ಬೆಂಗಳೂರು: ಬರ ಪೀಡಿತ ತಾಲೂಕುಗಳು ಎಂದು ಘೋಷಿಸಿರುವ ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯ ಆನೇಕಲ್, ಬೆಂಗಳೂರು ಪೂರ್ವ, ದಕ್ಷಿಣ ಹಾಗೂ ಉತ್ತರ ತಾಲೂಕುಗಳಲ್ಲಿ 34 ಟ್ಯಾಂಕರ್‌ಗಳ ಮೂಲಕ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ.
ಆನೇಕಲ್ ತಾಲೂಕಿನ ವಣಕನಹಳ್ಳಿ ಗ್ರಾ.ಪಂ ವ್ಯಾಪ್ತಿಯ ಕೆಂಪುದೊಮ್ಮಸಂದ್ರ, ಸೋಲೂರು, ತೆಲಗಳಹಲ್ಲಿ ಗ್ರಾಮಗಳ ವ್ಯಾಪ್ತಿಯಲ್ಲಿ, 24 ಟ್ಯಾಂಕರ್‌ಗಳ ಮೂಲಕ ಪ್ರತಿ ನಿತ್ಯ 53 ಟ್ರಿಪ್ ನೀರು ಪೂರೈಸಲಿದ್ದು, ಇದಕ್ಕೆ ಒಟ್ಟು 18,400 ರೂ. ವೆಚ್ಚವಾಗಲಿದೆ.
ನಗರಕ್ಕೆ ಹೊಂದಿಕೊಂಡಿರುವ ಸರ್ಜಾಪುರ ನಗರಸಭೆಯ ನಾಲ್ಕು ವಾರ್ಡ್‌ಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಿದ್ದು, ಪ್ರತಿ ದಿನ 4400 ರೂ. ವೆಚ್ಚ ಮಾಡಿ ಜಿಲ್ಲಾ ಪಂಚಾಯಿತಿ ನೀರು ಪೂರೈಸುತ್ತಿದೆ. ಬೆಂಗಳೂರು ಉತ್ತರ ತಾಲೂಕಿನ ರಾಜಾನುಕುಂಟೆ ಮತ್ತು ಚಿಕ್ಕಬಾಣಾವರ ಗ್ರಾ.ಪಂ ವ್ಯಾಪ್ತಿಯ ಗ್ರಾಮಗಳಲ್ಲೂ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. ‘ಬಹು ಗ್ರಾಮಗಳ ಕುಡಿಯುವ ನೀರಿನ ಯೋಜನೆ’ಗಾಗಿ ಬೆಂಗಳೂರು ಜಿಲ್ಲಾಡಳಿತ, ಬೆಂಗಳೂರು ಜಲಮಂಡಳಿಯಲ್ಲಿ ಸುಮಾರು 42 ಕೋಟಿ ರೂ.ನಿಶ್ಚಿತ ಠೇವಣಿ ಇಟ್ಟಿದೆ ಎಂದು ಬೆಂಗಳೂರು ನಗರ ಜಿ.ಪಂ ನೀರು ಸರಬರಾಜು ವಿಭಾಗದ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
Advertisement
‘ತುರ್ತು ಕುಡಿಯುವ ನೀರಿನ ಯೋಜನೆ’ ಅಡಿ ರಾಜ್ಯ ಸರ್ಕಾರ ಈಗಾಗಲೇ ಆನೇಕಲ್ ತಾಲೂಕಿಗೆ 1 ಕೋಟಿ ರೂ., ಬೆಂಗಳೂರು ದಕ್ಷಿಣ ಮತ್ತು ಉತ್ತರ ತಾಲೂಕುಗಳಿಗೆ ತಲಾ 50 ಲಕ್ಷ ರೂ. ಮಂಜೂರು ಮಾಡಿದ್ದು, ಅಗತ್ಯ ಇರುವ ಕಡೆ ಟ್ಯಾಂಕರ್‌ಗಳ ಮೂಲಕ ನೀರು ಪೂರೈಸಲು ಜಿಲ್ಲಾಡಳಿತ ಕ್ರಮ ಕೈಗೊಂಡಿದೆ.
ಬೆಂಗಳೂರು ನಗರ ಜಿಲ್ಲೆಯ ನಾಲ್ಕು ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಿಸಿದೆ. ಆ ಪೈಕಿ ಕುಡಿಯುವ ನೀರಿನ ತೀವ್ರ ಸಮಸ್ಯೆ ಇರುವ ಎರಡು ತಾಲೂಕುಗಳ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ.
● ಅರ್ಚನಾ, ನಗರ ಜಿ.ಪಂ ಸಿಇಒ
● ಅರ್ಚನಾ, ನಗರ ಜಿ.ಪಂ ಸಿಇಒ