ಬೆಂಗಳೂರು: ಕಂಟೋನ್ಮೆಂಟ್ ರೈಲು ನಿಲ್ದಾಣದ ಜಂಕ್ಷನ್ ಸುತ್ತ ಕನಿಷ್ಠ ಮೂಲ ಸೌಲಭ್ಯಗಳು ಇಲ್ಲದೆ ಪಾದಚಾರಿಗಳು ತೊಂದರೆ ಅನುಭವಿಸುವಂತಾಗಿದೆ. 4 ದಿಕ್ಕುಗಳಿಂದ ವಾಹನಗಳು ಬಂದು ಸೇರುವ ಪ್ರಮುಖ ಜಂಕ್ಷನ್‌ನಲ್ಲಿ ದಟ್ಟಣೆ ಉಂಟಾಗುವುದು ಒಂದೆಡೆಯಾದರೆ, ಪಾದಚಾರಿಗಳು ಒಂದು ಕಡೆಯಿಂದ ಮತ್ತೂಂದು ಕಡೆ ನಡೆದು ಹೋಗಲಾಗದ ಪರಿಸ್ಥಿತಿಯಿದೆ. ಇರುವ ಪಾದಚಾರಿ ಮಾರ್ಗ ಕೆಲವಡೆ ಮೂತ್ರ ವಿಸರ್ಜನೆಗೆ ಬಳಕೆಯಾದರೆ, ಮತ್ತೆ ಕೆಲವೆಡೆ ಮಳಿಗೆಗಳನ್ನು
ನಿರ್ಮಿಸಿಕೊಳ್ಳಲಾಗಿದೆ.
ದಂಡು ರೈಲು ನಿಲ್ದಾಣಕ್ಕೆ ಮಿಲ್ಲರ್ ರಸ್ತೆ, ಮೌಂಟ್ ಕಾರ್ಮೆಲ್ ಕಾಲೇಜು ಹಾಗೂ ಹೈಗ್ರೌಂಡ್ ಪೊಲೀಸ್ ಠಾಣೆ ಕಡೆಯಿಂದ ಬರುವ ರಸ್ತೆಗಳ ಪಾದಚಾರಿ ಮಾರ್ಗಗಳು ಉತ್ತಮ ಸ್ಥಿತಿಯಲ್ಲಿವೆ. ಆದರೆ, ಒಂದು ಬದಿಯ ಮಾರ್ಗವನ್ನು ಬಹುತೇಕ ಕಡೆ ವ್ಯಾಪಾರಿಗಳು ವಾಹನ ನಿಲುಗಡೆಗೆ ಬಳಸುತ್ತಿದ್ದು, ಜಯಮಹಲ್ ಕಡೆಗೆ ಹೋಗುವ ಮಾರ್ಗದಲ್ಲಿನ ರೈಲ್ವೆ ಅಂಡರ್‌ಪಾಸ್‌ನಿಂದ ರೈಲು ನಿಲ್ದಾಣದವರೆಗೆ ಪಾದಚಾರಿ ಮಾರ್ಗವೇ ಇಲ್ಲ! ಮಿಲ್ಲರ್ ರಸ್ತೆ, ಮೌಂಟ್ ಕಾರ್ಮೆಲ್ ಕಾಲೇಜು ಹಾಗೂ ಅಂಬೇಡ್ಕರ್ ಭವನ ಕಡೆಯಿಂದ ರೈಲು ನಿಲ್ದಾಣ ತಲುಪಬೇಕಾದರೆ, ಕನಿಷ್ಠ 10 ನಿಮಿಷ ಬೇಕು. ನಾಲ್ಕೂ ರಸ್ತೆಗಳಲ್ಲಿ ಸಿಗ್ನಲ್ ಅಳವಡಿಸ ಲಾಗಿದೆ. ಆದರೆ, ಒಂದಲ್ಲ ಒಂದು ಸಿಗ್ನಲ್ ಬಿಟ್ಟು ವಾಹನಗಳು ಮೂರು ದಿಕ್ಕುಗಳಿಗೆ ಚಲಿಸುವುದ ರಿಂದ ಜನ ರಸ್ತೆ ದಾಟಲು ಪರದಾಡುತ್ತಾರೆ.
ಬಯಲಲ್ಲೇ ಮೂತ್ರ ವಿಸರ್ಜನೆ: ದಂಡು ರೈಲು ನಿಲ್ದಾಣಕ್ಕೆ ನಿತ್ಯ ಹತ್ತಾರು ಸಾವಿರ ಜನರು ಬಂದು ಹೋಗುತ್ತಾರೆ. ಆದರೆ, ನಿಲ್ದಾಣದ ಹೊರಗೆ ನಾಲ್ಕು ಕಮೋಡ್ ಇರುವ ಶೌಚಗೃಹವಿದ್ದು, ನಿರ್ವಹಣೆ ಸಮರ್ಪಕವಾಗಿಲ್ಲ. ಸುತ್ತ 500 ಮೀಟರ್ ವ್ಯಾಪ್ತಿಯಲ್ಲಿ ಒಂದೂ ಶೌಚಾಲಯ ಇಲ್ಲದ ಕಾರಣ, ಜನ ಬಯಲಲ್ಲೇ ಮೂತ್ರ ಮಾಡುತ್ತಾರೆ ಮೇಲ್ಸೇತುವೆ ನಿರ್ಮಾಣ ನಿಧಾನ ದಂಡು ರೈಲು ನಿಲ್ದಾಣದ ಬಳಿ ಪಾದಚಾರಿ ಮೇಲ್ಸೇತುವೆ ನಿರ್ಮಿಸುವ ಕೆಲಸ ಆರಂಭಿಸಿ ಹಲವು ತಿಂಗಳು ಕಳೆದರೂ ಕಾಮಗಾರಿ ವೇಗ ಪಡೆದುಕೊಂಡಿಲ್ಲ. ಜತೆಗೆ ಇದು ಕೇವಲ ಒಂದು ರಸ್ತೆ ಮಾತ್ರ ದಾಟಲು ನಿರ್ಮಿಸುತ್ತಿರುವುದರಿಂದ ಹೆಚ್ಚಿನ ಅನುಕೂಲವಾಗುವುದಿಲ್ಲ.
ಸಮಸ್ಯೆಗೆ ಶಾಶ್ವತ ಪರಿಹಾರವೇನು?
ನಿತ್ಯ ಲಕ್ಷಾಂತರ ವಾಹನಗಳು ಸಂಚರಿಸುವ ಕಾರಣ ರೈಲು ನಿಲ್ದಾಣಕ್ಕೆ ಸಂಪರ್ಕಿಸುವ ಪಾದಚಾರಿ ಮೇಲ್ಸೇತುವೆ ನಿರ್ಮಾಣಕ್ಕೆ ಪಾಲಿಕೆ ಮುಂದಾಗಬೇಕು. ಅದರಂತೆ ನಾಲ್ಕು ರಸ್ತೆಗಳಿಂದ ಬರುವ ಜನರಿಗೆ ಅನುಕೂಲವಾಗುವಂತೆ ಒಂದು
ನಿರ್ದಿಷ್ಟ ಸ್ಥಳದಿಂದ ನಿಲ್ದಾಣದವರೆಗೆ ಸುರಕ್ಷಿತವಾಗಿ ಸಂಚರಿಸಲು ಅವಕಾಶ ಕಲ್ಪಿಸಬೇಕು.
ಜಂಕ್ಷನ್ ಸಮೀಪವಿರುವ ಪ್ರಮುಖ ಸಂಸ್ಥೆ, ಭವನಗಳು ಅಂಬೇಡ್ಕರ್ ಭವನ, ದೇವರಾಜ ಅರಸು ಭವನ, ಭಗವಾನ್
ಮಹಾವೀರ ಆಸ್ಪತ್ರೆ, ಜಯಮಹಲ್, ನೈರುತ್ಯ ರೈಲ್ವೆ ಆರೋಗ್ಯ ಕೇಂದ್ರ, ಹೈಗ್ರೌಂಡ್ಸ್ ಪೊಲೀಸ್ ಠಾಣೆ, ಮೌಂಟ್ ಕಾರ್ಮೆಲ್ ಕಾಲೇಜು, ಮಜೀದ್ ಎ ಖಾದ್ರಿ, ದೂರದರ್ಶನ ಚಂದನ, ಜುಮ್ಮಾ ಮಸೀದಿ, ವಿವಿಧ ಸರ್ಕಾರಿ ಕಚೇರಿಗಳು, ಶಾಲೆ, ಕಾಲೇಜುಗಳ ಜತೆ, ಯು.ಟಿ.ಖಾದರ್, ವೆಂಕಟರಮಣ ನಾಡಗೌಡ, ಜಮೀರ್ ಅಹಮದ್ ಖಾನ್ ಸೇರಿ ಪ್ರಮುಖರ ನಿವಾಸಗಳಿವೆ.
ಅಡ್ಡಾದಿಡ್ಡಿ ನುಗ್ಗುವ ವಾಹನಗಳು ಜಂಕ್ಷನ್‌ನಲ್ಲಿ ವಾಹನಗಳು ಅಡ್ಡಾದಿಡ್ಡಿ ನುಗ್ಗುವುದರಿಂಧ ಪಾದಚಾರಿಗಳು ತೊಂದರೆ ಅನುಭವಿಸುತ್ತಾರೆ. ದ್ವಿಚಕ್ರ ವಾಹನ ಸವಾರರು ವಿರುದ್ಧ ದಿಕ್ಕಿನಲ್ಲಿ ಸಂಚರಿಸುವುದು ಇಲ್ಲಿ ಸಾಮಾನ್ಯ. ಜಯಮಹಲ್ ರಸ್ತೆಯಿಂದ ಬರುವ ವಾಹನಗಳು ರೈಲ್ವೆ ಅಂಡರ್‌ಪಾಸ್‌ನಿಂದ ಬಂದು ಎಡ ತಿರುವು ಪಡೆಯುವ ಸ್ಥಳದಲ್ಲಿ ಮೌಂಟ್ ಕಾರ್ಮೆಲ್ ಹಾಗೂ ಅಂಬೇಡ್ಕರ್ ಭವನದ ಕಡೆಯಿಂದ ಬಂದು ಫ್ರೆಜರ್‌ಟೌನ್ ಕಡೆಗೆ ಹೋಗುವ ವಾಹನಗಳೂ ಸೇರುತ್ತವೆ. ಜತೆಗೆ ಜಯಮಹಲ್ ನಿಂದ ಬರುವ ವಾಹನಗಳು ಸಹ ಅದೇ ಮಾರ್ಗದಲ್ಲಿ ಯುಟನ್ ಪಡೆಯುತ್ತಿದ್ದು, ತೀವ್ರ ದಟ್ಟಣೆ ಉಂಟಾಗುತ್ತದೆ.
ವೆಂ.ಸುನೀಲ್‌ಕುಮಾರ್