ತಮಿಳುನಾಡು: ಕಳ್ಳತನದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಮರಕ್ಕೆ ಕಟ್ಟಿ ಹಾಕಿ ಮನಬಂದಂತೆ ಹೊಡೆದು ಪ್ರಾಣವನ್ನೇ ತೆಗೆದ ಘಟನೆ ತಮಿಳುನಾಡಿನ ತಿರುಚ್ಚಿ-ಮದುರೈ ಹೆದ್ದಾರಿಯ ಮಣಿಗಂಡಂನಲ್ಲಿರುವ ಆಶಾಪುರದ ಸಾಮಿಲ್‌ನಲ್ಲಿ ನಡೆದಿದೆ.
ಇಲ್ಲಿನ ಸಾಮಿಲ್ ನಲ್ಲಿ ನೈಜೀರಿಯಾ ಮತ್ತು ಮ್ಯಾನ್ಮಾರ್‌ನಿಂದ ಆಮದು ಮಾಡಿಕೊಂಡಿರುವ ಉತ್ತಮ ಗುಣಮಟ್ಟದ ಮರವನ್ನು ಪೀಠೋಪಕರಣ ತಯಾರಿಸಲು ಇಲ್ಲಿ ಶೇಖರಿಸಿಟ್ಟಿದ್ದಾರೆ, ಅಲ್ಲದೆ ಈ ಮಿಲ್ ನಲ್ಲಿ ಅಸ್ಸಾಂ ಸೇರಿ ಹಲವು ರಾಜ್ಯದ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ ಅದರಂತೆ ಶನಿವಾರ ಬೆಳಿಗ್ಗೆ ಕಾರ್ಮಿಕರು ಕೆಲಸಕ್ಕೆ ಬರುವ ವೇಳೆ ಯಾರೋ ಒಬ್ಬ ಕಳ್ಳ ಮಿಲ್ ನ ಒಳಗೆ ನುಗ್ಗಲು ಯತ್ನಿಸಿದ್ದ ಎಂದು ಆತನನ್ನು ಹಿಡಿದು ಹಾಕಿದ್ದಾರೆ, ಆತ ಯಾವುದೋ ದೊಡ್ಡ ಮಟ್ಟದ ಕಳ್ಳತನ ನಡೆಸಲು ಯತ್ನಿಸಿದ್ದಾನೆ ಎಂದು ಆತನನ್ನು ಮಿಲ್ ನ ಹೊರಗಿರುವ ಮರವೊಂದಕ್ಕೆ ಕಟ್ಟಿಹಾಕಿ ಮನಬಂದಂತೆ ಹೊಡೆದಿದ್ದಾರೆ, ಗಂಭೀರ ಗಾಯಗೊಂಡಿದ್ದ ವ್ಯಕ್ತಿ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾನೆ.
ಸಾವನ್ನಪ್ಪಿದ್ದ ವ್ಯಕ್ತಿಯನ್ನು ತುವಕುಡಿಯ ಚಕ್ರವರ್ತಿ ಎಂದು ಗುರುತಿಸಲಾಗಿದೆ. ಚಕ್ರವರ್ತಿ ಅವರ ಕುತ್ತಿಗೆ, ಎದೆ, ಬಲಗೈ, ಬಲ ಮೊಣಕೈ, ಬಲ ಮೊಣಕಾಲಿಗೆ ಗಂಭೀರ ಗಾಯಗಳಾಗಿವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಅಲ್ಲದೆ ಘಟನೆ ಕುರಿತು ಹೇಳಿಕೆ ನೀಡಿದ ಪೊಲೀಸ್ ಅಧಿಕಾರಿ ಶನಿವಾರ ಬೆಳಿಗ್ಗೆ ಸಾ ಮಿಲ್ ನಲ್ಲಿ ಕಳ್ಳತನಕ್ಕೆ ಯತ್ನ ನಡೆಯುತ್ತಿದೆ ಎಂದು ಠಾಣೆಗೆ ಕರೆ ಬಂದಿದ್ದು ಕೂಡಲೇ ನಮ್ಮ ತಂಡ ಘಟನಾ ಸ್ಥಳಕ್ಕೆ ಬರುವಷ್ಟರಲ್ಲಿ ಅಲ್ಲಿನ ಕಾರ್ಮಿಕರು ವ್ಯಕ್ತಿಯನ್ನು ಮರಕ್ಕೆ ಕಟ್ಟಿ ಹಾಕಿ, ಸಿಕ್ಕ ಸಿಕ್ಕ ವಸ್ತುಗಳಿಂದ ಹೊಡೆದು ಕೊಲೆಮಾಡಿದ್ದಾರೆ ಎಂದು ಹೇಳಿದ್ದಾರೆ.
ಘಟನೆಗೆ ಸಂಬಂಧಿಸಿ ಪೊಲೀಸರು ಅಸ್ಸಾಂನ ಫೈಝಲ್ ಶೇಕ್ ಮತ್ತು ಮಫ್ಜುಲ್ ಹುಕ್ ಮತ್ತು ಸಾಮಿಲ್ ಮಾಲೀಕ ಧೀರೇಂದರ್ ವಿರುದ್ಧ ಐಪಿಸಿ ಸೆಕ್ಷನ್ 302 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಇದನ್ನೂ ಓದಿ: ಮಧ್ಯ ಪ್ರದೇಶ: ದೇವರ ಎದುರು ಕುಳಿತು ಪ್ರಾರ್ಥಿಸುತ್ತಲೇ ಪ್ರಾಣ ಬಿಟ್ಟ ಸಾಯಿ ಬಾಬಾ ಭಕ್ತ