದು ದಾಖಲೆಯನ್ನು ದೃಢೀಕರಿಸಲಿದ್ದಾರೆ.

ತನುಶ್ರೀ ಕೇವಲ ಒಂದು ನಿಗದಿತ ಆಸನವನ್ನು ವೀಡಿಯೋದಲ್ಲಿ ವೀಕ್ಷಿಸಿ ತಾಯಿಯ ಮಾರ್ಗದರ್ಶನದಲ್ಲಿ ನಿತ್ಯ ಅಭ್ಯಸಿಸಿ ಈಗ ಗಿನ್ನೆಸ್‌ ಸಾಧನೆಗೆ ಕೈ ಇಕ್ಕುತ್ತಿದ್ದಾಳೆ. ತಂದೆ ಉದಯ ಕುಮಾರ್‌ ಮತ್ತು ತಾಯಿ ಸಂಧ್ಯಾ ಅವರ ಗರಡಿಯಲ್ಲಿ ಮನೆಯಲ್ಲಿಯೇ ನಿರಂತರ ಅಭ್ಯಾಸ ನಡೆಸುತ್ತಿರುವ ಈಕೆ ಉಡುಪಿ ಸೈಂಟ್‌ ಸಿಸಿಲೀಸ್‌ ಹಿರಿಯ ಪ್ರಾಥಮಿಕ ಕನ್ನಡ ಮಾಧ್ಯಮ ಶಾಲೆಯ 4ನೇ ತರಗತಿಯ ವಿದ್ಯಾರ್ಥಿನಿ.

ವೆಂಕಟರಮಣ ನ್ಪೋರ್ಟ್ಸ್ ಮತ್ತು ಕಲ್ಚರಲ್‌ ಪಿತ್ರೋಡಿ ಇದರ ನೇತೃತ್ವದಲ್ಲಿ ಅಧ್ಯಕ್ಷ ಮಲ್ಲೇಶ್‌ ಕುಮಾರ್‌ ಮುಂದಾಳತ್ವದಲ್ಲಿ ಉಡುಪಿ ಅಮ್ಮಣಿ ರಾಮಣ್ಣ ಶೆಟ್ಟಿ ಸಭಾಭವನದಲ್ಲಿ ಈ ಗಿನ್ನೆಸ್‌ ದಾಖಲೆ ಪ್ರಯತ್ನದ ಪ್ರದರ್ಶನ ನಡೆಯಲಿದೆ.

ತನುಶ್ರೀ ಈಗಾಗಲೇ ಯೋಗದ ನಿರಾಲಂಭ ಪೂರ್ಣ ಚಕ್ರಾಸನವನ್ನು ಒಂದೇ ನಿಮಿಷದಲ್ಲಿ 19 ಬಾರಿ ಮಾಡುವ ಮೂಲಕ ಗೋಲ್ಡನ್‌ ಬುಕ್‌ ಆಫ್‌ ರೆಕಾರ್ಡ್‌ ಸಾಧನೆಯನ್ನು 2017ರ ನ. 11ರಂದು ನಡೆಸಿದ್ದು, ಇಂದೋರ್‌ನಿಂದ ಆಗಮಿಸಿದ್ದ ಅಧಿಕಾರಿಗಳು ಪ್ರಮಾಣಪತ್ರ ನೀಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next