Advertisement

ಟ್ಯಾಂಕರ್‌, ನಳ್ಳಿ ನೀರು ಪೂರೈಕೆಯಿಂದ ಶೇ.50 ಸಮಸ್ಯೆ ಪರಿಹಾರ

12:05 AM May 15, 2019 | Team Udayavani |

ಉಡುಪಿ: ಒಳಕಾಡು ವಾರ್ಡ್‌ನಲ್ಲೂ ನೀರಿನ ಸಮಸ್ಯೆ ಕಾಡುತ್ತಿದೆ. 3 ದಿನಕ್ಕೊಮ್ಮೆ ನೀರು ಎಂದು ಕೆಲವರು ಹೇಳಿದರೆ 5-6ದಿನಕ್ಕೊಮ್ಮೆ ನೀರು ಬರುತ್ತದೆ ಎಂದು ಹಲವಾರು ಮಂದಿ ಹೇಳಿಕೊಂಡರು.

Advertisement

ಒಳಕಾಡು ಸರಕಾರಿ ಶಾಲೆ ಸಮೀಪ ಹಾಗೂ ರಂಗರಾವ್‌ ಲೇನ್‌ ಪ್ರದೇಶದಲ್ಲಿಯೂ ನೀರಿನ ಸಮಸ್ಯೆ ಇದೆ. ಕುಡಿಯಲು 3 ದಿನಕ್ಕೊಮ್ಮೆ ಬರುವ ನಳ್ಳಿ ನೀರನ್ನು ಉಪಯೋಗಿಸುತ್ತೇವೆ ಎನ್ನುತ್ತಾರೆ ಇಲ್ಲಿನ ನಿವಾಸಿಗಳು.

ಜ್ವರ ಬಾಧೆಯ ಭೀತಿ
ಕುಡಿಯುವ ಬಾವಿ ನೀರು ಕಲುಷಿತಗೊಂಡಿದೆ. ಇದರಿಂದ ಪರಿಸರದಲ್ಲಿ ರೋಗ-ರುಜಿನ ಹರಡುವ ಭೀತಿಯೂ ಇದೆ. ಮಕ್ಕಳಿಗೆ ಈಗಾಗಲೇ ಎರಡು ಬಾರಿ ಜ್ವರ ಬಂದಿದೆ. ನೀರು ಶುದ್ಧೀಕರಣ ಪ್ರಕ್ರೀಯೆನ್ನಾದರೂ ನಗರಸಭೆ ಕೈಗೊಂಡಿದ್ದರೆ ಚೆನ್ನಾಗಿತ್ತು ಎನ್ನುತ್ತಾರೆ ರಂಗರಾವ್‌ ಲೇನ್‌ ನಿವಾಸಿ ಶಾರದಾ.

ಬಾವಿ ನೀರೇ ಆಧಾರ
10 ವರ್ಷಗಳಿಂದ ಇಲ್ಲಿ ವಾಸಿಸುತ್ತಿದ್ದೇವೆ. ಈತನಕ ನಮಗೆ ನೀರಿನ ಸಮಸ್ಯೆ ಆಗಲಿಲ್ಲ. ನಗರಸಭೆಯ ನೀರಿನ ಸಂಪರ್ಕವನ್ನೂ ನಾವು ಪಡೆದಿಲ್ಲ. ಬಾವಿ ನೀರೇ ನಮಗೆ ಆಶ್ರಯ. ನಮ್ಮಲ್ಲಿರುವ ಜಲಮೂಲವನ್ನು ರಕ್ಷಿಸಿದರೆ ನೀರಿನ ಸಮಸ್ಯೆಯೇ ಉದ್ಭವಿಸುವುದಿಲ್ಲ ಎಂದು ಮನವರಿಕೆ ಮಾಡುತ್ತಾರೆ ಸ್ಥಳೀಯರಾದ ಕಿರಣ್‌. ಪಿಪಿಸಿ, ಕೋರ್ಟ್‌ ರಸ್ತೆ ಭಾಗದಲ್ಲಿ ನೀರಿನ ಸಮಸ್ಯೆ ಅಧಿಕವಾಗಿದೆ. ಕೆಲವೆಡೆ ಒಂದು ವಾರವಾದರೂ ನೀರು ಬಂದಿಲ್ಲ ಎಂದು ಇಲ್ಲಿನ ನಿವಾಸಿಗಳು ತಿಳಿಸುತ್ತಾರೆ.

ತುಸು ನಿವಾರಣೆ
ಆರು ದಿನಗಳಿಂದ ನೀರು ಇರಲಿಲ್ಲ. ಆದರೆ ಟ್ಯಾಂಕರ್‌ ನೀರು ಪೂರೈಕೆ ಆರಂಭಗೊಂಡ ಅನಂತರ ತಕ್ಕ ಮಟ್ಟಿಗೆ ಸಮಸ್ಯೆ ಬಗೆಹರಿದಿದೆ. ಟ್ಯಾಂಕರ್‌ ನೀರಿನ ಪೂರೈಕೆಯನ್ನು ಮಾರ್ಚ್‌ ತಿಂಗಳಲ್ಲೇ ಆರಂಭಿಸಿದ್ದರೆ ಯಾವುದೇ ಸಮಸ್ಯೆ ಉದ್ಭವಿಸುತ್ತಿರಲಿಲ್ಲ ಎನ್ನುತ್ತಾರೆ ವಾರ್ಡ್‌ ನಿವಾಸಿ ಶಾಂತಾ.

Advertisement

ಬಾವಿಗಳ ಶುಚಿತ್ವ ಅಗತ್ಯ
ವಾರ್ಡ್‌ಗಳಲ್ಲಿರುವ ಬಹುತೇಕ ಬಾವಿಗಳ ನೀರು ಕಲುಷಿತಗೊಂಡಿವೆ. ಕೆಲವೆಡೆ ನೀರು ಇದ್ದೂ ಇಲ್ಲದಂತಾಗಿದೆ. ಇನ್ನು ಕೆಲವೆಡೆ ಬಾವಿಗಳ ನೀರು ಕೂಡ ಬತ್ತಿಹೋಗಿವೆ.

ಕೆಲವೆಡೆ ಬಾವಿ ನೀರಿನಲ್ಲಿ ಎಲೆಗಳು ಸಹಿತ ಕಸಕಡ್ಡಿಗಳು ತುಂಬಿ ಪ್ರಯೋಜನಕ್ಕಿಲ್ಲವಾಗಿದೆ. ಬಾವಿಗಳ ನಿರ್ವಹಣೆಯನ್ನು ಮಾಡಿದರೆ ಕೂಡ ಕೆಲವು ಮನೆಗಳ ಉಪಯೋಗಕ್ಕೆ ಯಾವುದೇ ತೊಂದರೆಯಾಗದ ರೀತಿ ನೀರನ್ನು ಬಳಸಬಹುದು. ನಳ್ಳಿ ನೀರನ್ನೇ ಅವಲಂಬಿಸುವ ಪ್ರಮೇಯವೂ ದೂರವಾಗುತ್ತದೆ.

ನಗರಸಭೆಯ ನೀರಿನ ಸಂಪರ್ಕ ನಮಗಿಲ್ಲ. ಲಭ್ಯ ಇರುವ ಬಾವಿಯ ನೀರನ್ನೇ ಉಪಯೋಗಿಸುತ್ತಿದ್ದೇವೆ. ಇಲ್ಲಿತನಕ ನಳ್ಳಿ ನೀರು ಉಪಯೋಗಿಸಿಲ್ಲ. ಬಾವಿಯ ನೀರೇ ನಮಗೆ ಆಧಾರವಾಗಿದೆ ಎನ್ನುತ್ತಾರೆ ಇಲ್ಲಿನ ನಿವಾಸಿ ಶೇಖರ.

ನೀರಿಲ್ಲದೆ 6 ದಿನ
ನಮಗೆ ಕಳೆದ 6 ದಿನಗಳಿಂದ ನೀರೇ ಬಂದಿಲ್ಲ. ಈ ಬಗ್ಗೆ ನಗರಸಭೆಗೆ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಟ್ಯಾಂಕರ್‌ ನೀರು ಪೂರೈಕೆಯ ಅನಂತರ ಸಮಸ್ಯೆ ತುಸು ಕಡಿಮೆಯಾಗಿದೆ. ನೀರಿನ ಸಮಸ್ಯೆಗೆ ತುರ್ತಾಗಿ ಸ್ಪಂದಿಸುವುದು ಅಗತ್ಯವಾಗಿದೆ ಎಂದು ಮಾಹಿತಿ ನೀಡುತ್ತಾರೆ ಪಿಪಿಸಿ ಸಮೀಪದ ನಿವಾಸಿ ಗಂಗಾಧರ.

ಟ್ಯಾಂಕರ್‌ ನೀರು ಪೂರೈಕೆ
ಕಳೆದ 6 ದಿನಗಳಿಂದ ಪ್ರತಿದಿನ 15 ಸಾವಿರ ಲೀ. ಟ್ಯಾಂಕರ್‌ ನೀರನ್ನು ಸ್ವತಃ ವೆಚ್ಚ ಹಾಗೂ ಶಾಸಕರ ಸಹಕಾರದಿಂದ ಪೂರೈಸಲಾಗುತ್ತಿದೆ. ನಗರಸಭೆಯಿಂದ ಒಂದು ಬಾರಿ ಟ್ಯಾಂಕರ್‌ ನೀರು ಪೂರೈಕೆಯಾಗಿದೆ. ಶುಕ್ರವಾರ ನಳ್ಳಿ ನೀರು ಬಂದಿದ್ದು ಸಮಸ್ಯೆ ತಕ್ಕ ಮಟ್ಟಿಗೆ ಸುಧಾರಿಸಿದೆ. ಮುಂದಿನ ದಿನಗಳಲ್ಲಿ ಬೇಡಿಕೆಗೆ ಅನುಗುಣವಾಗಿ ಟ್ಯಾಂಕರ್‌ ನೀರು ಪೂರೈಸಲಾಗುವುದು.
-ರಜನಿ ಹೆಬ್ಟಾರ್‌, ಒಳಕಾಡು ವಾರ್ಡ್‌ ಸದಸ್ಯರು

ಜನರ ಬೇಡಿಕೆಗಳು
– ಅಗತ್ಯವಿರುವ ಕಡೆಗಳಿಗೆ ನೀರು ಪೂರೈಸಿ
– ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಿ
– ಬಾವಿಗಳ ದುರಸ್ತಿಗೆ ಕ್ರಮಕೈಗೊಳ್ಳಿ
– ಟ್ಯಾಂಕರ್‌ ನೀರು ಎಲ್ಲರಿಗೂ ಸಿಗಲಿ

– ಪುನೀತ್‌ ಸಾಲ್ಯಾನ್‌

Advertisement

Udayavani is now on Telegram. Click here to join our channel and stay updated with the latest news.

Next