ವಿಟ್ಲ : ವಿಟ್ಲ ಪ.ಪಂ. ವ್ಯಾಪ್ತಿಯ ಅನಿಲಕಟ್ಟೆ ಸಾಗುವ ದಾರಿಯಲ್ಲಿ ಎರಡು ಕಳಪೆ ಕಾಮಗಾರಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನೀರು ಸಂಗ್ರಹಿಸುವ ಟ್ಯಾಂಕ್ ವರ್ಷ ಪೂರ್ತಿಯಾಗುವ ಮೊದಲೇ ಸೋರುತ್ತಿದೆ ಹಾಗೂ ಪೂರ್ಣ ಗೊಂಡ ರಸ್ತೆ ಅಗೆದು ಮೋರಿ ನಿರ್ಮಿಸಿದ್ದು, ಕಾಮಗಾರಿ ಕಳಪೆಯಾಗಿದೆ.
ರಸ್ತೆಗೆ ಮೋರಿ
ವಿಟ್ಲ ಸಮೀಪದ ಕಡಂಬುವಿನಿಂದ ಅನಿಲಕಟ್ಟೆಗೆ ಸಾಗುವ ರಸ್ತೆಯಲ್ಲಿ ಈ ಎರಡೂ ಕಾಮಗಾರಿಗಳು ಸಿಗುತ್ತವೆ. ಸುಮಾರು 100 ಮೀ.ಉದ್ದದ ಕಾಂಕ್ರೀಟ್ ರಸ್ತೆ ತಿರುವಿಗೆ ಮುಕ್ತಾಯ ಗೊಳ್ಳುತ್ತದೆ. ಬಳಿಕ ಡಾಮರು ರಸ್ತೆ ಆರಂಭವಾಗುತ್ತದೆ. ಅಚ್ಚುಕಟ್ಟಾಗಿ ರಸ್ತೆ ಅಭಿವೃದ್ಧಿ ಮಾಡಲಾಗಿದೆ. ಅದೇ ರಸ್ತೆಗಳು ಸೇರುವ ಜಾಗವನ್ನು ಅಗೆದು ಅಡ್ಡ ಮೋರಿ ನಿರ್ಮಾಣದ ಕಾಮಗಾರಿ ನಡೆಸಲಾಗುತ್ತಿದೆ. ಸ್ಥಳೀಯರು ಹೇಳುವ ಪ್ರಕಾರ ಮೋರಿಗೆ ಬಳಸಿದ ಪೈಪ್ ಕಳಪೆ ಗುಣಮಟ್ಟದ್ದಾಗಿತ್ತು. ಈ ಪೈಪನ್ನು ತೆಗೆಯದೇ ಇದ್ದಲ್ಲಿ ಕಾಮಗಾರಿ ನಡೆಸಲು ಬಿಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದಾಗ ಹೊಸ ಪೈಪನ್ನು ಖರೀದಿಸಿ, ಪೈಪನ್ನು ಜೋಡಿಸಿ, ರಸ್ತೆಗೆ ಮಣ್ಣು ಮುಚ್ಚಲಾಯಿತು. ಆದರೆ ಅದರ ಎರಡೂ ಬದಿಯಲ್ಲಿ ನಿರ್ಮಿಸಿರುವ ತಡೆಗೋಡೆ ಕಳಪೆ ಯಾಗಿದೆ.
ಮಣ್ಣಿನ ಮೇಲೆ ಕಾಂಕ್ರೀಟ್ ಸುರಿಯಲಾಗಿದೆ. ಪೂರ್ಣಗೊಂಡ ರಸ್ತೆಯನ್ನು ಮತ್ತೆ ಅಗೆಯುವುದು ಸರಿಯೇ ? ಮುನ್ನೆಚ್ಚರಿಕೆ ವಹಿಸಿ, ರಸ್ತೆ ಕಾಮಗಾರಿ ಮುನ್ನವೇ ಮೋರಿ ಹಾಕುವ ಕಾಮಗಾರಿ ಕೈಗೊಳ್ಳದಿದ್ದುದು ಏಕೆ ? ಆಗ ರಸ್ತೆ ಸುಸಜ್ಜಿತವಾಗಿಯೇ ಇರುತ್ತಿರಲಿಲ್ಲವೇ ? ಇದೀಗ ಈ ರಸ್ತೆ ಇನ್ನಷ್ಟು ಕೆಡುವು ದಿಲ್ಲವೇ ? ಇದಕ್ಕೇನು ಪರಿಹಾರ ಎಂದು ನಾಗರಿಕರು ಪ್ರಶ್ನಿಸಿದ್ದಾರೆ.
– ಉದಯಶಂಕರ್ ನೀರ್ಪಾಜೆ