Advertisement

ತಾಂಡಾ ಮಕ್ಕಳ ಕಲಿಕೆಗಿಲ್ಲ ಅಂಗನವಾಡಿ ಅಂಗಳ

10:50 AM Mar 28, 2022 | Team Udayavani |

ವಾಡಿ: ಪೂರ್ವ ಪ್ರಾಥಮಿಕ ಶಿಕ್ಷಣ ಕಲಿಕೆ ಜತೆಗೆ ಮಕ್ಕಳ ದೈಹಿಕ ಆರೋಗ್ಯ ಕಾಪಾಡುವ ಮತ್ತು ಅಪೌಷ್ಟಿಕತೆ ಅಳಿಸುವ ಉದ್ದೇಶದಿಂದ ಸರ್ಕಾರ ಮಹಿಳಾ ಮತ್ತು ಕಲ್ಯಾಣ ಅಭಿವೃದ್ಧಿ ಇಲಾಖೆ ಸ್ಥಾಪಿಸಿದೆ. ಬಡಾವಣೆಗೊಂದು ಅಂಗನವಾಡಿ ಕೇಂದ್ರ ತೆರೆದು ಮಕ್ಕಳಿಗೆ ಪೋಷಕಾಂಶ ಭರಿತ ಆಹಾರ ವಿತರಿಸುತ್ತಿದೆ. ಆದರೆ, ಇದಕ್ಕೆ ಅಪವಾದ ಎಂಬಂತೆ ಚಿತ್ತಾಪುರ ತಾಲೂಕಿನ ತಾಂಡಾವೊಂದರ ಮಕ್ಕಳು ಅಂಗನವಾಡಿ ಸೌಲಭ್ಯದಿಂದ ವಂಚಿತರಾಗಿದ್ದಾರೆ.

Advertisement

ಕಮರವಾಡಿ ಗ್ರಾಪಂ ವ್ಯಾಪ್ತಿಯ ಮೌಳಿ ತಾಂಡಾದಲ್ಲಿ ಲಂಬಾಣಿ ಸಮುದಾಯದ ನೂರಾರು ಕುಟುಂಬಗಳು ವಾಸ ಮಾಡುತ್ತಿವೆ. ಕೃಷಿ ಕೆಲಸವನ್ನೇ ಅವಲಂಬಿಸಿರುವ ಇಲ್ಲಿನ ತಾಂಡಾ ಜನರ ಮಕ್ಕಳಿಗಾಗಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ತೆರೆಯಲಾಗಿದೆ. ಗ್ರಾಪಂ ಕೇಂದ್ರ ಸ್ಥಾನವಾದ ಕಮರವಾಡಿ ಗ್ರಾಮದಿಂದ ಮೂರು ಕಿ.ಮೀ ಅಂತರದಲ್ಲಿರುವ ಈ ತಾಂಡಾಕ್ಕೆ ಹೋಗಲು ಕಚ್ಚಾ ರಸ್ತೆ ನಿರ್ಮಿಸಲಾಗಿದೆ. ಇಲ್ಲಿ ಆರು ವರ್ಷದೊಳಗಿನ ಸುಮಾರು 30ಕ್ಕೂ ಹೆಚ್ಚು ಮಕ್ಕಳಿರುವುದು ಸ್ಥಳೀಯರಿಂದ ತಿಳಿದುಬಂದಿದೆ.

ಕಿರಿಯ ಪ್ರಾಥಮಿಕ ಶಾಲೆಗೆ ಸೌಲಭ್ಯ ಒದಗಿಸಿಕೊಟ್ಟ ಸರ್ಕಾರ, ಪುಟಾಣಿ ಮಕ್ಕಳ ಅಕ್ಷರ ಕಲಿಕೆಗಾಗಿ ಮತ್ತು ದೈಹಿಕ ಅಪೌಷ್ಟಿಕತೆ ನಿವಾರಣೆಗಾಗಿ ಅಂಗನವಾಡಿ ಕೇಂದ್ರ ತೆರೆಯದೇ ಅನ್ಯಾಯ ಮಾಡಿದೆ. ಬೆಳಗಾದರೆ ಸಾಕು ಪೋಷಕರು ಕಾಯಕ ಬೆನ್ನಟ್ಟಿ ಜಮೀನುಗಳಿಗೆ ಹೋದರೆ, ಆರು ವರ್ಷ ಮೇಲ್ಪಟ್ಟ ಮಕ್ಕಳು ಶಾಲೆಗೆ ಹೋಗುತ್ತಾರೆ. ಇನ್ನುಳಿದ ಐದು ವರ್ಷದೊಳಗಿನ ಮಕ್ಕಳು ತಾಂಡಾ ಪರಿಸರದ ಗಿಡ, ಮರಗಳ ಕೆಳಗೆ ಆಟವಾಡಿ ಮಲಗುತ್ತಿವೆ.

ಮಣ್ಣು -ಮರಳಿನಲ್ಲಿ ಹೊರಳಾಡಿ ಅನಾಥರಂತೆ ಕುಳಿತು ದಿನಗಳೆಯುತ್ತಾರೆ. ಇವರಿಗಾಗಿ ಅಂಗನವಾಡಿ ಕೇಂದ್ರವೊಂದು ಇದ್ದಿದ್ದರೆ ಊಟದ ಜತೆಗೆ ಆಟವನ್ನು ಅಪ್ಪಿಕೊಂಡಿರುತ್ತಿದ್ದರು. ದುರಾದೃಷ್ಟವೆಂದರೆ ಮೌಳಿ ತಾಂಡಾ ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ಕಮರವಾಡಿ ಗ್ರಾಪಂ ಆಡಳಿತವಾಗಲಿ ಅಥವಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳಾಗಲಿ ಕಿಂಚಿತ್ತೂ ಚಿಂತಿಸಿಲ್ಲ.

Advertisement

ಅಂಗನವಾಡಿ ಕೇಂದ್ರ ತೆರೆಯಲು ಎಲ್ಲ ಸಾಧ್ಯತೆಗಳಿದ್ದರೂ ಇಲಾಖೆಗಳು ಮನಸ್ಸು ಮಾಡಿಲ್ಲ. ನಮ್ಮ ಮಕ್ಕಳಿಗೆ ಅಂಗನವಾಡಿ ಸೌಲಭ್ಯ ಯಾಕಿಲ್ಲ ಎಂಬುದು ಅರ್ಥವಾಗುತ್ತಿಲ್ಲ ಎಂದು ತಾಂಡಾ ನಿವಾಸಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಬಂಜಾರಾ ಜನಾಂಗದವರೇ ಹೆಚ್ಚಾಗಿ ವಾಸಿಸುವ ಮೌಳಿ ತಾಂಡಾ, ಕಮರವಾಡಿ ಗ್ರಾಮ ಸಮೀಪದಲ್ಲಿದೆ. ಅಲ್ಲಿರುವ ಒಟ್ಟು ಮಕ್ಕಳ ಮಾಹಿತಿ ಸಂಗ್ರಹ ಮಾಡಿದ್ದೇವೆ. 25ರಿಂದ 30 ಮಕ್ಕಳು ಅಂಗನವಾಡಿ ಶಿಕ್ಷಣ ಪಡೆಯಲು ಅರ್ಹರಾಗಿದ್ದಾರೆ. ತಾಂಡಾದಲ್ಲಿ ಅಂಗನವಾಡಿ ಕೇಂದ್ರ ಸ್ಥಾಪಿಸುವ ಅಗತ್ಯವಿರುವುದನ್ನು ಗಮನಿಸಿದ್ದೇನೆ. ಈ ಕುರಿತು ಆರು ತಿಂಗಳ ಹಿಂದೆಯೇ ಮೇಲ ಧಿಕಾರಿಗಳಿಗೆ ಪತ್ರ ಬರೆದು ಮೌಳಿ ತಾಂಡಾ, ಸೂಲಹಳ್ಳಿ ಮತ್ತು ಚಾಮನೂರಿಗೆ ಅಂಗನವಾಡಿ ಕೇಂದ್ರಗಳ ಅತ್ಯವಶ್ಯಕವಿದೆ ಎಂಬುದನ್ನು ವಿವರಿಸಿದ್ದೇನೆ. ಇದಕ್ಕೆ ಇನ್ನೂ ಪ್ರತಿಕ್ರಿಯೆ ಬಂದಿಲ್ಲ. -ಇಂದಿರಾ ಕುಲಕರ್ಣಿ, ಅಂಗನವಾಡಿ ಮೇಲ್ವಿಚಾರಕಿ

-ಮಡಿವಾಳಪ್ಪ ಹೇರೂರ

Advertisement

Udayavani is now on Telegram. Click here to join our channel and stay updated with the latest news.

Next