ಚೆನ್ನೈ: ಸಣ್ಣ ವಯಸ್ಸಿನಲ್ಲೇ ಖ್ಯಾತ ಕಿರುತೆರೆ (TV Actor) ನಟರೊಬ್ಬರು ಇಹಲೋಕ ತ್ಯಜಿಸಿದ್ದು, ಅವರ ನಿಧನದ ಸುದ್ದಿ ಕೇಳಿ ತಮಿಳು ಕಿರುತೆರೆ ಲೋಕ ಶಾಕ್ ಆಗಿದೆ.
ಜನಪ್ರಿಯ ತಮಿಳು ಕಿರುತೆರೆ ನಟ ಯುವನ್‌ರಾಜ್ ನೇತ್ರನ್ (45) ನಿಧನರಾಗಿದ್ದಾರೆ. ಕ್ಯಾನ್ಸರ್‌ನೊಂದಿಗೆ ದೀರ್ಘಕಾಲದವರೆಗೂ ಹೋರಾಡಿದ ಅವರು ಮಂಗಳವಾರ (ಡಿ.3ರಂದು) ಕೊನೆಯುಸಿರೆಳೆದಿದ್ದಾರೆ. ಕಳೆದ 6 ತಿಂಗಳಿನಿಂದ ಅವರು ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದರು.
ನಿಧನಕ್ಕೂ ಮುನ್ನ ಅವರು ಹಾಕಿದ ಕೊನೆಯ ಪೋಸ್ಟ್ ವೈರಲ್ ಆಗಿದೆ. ತಮ್ಮ ಎರಡನೇ ಮಗಳು ಮನೆಯಲ್ಲಿ ತಯಾರಿಸಿದ ಬಿಸ್ಕೆಟ್ ಗಳ ಫೋಟೋವನ್ನು ಅವರು ಹಂಚಿಕೊಂಡಿದ್ದರು.
ಕಿರುತೆರೆ ಲೋಕ..: ತಮಿಳು ಕಿರುತೆರೆಯಲ್ಲಿ ಅಪಾರ ಅಭಿಮಾನಿಗಳ ಪ್ರೀತಿಯನ್ನು ಸಂಪಾದಿಸಿದ್ದ ನೇತ್ರನ್ ( Yuvanraj Nethran) ಬಾಲ ಕಲಾವಿದರಾಗಿ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದರು. 25 ವರ್ಷಗಳ ಕಾಲ ಸಣ್ಣ ಪರದೆಯಲ್ಲಿ ಅವರು ನಟಿಸಿದ್ದರು.
ʼಸಿಂಗಪ್ಪೆನ್ನೆʼ , ʼರಂಜಿತಾಮೆʼ ಅಂತಹ ಧಾರಾವಾಹಿಗಳು ಅವರಿಗೆ ಜನಪ್ರಿಯತೆಯನ್ನು ತಂದುಕೊಟ್ಟಿತ್ತು. ಧಾರಾವಾಹಿಗಳು ಮಾತ್ರವಲ್ಲದೆ ʼಮಸ್ತಾನ ಮಸ್ತಾನʼ, ʼಬಾಯ್ಸ್ vs ಗರ್ಲ್ಸ್ ಸೀಸನ್ -2ʼ, ʼಸೂಪರ್ ಕುಟುಂಬಮ್ʼ ಸೀಸನ್ 1 ಮತ್ತು 2, ಜೋಡಿ ನಂ.1 ನಂತಹ ರಿಯಾಲಿಟಿ ಶೋಗಳಲ್ಲೂ ಕಾಣಿಸಿಕೊಂಡಿದ್ದರು.
ನೇತ್ರನ್ ಪತ್ನಿ, ಇಬ್ಬರು ಹೆಣ್ಣುಮಕ್ಕಳನ್ನು ಅಗಲಿದ್ದಾರೆ. ನೇತ್ರನ್ ಅವರ ಪತ್ನಿ ದೀಪಾ ಕೂಡ ಕಿರುತೆರೆಯಲ್ಲಿ ಜನಪ್ರಿಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಇದೇ ವರ್ಷದ ಏಪ್ರಿಲ್‌ನಲ್ಲಿ 24ನೇ ವಿವಾಹ ವಾರ್ಷಿಕೋತ್ಸವನ್ನು ಇಬ್ಬರು ಆಚರಿಸಿಕೊಂಡಿದ್ದರು.
ನೇತ್ರನ್ ನಿಧನಕ್ಕೆ ತಮಿಳು ಕಿರುತೆರೆ ಲೋಕ ಕಂಬನಿ ಮಿಡಿದಿದೆ.