ಹೊಸದಿಲ್ಲಿ : ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕೈಲಾಸ ಮಾನಸ ಸರೋವರ ಯಾತ್ರೆಯನ್ನು ತಾನು ಚೀನ ಮಾರ್ಗವಾಗಿ ಕೈಗೊಳ್ಳುವುದಾಗಿ ಬಿಜೆಪಿ ವ್ಯಂಗ್ಯದಿಂದ ಟೀಕಿಸಿರುವುದಕ್ಕೆ ಪ್ರತಿಯಾಗಿ ರಾಹುಲ್ ತಮ್ಮ ಈ ಪವಿತ್ರ ಯಾತ್ರೆಯ ಮೊದಲ ಚರಣದಲ್ಲಿ ನಿನ್ನೆ ಶುಕ್ರವಾರ ತಡ ರಾತ್ರಿ ನೇಪಾಲ ರಾಜಧಾನಿ ಕಾಠ್ಮಂಡು ತಲುಪಿದರಲ್ಲದೆ, “ತಮಸೋಮಾ ಜ್ಯೋತಿರ್ಗಮಯಾ’ ಎಂಬ ಪ್ರಾರ್ಥನೆಯ ಶ್ಲೋಕವನ್ನು ಟ್ವೀಟ್ ಮಾಡಿದರು.
”ಚೀನ ಮಾರ್ಗವಾಗಿ ಕೈಲಾಸ ಮಾನಸ ಸರೋವರ ಯಾತ್ರೆಯನ್ನು ಕೈಗೊಳ್ಳುವ ರಾಹುಲ್ ಗಾಂಧಿ, ಚೈನೀಸ್ ಮ್ಯಾನ್ ಆಗಿದ್ದಾರೆ” ಎಂದು ಬಿಜೆಪಿ ನಾಯಕ ಸಂಬಿತ್ ಪಾತ್ರ ನಿನ್ನೆಯಷ್ಟೇ ಲೇವಡಿ ಮಾಡಿ, ‘ನೀವು ಚೈನೀಸ್ ಗಾಂಧಿಯೋ ರಾಹುಲ್ ಗಾಂಧಿಯೋ’ ಎಂದು ಪ್ರಶ್ನಿಸಿದ್ದರು.
ಬಿಜೆಪಿಯ ಟೀಕೆಗೆ ಉತ್ತರವೆಂಬಂತೆ ರಾಹುಲ್ ಗಾಂಧಿ ಅವರು ತಮ್ಮ ಟ್ವೀಟ್ ನಲ್ಲಿ ಭಗವಾನ್ ಶಿವನ ಪವಿತ್ರ ದಿವ್ಯ ಸನ್ನಿಧಿಯ ತಾಣವಾಗಿರುವ ಕೈಲಾಸ ಪರ್ವತದ ಚಿತ್ರವನ್ನು ಕೂಡ ಹಾಕಿದ್ದಾರೆ. ಜತೆಗೆ ಸಂಸ್ಕೃತದ ಪ್ರಸಿದ್ಧ ‘ಅಸತೋಮಾ ಸದ್ಗಮಯಾ’ ಎಂಬ ಪ್ರಾರ್ಥನಾ ಶ್ಲೋಕದ ಸಾಲನ್ನು ಕೂಡ ಬರೆದಿದ್ದಾರೆ. ಅಸತ್ಯದಿಂದ ಸತ್ಯದೆಡೆಗೆ ನಮ್ಮನ್ನು ನಡೆಸೆಂದು ದೇವರಲ್ಲಿ ಮಾಡುವ ಪ್ರಾರ್ಥನೆ ಇದಾಗಿದೆ.
ರಾಹುಲ್ ನೇಪಾಲದ ಕಾಠ್ಮಂಡುವಿನಿಂದ ವಿಮಾನದಲ್ಲಿ ನೇಪಾಲ್‌ಗಂಜ್‌ಗೆ ಪ್ರಯಾಣಿಸಿ ಅಲ್ಲಿಂದ ಟಿಬೆಟ್ ಗಡಿ ಸಮೀಪದಲ್ಲಿರುವ ಹಮ್ಲಾ ತಾಣಕ್ಕೆ ವಾಯು ಮಾರ್ಗವಾಗಿ ಪ್ರಯಾಣಿಸುವರು ಎಂದು ಮೂಲಗಳು ತಿಳಿಸಿವೆ.
ಈ ವರ್ಷ ಎಪ್ರಿಲ್‌ನಲ್ಲಿ ಕರ್ನಾಟಕ ವಿಧಾನಸಭಾ ಚುನಾವಣಾ ಪ್ರಚಾರದ ವೇಳೆ ತಾನು ಹುಬ್ಬಳ್ಳಿಗೆ ಪ್ರಯಾಣಿಸುತ್ತಿದ್ದ ವಿಮಾನವು ತಾಂತ್ರಿಕ ದೋಷಕ್ಕೆ ಗುರಿಯಾದಾಗ ಅದು ಪತನಗೊಳ್ಳುವ ಸಂಭವನೀಯ ದುರಂತದಿಂದ ರಾಹುಲ್ ಅದೃಷ್ಟವಶಾತ್ ಪಾರಾಗಿ ಬದುಕುಳಿದಿದ್ದರು. ಸಾವಿಗೆ ಅತ್ಯಂತ ಸನಿಹಕ್ಕೆ ತಲುಪಿ ಅಲ್ಲಿಂದ ಮರಳಿದ ಪವಾಡ ಸದೃಶ್ಯ ಅನುಭವದ ಕಾರಣ ರಾಹುಲ್ ಕೈಲಾಸ ಮಾನಸ ಸರೋವರ ಯಾತ್ರೆ ಕೈಗೊಳ್ಳುವ ಸಂಕಲ್ಪ ತಳೆದಿದ್ದರು. ಅದನ್ನೀಗ ಅವರು ಈಡೇರಿಸಿಕೊಳ್ಳುತ್ತಿದ್ದಾರೆ ಎಂದು ಮೂಲಗಳು ಹೇಳಿವೆ.