Advertisement

ಹೆಮ್ಮಾಡಿ ಸಂತೋಷ್‌ ನಗರದಲ್ಲಿ ಟ್ಯಾಂಕರ್‌ ನೀರೂ ಸಮಯಕ್ಕಿಲ್ಲ!

12:30 AM Apr 25, 2019 | Team Udayavani |

ಇದು ಸಾಕ್ಷಾತ್‌ ವರದಿಗಳ ಸರಣಿ. ಪ್ರತಿ ಬೇಸಗೆಯಲ್ಲಿ ಸ್ಥಳೀಯ ಆಡಳಿತ ನೀರಿನ ಕೊರತೆ ಇರುವ ಪ್ರದೇಶಗಳಲ್ಲಿ ತಾತ್ಕಾಲಿಕ ಪರಿಹಾರಗಳನ್ನು ಕೈಗೊಳ್ಳುತ್ತದೆ. ಆದರೆ ಅವುಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಗಮನ ಹರಿಸುವುದು ಕಡಿಮೆ. ಹಾಗಾಗಿಯೇ ಜನರು ಯಾಕಾದ್ರೂ ಬೇಸಗೆ ಬರುತ್ತಪ್ಪಾ ಎಂದು ಶಾಸ್ತ್ರ ಹಾಕುತ್ತಾ ದಿನದೂಡುತ್ತಾರೆ. ಈ ಜನರ ಕಷ್ಟಗಳನ್ನು ಯಥಾವತ್ತಾಗಿ ವರದಿ ಮಾಡಿ ಶಾಶ್ವತ ಪರಿಹಾರ ಕಲ್ಪಿಸುವತ್ತ ಸ್ಥಳೀಯ ಆಡಳಿತ, ಜನ ಪ್ರತಿನಿಧಿಗಳು, ಶಾಸಕರ ಕಣ್ಣು ತೆರೆಸುವುದು ನಮ್ಮ ಉದ್ದೇಶ. ಅದಕ್ಕಾಗಿ ನಮ್ಮ ತಂಡ ನೀರಿನ ಅತಿಯಾದ ಸಮಸ್ಯೆ ಇರುವಲ್ಲಿಗೆ ಭೇಟಿ ನೀಡುತ್ತದೆ. ಆಗ ನಿಮ್ಮ ಸಮಸ್ಯೆಯನ್ನು ಹಂಚಿಕೊಳ್ಳಿ. ನೀರಿನ ಕೊರತೆ ಹೆಚ್ಚಿದ್ದರೆ ಈ ನಂಬರ್‌ 9148594259ಗೆ ವಾಟ್ಸಾéಪ್‌ ಮಾಡಿ.

Advertisement

ಕುಂದಾಪುರ: ಹೆಮ್ಮಾಡಿ ಪಂಚಾಯತ್‌ ವ್ಯಾಪ್ತಿಯ ಸಂತೋಷ ನಗರದಲ್ಲಿ ನೀರಿನ ಸಮಸ್ಯೆ ಬಿಗಡಾಯಿಸಿದ್ದು, ಪಂಚಾಯತ್‌ ವತಿಯಿಂದ ನೀಡುತ್ತಿರುವ ಟ್ಯಾಂಕರ್‌ ನೀರು ಕೂಡ ಸರಿಯಾಗಿ ಬರುತ್ತಿಲ್ಲ.

ಹೆದ್ದಾರಿ ಸನಿಹ, ನದಿ ನಿಲುಕಿನಲ್ಲೇ ಇರುವ ಸಂತೋಷನಗರದ ಕೆರೆಮನೆ, ಬುಗುರಿಕಡು, ಕೋಟೆಬೆಟ್ಟು, ಮಂಜರಬೆಟ್ಟು, ಮಕ್ಕಿಮನೆ ಮೊದಲಾದೆಡೆ ಬರಗಾಲದ ರೀತಿ ಪರಿಸ್ಥಿತಿ ಇದೆ.

ಎರಡು ತಿಂಗಳಿಂದ ನಳ್ಳಿ ನೀರಿಲ್ಲ
ಎರಡು ತಿಂಗಳಿಂದ ಇಲ್ಲಿ ನಳ್ಳಿ ನೀರು ಬಂದಿಲ್ಲ. ಮನೆಗಳ ಬಾವಿಗಳು ಬತ್ತಿ ಹೋಗಿವೆ. ಜಾನುವಾರುಗಳಿಗೂ ಕುಡಿಯುವ ನೀರಿಲ್ಲ. ಮನೆಯಂಗಳದಲ್ಲಿ ಪಾತ್ರೆ ಪಗಡೆಗಳಲ್ಲಿ ಸಂಗ್ರಹಿಸಿಟ್ಟ ನೀರನ್ನು ಜನರು ಚಿನ್ನದಂತೆ ಜತನ ಮಾಡುತ್ತಾರೆ.

ದೂರದ ಬಾವಿಯಿಂದ
ಮಕ್ಕಿಮನೆ ಪ್ರದೇಶದ ಸೀತಾ ಪೂಜಾರ್ತಿ ಹೇಳುವಂತೆ ಪಂಚಾಯತ್‌ನಿಂದ ಟ್ಯಾಂಕರ್‌ ಮೂಲಕ ಉಚಿತವಾಗಿ 3 ಕೊಡ ನೀರು ಕೊಡುತ್ತಾರೆ. ಆದರೆ ಅದು ಏನಕ್ಕೂ ಸಾಲುವುದಿಲ್ಲ. 68 ವಯಸ್ಸಿನ ಗೌರಿ ಅವರು ಹೇಳುವಂತೆ ಪಂಚಾಯತ್‌ ನೀರು ಸಿಗುತ್ತಿಲ್ಲ. ಅದಕ್ಕೆ ದಿನಕ್ಕೆ ನೂರು ರೂ. ಕೊಡಬೇಕಂತ ಯಾರೋ ಹೇಳಿದರು. ಹಾಗಾಗಿ ನಾನು ಟ್ಯಾಂಕರ್‌ ಕಡೆ ಹೋಗಿಲ್ಲ. ದೂರದ ಮನೆಯ ಬಾವಿಯಿಂದ ನೀರು ಹೊತ್ತು ತರುವಾಗ ಸಾಕಾಗಿ ಹೋಗುತ್ತದೆ ಎನ್ನುತ್ತಾರೆ.

Advertisement

ಇಲ್ಲೊಂದಷ್ಟು ಮನೆಯವರು ನೀರಿರುವ ಬಾವಿಯ ಮನೆಯವರ ಜತೆ ಮಾತುಕತೆಯಾಡಿ ವಿದ್ಯುತ್‌ ಬಿಲ್‌ ಪಾವತಿಸಿ ನೀರು ಪಡೆಯುವ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಆದರೆ ಈಗ ಆ ಬಾವಿಯಲ್ಲೂ ನೀರು ಕಡಿಮೆಯಾಗುತ್ತಿದೆ.

ಎಷ್ಟೆಷ್ಟೋ ಹೊತ್ತಿಗೆ ಬರುವ ಟ್ಯಾಂಕರ್‌
ಟ್ಯಾಂಕರ್‌ ನೀರು ಎಷ್ಟೆಷ್ಟೊತ್ತಿಗೋ ಬರುತ್ತದೆ. ಬಂದರೂ ಮನೆತನಕ ಇಲ್ಲ. ಇವತ್ತು ನೋಡಿ, ಮಧ್ಯಾಹ್ನ ಬಂದು ಸೀದಾ ಹೋಗಿದೆ. ಯಾರಿಗೂ ನೀರು ಸಿಕ್ಕಿಲ್ಲ. ಮಾಹಿತಿಯೂ ಇಲ್ಲ. ಎರಡು ದಿನಕ್ಕೊಮ್ಮೆ ಬರುವ ಟ್ಯಾಂಕರಾದರೂ ಇಷ್ಟೇ ಹೊತ್ತಿಗೆ ಅಂದರೆ ಕಾಯಬಹುದು. ನಾವು ಹೊಟ್ಟೆಪಾಡಿಗೆ ಕೆಲಸಕ್ಕೆ ಹೋಗುವವರು. ಇಡೀ ದಿನ ಕಾದು ಕೂರಲಾಗುತ್ತದೆಯೇ?ಎನ್ನುತ್ತಾರೆ ಗಂಗಾ. ರಸ್ತೆ ವ್ಯವಸ್ಥೆಯಿಲ್ಲದೇ ಟ್ಯಾಂಕರ್‌ ಈ ಭಾಗಕ್ಕೆ ಬರುವುದಿಲ್ಲ. ಹಾಗಾಗಿ ಸಮಸ್ಯೆಯಾಗಿದೆ ಎನ್ನುತ್ತಾರೆ ಸಂಜೀವ.

ಬಟ್ಟೆ ಒಗೆಯಲು ಬೇರೆಡೆಗೆ ಹೋಗಬೇಕು. ಹೆಣ್ಮಕ್ಕಳು, ಮಕ್ಕಳು ಎಂದಿರುವಾಗ ಸ್ನಾನ, ಅಡುಗೆ, ಪಾತ್ರೆ ತೊಳೆಯಲು ನೀರಿಲ್ಲದೇ ಪೇಚಾಟವಾಗಿದೆ ಎನ್ನುತ್ತಾರೆ ಗಿರಿಜಾ.

ನೀರಿನ ಮೂಲ ಇಲ್ಲ
ಪಂಚಾಯತ್‌ಗೆ 1 ತೆರೆದಬಾವಿ, 1 ಕೊಳವೆ ಬಾವಿ ಮಾತ್ರ ಇದೆ. ಇನ್ನೊಂದು ಕೊಳವೆಬಾವಿ ಕಟ್‌ಬೆಲೂ¤ರು ಪಂ. ವ್ಯಾಪ್ತಿಯ ಸುಳೆÕಯಲ್ಲಿದ್ದು ಅದು ನಿರುಪಯುಕ್ತವಾಗಿದೆ. ಉಳಿದಂತೆ ಕೆಲವು ಪ್ರದೇಶಗಳಿಗೆ ಕಟ್‌ಬೆಲೂ¤ರು ಪಂ. ವ್ಯಾಪ್ತಿಯಿಂದ ನೀರು ದೊರೆಯುತ್ತದೆ. ಹೆಮ್ಮಾಡಿ ಪಂಚಾಯತ್‌ನಿಂದ ಕಟ್‌ಬೆಲೂ¤ರು ಸ್ವತಂತ್ರ ಪಂಚಾಯತ್‌ ಆದ ಬಳಿಕ ಹೆಮ್ಮಾಡಿಗೆ ನೀರಿನ ಮೂಲ ಕೊರತೆಯಾಗಿದೆ.

ಸಮಸ್ಯೆಯ ಆಗರ
ಬುಗುರಿಕಡುವಿನಲ್ಲಿ ಜನ ನೀರಿಲ್ಲದೇ ಪರದಾಡುತ್ತಿದ್ದಾರೆ. ಇಲ್ಲಿನ 30 ಮನೆಗಳ ಸಮಸ್ಯೆ ವ್ಯಾಪಕವಾಗಿದೆ ಎನ್ನುತ್ತಾರೆ ಉಮೇಶ್‌.

ಪಂಚಾಯತ್‌ನವರು ನಳ್ಳಿ ಕೇಳಿದರೂ ಕೊಡುವುದಿಲ್ಲ. ಕೊಳವೆಬಾವಿ ಬರಡಾಗಿದೆ. ಕೆರೆಮನೆ ಹತ್ತಿರ ದೊಡ್ಡ ಕೆರೆ ಇದೆ. ಅದರ ಉದ್ಧಾರ ಆಗಿಲ್ಲ. ದೊಡ್ಡ ಮದಗ ಇತ್ತು. ಅಲ್ಲಿ ನೀರಿಂಗಿಸಲು ಯತ್ನಿಸಿಲ್ಲ. ಸೌಪರ್ಣಿಕಾ ಹೊಳೆ ನೀರು ಉಪ್ಪು ಎನ್ನುತ್ತಾರೆ ನರಸಿಂಹ ಅವರು. ಜಾನುವಾರುಗಳಿಗೆ ನೀರಿಲ್ಲ, ಟ್ಯಾಂಕರ್‌ಗೆ ಸಮಯ ಇಲ್ಲದ್ದರಿಂದ ನೀರು ಸಂಗ್ರಹ ಕಷ್ಟವಾಗಿದೆ ಎನ್ನುತ್ತಾರೆ ಬಾಲಚಂದ್ರ.

ಮೂರೇ ಟ್ಯಾಂಕರ್‌
ಸಾಮಾನ್ಯವಾಗಿ ಇಲ್ಲಿ ಎಪ್ರಿಲ್‌ ಮಧ್ಯದಿಂದ ನೀರಿನ ಸಮಸ್ಯೆ ಉಂಟಾಗುತ್ತದೆ. ಆದರೆ ಈ ಬಾರಿ ಮಾರ್ಚ್‌ ತಿಂಗಳಲ್ಲಿಯೇ ಸಮಸ್ಯೆಯಾಗಿದೆ. ಮಾರ್ಚ್‌ ಕೊನೆಯಿಂದ ಇಲ್ಲಿವರೆಗೆ ಮೂರು ಸಲ ಟ್ಯಾಂಕರ್‌ ಬಂದಿದೆ ಅಷ್ಟೇ ಎನ್ನುತ್ತಾರೆ ರಾಧಾ.

ನೀರಿನ ಪ್ರಮಾಣ ಹೆಚ್ಚಳ ಮಾಡುತ್ತೇವೆ
ಟ್ಯಾಂಕರ್‌ ನೀರನ್ನು ಮನೆಮನೆಗೆ ವಿತರಿಸುತ್ತಿಲ್ಲ. ಕೆಲವು ಪ್ರದೇಶ ಗುರುತಿಸಿ ನೀಡುತ್ತಿದ್ದು, ಅಲ್ಲಿಂದ ನೀರು ಕೊಂಡೊಯ್ಯಬೇಕು. ಟ್ಯಾಂಕರ್‌ ಸಮಯದ
ಕುರಿತು ದೂರು ಬಂದಿಲ್ಲ. ಬಾವಿ ನೀರು ಆರಿದರೆ ಪಂಚಾಯತ್‌ಗೆ ಅರ್ಜಿ ಕೊಟ್ಟರೆ ಟ್ಯಾಂಕರ್‌ ನೀರು ಕೊಡಲಾಗುವುದು. ಒಂದಷ್ಟು ಮಂದಿ ಸೇರಿ ಟ್ಯಾಂಕ್‌ ಇಟ್ಟು ನೀರು ತುಂಬಿಸಿಕೊಂಡು ಅನಂತರ ಕೊಂಡೊಯ್ಯುವುದಕ್ಕೆ ನಮ್ಮ ಆಕ್ಷೇಪವಿಲ್ಲ. ಮುಂದಿನ ದಿನಗಳಲ್ಲಿ ವಿತರಿಸುವ ನೀರಿನ ಪ್ರಮಾಣ ಹೆಚ್ಚಿಸಲಾಗುವುದು.
-ಮಂಜಯ್ಯ ಬಿಲ್ಲವ, ಪಂಚಾಯತ್‌ ಅಭಿವೃದ್ಧಿ ಅಧಿಕಾರಿ, ಹೆಮ್ಮಾಡಿ

ಬಾವಿಯಲ್ಲಿ ನೀರಿಲ್ಲ
ಸ್ವಲ್ಪ ದೂರದ ಮನೆ ಬಾವಿ ಯಿಂದ ನೀರು ತರುತ್ತಿದ್ದೆವು. ಈಗ ಅಲ್ಲೂ ಕಡಿಮೆಯಾಗಿದೆ. ಪಾಪ, ಅವರಿಗೂ ಬೇಡವೇ. ಅವರಾದರೂ ಎಷ್ಟೆಂದು ಕೊಟ್ಟಾರು ಎನ್ನುತ್ತಾರೆ ಹಿರಿಯ ಜೀವ ಮಂಜರಬೆಟ್ಟಿನ ಪುಟ್ಟು. ಈ ಪ್ರದೇಶದಲ್ಲಿ 8 ಬಾವಿಗಳ ಪೈಕಿ 3 ಬಾವಿಯಲ್ಲಿ ಮಾತ್ರ ಸ್ವಲ್ಪ ನೀರಿದೆ. ಅದೂ ಹೆಚ್ಚು ದಿನಕ್ಕಿಲ್ಲ. ಉಳದೆಲ್ಲ ತಳ ಕಾಣುತ್ತಿದೆ.

ಗ್ರಾಮಸ್ಥರ ಬೇಡಿಕೆ
– ಸಮರ್ಪಕ ನಳ್ಳಿ ನೀರಿನ ವ್ಯವಸ್ಥೆ.
– ಟ್ಯಾಂಕರ್‌ ನೀರು ವಿತರಣೆಯಲ್ಲಿ ಸಮಯ ನಿಗದಿ.
– ಟ್ಯಾಂಕರ್‌ ನೀರು ವಿತರಣೆಯಲ್ಲಿ ಸಮಯ ನಿಗದಿ.
– ಕೊಳವೆ ಬಾವಿಗಳಿಗೆ ಕಾಯಕಲ್ಪ.
– ಟ್ಯಾಂಕರ್‌ ಬರಲು ರಸ್ತೆ ವ್ಯವಸ್ಥೆ.

– ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next