ಚೆನ್ನೈ:ಭಾರತದಲ್ಲಿ ಒಮಿಕ್ರಾನ್ ಪ್ರಕರಣ ಪತ್ತೆಯಾದ ಹಿನ್ನೆಲೆಯಲ್ಲಿ ಲಸಿಕೆ ಪಡೆಯದ ಜನರಿಗೆ ಮುಂದಿನ ವಾರದಿಂದ ಮಾಲ್ ಗಳು, ಹೋಟೆಲ್, ಶಾಪಿಂಗ್ ಕಾಂಪ್ಲೆಕ್ಸ್ ಹಾಗೂ ಇತರ ಸಾರ್ವಜನಿಕ ಸ್ಥಳಗಳಲ್ಲಿ ಪ್ರವೇಶಕ್ಕೆ ಅವಕಾಶ ನೀಡುವುದಿಲ್ಲ ಎಂದು ತಮಿಳುನಾಡಿನ ಮದುರೈ ಜಿಲ್ಲಾಡಳಿತ ಶನಿವಾರ(ಡಿಸೆಂಬರ್ 04) ಘೋಷಿಸಿದೆ.
ಇದನ್ನೂ ಓದಿ:ಇಂದು ಮತ್ತು ನಾಳೆ ಬೆಂಗಳೂರು ಮೆಟ್ರೋ ನೇರಳೆ ಮಾರ್ಗದ ಸೇವೆ ವ್ಯತ್ಯಯ
ಸಾರ್ವಜನಿಕರಿಗೆ ಒಂದು ವಾರಗಳ ಕಾಲಾವಕಾಶ ನೀಡಲಾಗುವುದು, ಈ ಸಂದರ್ಭದಲ್ಲಿ ಕನಿಷ್ಠ ಒಂದು ಕೋವಿಡ್ ಲಸಿಕೆಯನ್ನಾದರೂ ಪಡೆದಿರಬೇಕು ಎಂದು ಜಿಲ್ಲಾಡಳಿತ ತಿಳಿಸಿದೆ.
ಒಂದು ವಾರದ ಕಾಲಾವಧಿಯಲ್ಲಿ ಯಾರು ಒಂದೂ ಕೋವಿಡ್ ಡೋಸ್ ಅನ್ನು ಪಡೆದಿಲ್ಲವೋ ಅವರಿಗೆ ಹೋಟೆಲ್, ಶಾಪಿಂಗ್ ಮಾಲ್ಸ್ ಹಾಗೂ ಇತರ ವಾಣಿಜ್ಯ ಸಂಕೀರ್ಣಗಳಿಗೆ ಪ್ರವೇಶಿಸಲು ಅನುಮತಿ ನೀಡುವುದಿಲ್ಲ ಎಂದು ಮದುರೈ ಕಲೆಕ್ಟರ್ ಅನೀಶ್ ಶೇಖರ್ ಎಎನ್ ಐಗೆ ತಿಳಿಸಿದ್ದಾರೆ.
ಮದುರೈಯಲ್ಲಿ ಸುಮಾರು 3 ಲಕ್ಷ ಮಂದಿ ಒಂದೂ ಕೋವಿಡ್ ಲಸಿಕೆಯನ್ನು ಪಡೆದಿಲ್ಲ ಎಂದು ಅನೀಶ್ ಹೇಳಿದರು. ಮದುರೈ ಜಿಲ್ಲೆಯಲ್ಲಿ ಶೇ.71.6ರಷ್ಟು ಮಂದಿ ಮೊದಲ ಕೋವಿಡ್ ಡೋಸ್ ಅನ್ನು ಪಡೆದಿದ್ದು, ಕೇವಲ ಶೇ.32.8ರಷ್ಟು ಮಂದಿ ಎರಡು ಕೋವಿಡ್ ಲಸಿಕೆಯನ್ನು ಪಡೆದಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಕರ್ನಾಟಕದಲ್ಲಿ ಎರಡು ಒಮಿಕ್ರಾನ್ ಪ್ರಕರಣ ಪತ್ತೆಯಾದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಎರಡು ಡೋಸ್ ಲಸಿಕೆ ಪಡೆಯುವುದು ಕಡ್ಡಾಯ ಎಂದು ಹೇಳಿದೆ. ಅಲ್ಲದೇ ಮಾಲ್, ಸಿನಿಮಾ ಥಿಯೇಟರ್ ಗೆ ತೆರಳಲು ಎರಡು ಡೋಸ್ ಅನ್ನು ಕಡ್ಡಾಯವಾಗಿ ಪಡೆದಿರಬೇಕು ಎಂದು ಕರ್ನಾಟಕ ಸರ್ಕಾರ ಮಾರ್ಗಸೂಚಿ ಹೊರಡಿಸಿದೆ.