ಚೆನ್ನೈ: ಎಲ್ ಟಿಟಿಇ ಮುಖ್ಯಸ್ಥ ವೇಲುಪಿಳ್ಳೈ ಪ್ರಭಾಕರನ್ ಕೊನೆಯುಸಿರೆಳೆದಿರುವುದಾಗಿ ಶ್ರೀಲಂಕಾ ಸರ್ಕಾರ 14 ವರ್ಷಗಳ ಹಿಂದೆ ಘೋಷಿಸಿತ್ತು. ಆದರೆ ಇದೀಗ ಮರುಮಲಾರ್ಚಿ ದ್ರಾವಿಡ ಮುನ್ನೇತ್ರಾ ಕಳಗಂ(ಎಂಡಿಎಂಕೆ) ಪ್ರಧಾನ ಕಾರ್ಯದರ್ಶಿ ವೈಕೋ ಅವರ ಪ್ರಕಾರ ತಮಿಳ್ ಟೈಗರ್ ನಾಯಕ ಈಗಲೂ ಜೀವಂತವಾಗಿರುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ:BJP ರಾಜ್ಯಾಧ್ಯಕ್ಷ ವಿಜಯೇಂದ್ರ ಹೆಸರು ದುರ್ಬಳಕೆ: ಉದ್ಯಮಿಗಳಿಗೆ ವಂಚಿಸುತ್ತಿದ್ದವನ ಬಂಧನ
ಭಾನುವಾರ (ನವೆಂಬರ್ 26) ವೈಕೋ ಅವರು, ಕೇಕ್ ಕತ್ತರಿಸುವ ಮೂಲಕ ಪ್ರಭಾಕರನ್ ಹುಟ್ಟುಹಬ್ಬ ಆಚರಿಸಿದ್ದಾರೆ. ನಮ್ಮ ನಂಬಿಕೆಯ ಪ್ರಕಾರ ವೇಲುಪಿಳ್ಳೈ ಪ್ರಭಾಕರನ್ ಈಗಲೂ ಜೀವಂತವಾಗಿದ್ದಾರೆ. ಹಾಗಾಗಿ ನಾವು ಹಟ್ಟುಹಬ್ಬವನ್ನು ಆಚರಿಸುತ್ತಿದ್ದೇವೆ. ಪ್ರಭಾಕರನ್ ವಿಷಯದ ಕುರಿತು ನೆಡುಮಾರನ್ ಮತ್ತು ಕಾಸಿ ಆನಂದನ್ ಅವರು ಸುಳ್ಳು ಹೇಳಲಾರರು ಎಂದು ವೈಕೋ ತಿಳಿಸಿರುವುದಾಗಿ ವರದಿಯಾಗಿದೆ.
ಹಿರಿಯ ರಾಜಕಾರಣಿ ನೆಡುಮಾರನ್ ಅವರು ಕಳೆದ ಫೆಬ್ರವರಿಯಲ್ಲಿ, ಪ್ರಭಾಕರನ್ ಈಗಲೂ ಜೀವಂತವಾಗಿದ್ದು, ಆರೋಗ್ಯವಂತನಾಗಿದ್ದಾನೆ. ಶೀಘ್ರವೇ ಸಾರ್ವಜನಿಕವಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಸಮಾವೇಶವೊಂದರಲ್ಲಿ ಮಾತನಾಡುತ್ತ ಬಹಿರಂಗಪಡಿಸಿದ್ದರು.
ಆ ನಿಟ್ಟಿನಲ್ಲಿ ಪ್ರಭಾಕರನ್ ಜೀವಂತವಾಗಿದ್ದಾನೆ ಎಂಬುದನ್ನು ತಿಳಿಸಲು ಸಂತೋಷ ಪಡುತ್ತೇನೆ. ಎಲ್ಲಾ ಊಹಾಪೋಹ, ಪ್ರಶ್ನೆಗಳಿಗೂ ಉತ್ತರ ದೊರಕಲಿದೆ ಎಂದ ವೈಕೋ, ಒಂದು ವೇಳೆ ಪ್ರಭಾಕರನ್ ಸಾವನ್ನಪ್ಪಿದ್ದರೆ ಅಧಿಕೃತ ದಾಖಲೆಯನ್ನು ಶ್ರೀಲಂಕಾ ಸರ್ಕಾರ ಯಾಕೆ ಬಿಡುಗಡೆ ಮಾಡುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.