Advertisement

ಕಾವೇರಿ ಮೇಲಿನ ಮೋಹ ಹೆಚ್ಚಿಸಿಕೊಳ್ಳುತ್ತಿರುವ ತಮಿಳುನಾಡು

02:56 AM Jul 06, 2021 | Team Udayavani |

ಕಾವೇರಿ ನದಿ ನೀರು ವಿಚಾರದಲ್ಲಿ ಸದಾ ಕರ್ನಾಟಕವೂ ಸೇರಿದಂತೆ ನೆರೆ ರಾಜ್ಯಗಳ ಜತೆ ಜಗಳವಾಡಿಕೊಂಡು ಬಂದಿರುವ ತಮಿಳುನಾಡು ಸರಕಾರಕ್ಕೆ ಮಾತುಕತೆ ಎಂಬುದು ರುಚಿಸಲ್ಲ. ಇದು ಈಗಲ್ಲ, ಮೊದಲಿನಿಂದಲೂ ಆ ರಾಜ್ಯದ ವಿಚಾರದಲ್ಲಿ ಹೇಳಬಹುದಾದ ಅತ್ಯಂತ ನಿಖರವಾದ ಮಾತು. ತೀರಾ ಉತ್ಪ್ರೇಕ್ಷೆಯಾಗಿ ಹೇಳುವುದಾದರೆ, ಜಗತ್ತಿನ ಯಾವುದೇ ಜಲವಿವಾದಗಳನ್ನು ಬೇಕಾದರೂ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬಹುದು. ಆದರೆ ತಮಿಳುನಾಡು ಮಾತ್ರ, ಕಾವೇರಿ ಎಂದ ಕೂಡಲೇ ಮೋಹಕ್ಕೆ ಬಿದ್ದವರಂತೆ ವರ್ತಿಸುತ್ತದೆ. ಹೀಗಾಗಿಯೇ ಈ ರಾಜ್ಯಕ್ಕೆ ಮಾತುಕತೆ ಎಂದಿಗೂ ಅಪ್ಯಾಯಮಾನವಾಗದು.

Advertisement

ಅಲ್ಲಿ ಸರಕಾರಗಳು ಬದಲಾದರೂ ಕಾವೇರಿ ವಿಚಾರದಲ್ಲಿನ ಧೋರಣೆ ಮಾತ್ರ ಬದಲಾಗಲ್ಲ. ಅಲ್ಲಿನ ರಾಜಕೀಯ ಪಕ್ಷಗಳ ರೆ ಎಲ್ಲ ವಿಷಯಗಳ ಸಂಬಂಧ ವೈರುಧ್ಯಗಳಿದ್ದರೂ ಕಾವೇರಿ ನದಿ ವಿಚಾರದಲ್ಲಿ ಮಾತ್ರ ಒಂದೇ ಧೋರಣೆ ಇರಿಸಿಕೊಂಡಿರುತ್ತವೆ. ಅಷ್ಟೇ ಅಲ್ಲ, ಕೆಲವೊಮ್ಮೆ ಕಾವೇರಿ ಜಲ ವಿವಾದವನ್ನೇ ಮುಂದಿಟ್ಟುಕೊಂಡು ಅಲ್ಲಿನ ಪಕ್ಷಗಳು ಚುನಾವಣೆಯಲ್ಲಿ ಗೆದ್ದು ಬಂದ ಉದಾಹರಣೆಗಳೂ ಇವೆ.

ಇಂಥ ಹೊತ್ತಿನಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು, ಮೇಕೆದಾಟು ಜಲಾಶಯದ ವಿಚಾರದಲ್ಲಿ ದ್ವಿಪಕ್ಷೀಯ ಮಾತುಕತೆ ಮೂಲಕವೇ ವಿವಾದ ಬಗೆಹರಿಸಿಕೊಳ್ಳೋಣ. ನೀವು ಈ ಯೋಜನೆಗೆ ವಿರೋಧ ಮಾಡಬೇಡಿ. ಇದರಿಂದ ಕೇವಲ ಕರ್ನಾಟಕಕ್ಕೆ ಮಾತ್ರವಲ್ಲ, ತಮಿಳುನಾಡಿಗೂ ಉಪಯೋಗವಾಗುತ್ತದೆ. ಬೆಂಗಳೂರಿಗೆ ಕುಡಿಯುವ ನೀರು ಪೂರೈಸಿದಂತೆಯೂ ಆಗುತ್ತದೆ. ಒಪ್ಪಿಗೆ ನೀಡಿ ಎಂದು ಪತ್ರ ಮುಖೇನ ಮನವಿ ಮಾಡಿದ್ದರು. ಆದರೆ ಪತ್ರ ತಲುಪಿದ ಮಾರನೇ ದಿನವೇ ಉತ್ತರ ಕೊಟ್ಟಿರುವ, ಇತ್ತೀಚೆಗಷ್ಟೇ ಸಿಎಂ ಆಗಿರುವ ಎಂ.ಕೆ. ಸ್ಟಾಲಿನ್‌ ಅವರು, ತಮಿಳುನಾಡಿನ ಎಂದಿನ ರಾಜಕಾರಣಿಗಳಂತೆ ಮೇಕೆದಾಟು ಯೋಜನೆಗೆ ಒಪ್ಪಿಗೆ ನೀಡಲು ಸಾಧ್ಯವೇ ಇಲ್ಲ. ಈ ವಿಚಾರದಲ್ಲಿ ನಮ್ಮ ನಿಲುವು ಬದಲಾವಣೆ ಮಾಡಿಕೊಳ್ಳಲ್ಲ ಎಂದು ಬಿಟ್ಟರು.

ವಿಚಿತ್ರವೆಂದರೆ, ಸಿಎಂ ಯಡಿಯೂರಪ್ಪ ಅವರು ನೀಡಿದ ಮಾತುಕತೆ ಆಹ್ವಾನದ ಬಗ್ಗೆ ಮಾತನ್ನೇ ಆಡದ ಸ್ಟಾಲಿನ್‌, ಕೇವಲ ಮೇಕೆ ದಾಟು ಬಗ್ಗೆ ಪ್ರಸ್ತಾವಿಸಿ, ಯೋಜನೆಯಿಂದ ತಮಿಳುನಾಡಿಗೆ ಅಪಾಯಗಳಿವೆ. ಹೀಗಾಗಿ ನಾವು ಯೋಜನೆಗೆ ಆಸ್ಪದ ಕೊಡುವುದಿಲ್ಲ ಎಂದರು. ಆದರೆ ಕರ್ನಾಟಕದ ಸಿಎಂ ಜತೆ ಒಂದು ಬಾರಿ ಕುಳಿತು ಮಾತನಾಡಿದ್ದರೆ, ಯೋಜನೆಯ ಸಾಧಕ-ಬಾಧಕಗಳ ಬಗ್ಗೆ ಚರ್ಚಿಸಬಹುದಿತ್ತು ಎಂಬ ಕನಿಷ್ಠ ಪ್ರಜ್ಞೆಯನ್ನೂ ತೋರಗೊಡಲಿಲ್ಲ.

ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಹೇಳಿದಂತೆ, ತಮಿಳುನಾಡಿನ ರಾಜಕೀಯ ಪಕ್ಷಗಳಿಗೆ ಕಾವೇರಿ ಕುರಿತ ರಾಜಕೀಯ ಬೇಕೇಬೇಕು. ಹೀಗಾಗಿಯೇ ಸಣ್ಣ ಪುಟ್ಟ ಸಂಗತಿಗಳನ್ನೂ ಹೊಸ ಸರಕಾರ ದೊಡ್ಡದು ಮಾಡುತ್ತಿದೆ. ನಾವಂತೂ ಕಾನೂನು ಸಮರ ಮುಂದುವರಿಸುತ್ತೇವೆ ಎಂದು ಹೇಳಿರುವುದು ಸರಿಯಾಗಿಯೇ ಇದೆ. ಅಂತೆಯೇ, ವಿಪಕ್ಷ ನಾಯಕರಾದ ಸಿದ್ದರಾಮಯ್ಯ ಅವರೂ, ಮೇಕೆದಾಟು ವಿಚಾರದಲ್ಲಿ ತಮಿಳುನಾಡಿನ ಸಮ್ಮತಿ ಕೇಳಬೇಕಾಗಿರಲಿಲ್ಲ. ಅದು ನಮ್ಮ ಯೋಜನೆ, ಮುಂದುವರಿಸಿಕೊಂಡು ಹೋದರೆ ಸಾಕು ಎಂದಿದ್ದಾರೆ. ಅದೇನೇ ಇರಲಿ, ವಿವಾದವೇ ಅಲ್ಲದ ಮೇಕೆದಾಟು ವಿಚಾರವನ್ನು ವಿವಾದವನ್ನಾಗಿ ಮಾಡಲು ಹೊರಟಿರುವುದರ ಹಿಂದೆ ತಮಿಳುನಾಡು ಸರಕಾರದ ರಾಜಕೀಯ ದುರುದ್ದೇಶವೇ ಇದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next